Advertisement

ಮಂಗಳೂರು: 7 ಅನಧಿಕೃತ ವೀಸಾ ಏಜನ್ಸಿಗಳ ವಿರುದ್ಧ ಕೇಸು ದಾಖಲು

01:13 AM Sep 29, 2019 | Team Udayavani |

ಮಂಗಳೂರು: ವಿದೇಶಿ ಉದ್ಯೋಗಕ್ಕಾಗಿ ವೀಸಾ ಮಾಡಿಸಿ ಕೊಡುವ ಅನಧಿಕೃತ ಕೇಂದ್ರಗಳ (ಏಜನ್ಸಿ) ವಿರುದ್ಧ ಕ್ರಮ ಕೈಗೊಳ್ಳಲು ಮಂಗಳೂರು ಪೊಲೀಸರು ಆರಂಭಿಸಿದ್ದು, ಶನಿವಾರ ನಗರದ 7 ಕೇಂದ್ರಗಳಿಗೆ ದಾಳಿ ಮಾಡಿ ಕೇಸು ದಾಖಲಿಸಿಕೊಂಡಿದ್ದಾರೆ.

Advertisement

ವಿದೇಶಾಂಗ ವ್ಯವಹಾರ ಇಲಾಖೆಯ ಪರವಾನಿಗೆ ಹೊಂದಿರುವ ವೀಸಾ ಏಜನ್ಸಿಗಳು ಮಾತ್ರ ಅಧಿಕೃತ ಕಚೇರಿಗಳಾಗಿದ್ದು, ಈ ಇಲಾಖೆಯ ಪರವಾನಿಗೆ ಇಲ್ಲದವು ಅನಧಿಕೃತವಾಗಿವೆ. ಅಂಥವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ವಿದೇಶಾಂಗ ಇಲಾಖೆಯಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಆರಂಭಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ಅವರು ತಿಳಿಸಿದ್ದಾರೆ.

ಶನಿವಾರ ನಗರದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿರುವ ವೀಸಾ ಏಜನ್ಸಿಗಳಿಗೆ ಪೊಲೀಸರು ದಾಳಿ ಮಾಡಿ ಪರಿಶೀಲಿಸಿದ್ದು, ಈ ಸಂದರ್ಭ 7 ಅನಧಿಕೃತ ವೀಸಾ ಏಜನ್ಸಿಗಳು ಪತ್ತೆಯಾಗಿವೆ.

ಇತ್ತೀಚೆಗೆ ನಗರದ ಮಾಣಿಕ್ಯ ಅಸೋಸಿಯೇಟ್ಸ್‌ ಮೂಲಕ ಕುವೈಟ್‌ಗೆ ತೆರಳಿದ್ದ ಮಂಗಳೂರಿನ 34 ಮಂದಿ ವೀಸಾದಲ್ಲಿ ನಮೂದಿಸಿದ್ದ ಉದ್ಯೋಗ ಸಿಗದೆ ಅಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಬಳಿಕ ಸಂಬಳವೂ ಇಲ್ಲದೆ ಬಹಳ ಕಷ್ಟಪಟ್ಟು ಊರಿಗೆ ಹಿಂದಿರುಗಿದ್ದರು. ಈ ಕುವೈಟ್‌ ಸಂತ್ರಸ್ತರ ನಿಯೋಗ ಶುಕ್ರವಾರ ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿ ತಾವು ಮಾಣಿಕ್ಯ ಅಸೋಸಿಯೇಟ್ಸ್‌ಗೆ ಪಾವತಿಸಿದ್ದ 75,000 ರೂ. ಗಳನ್ನು ಮರಳಿಸಲು ವ್ಯವಸ್ಥೆ ಮಾಡಬೇಕೆಂದು ಮನವಿ ಸಲ್ಲಿಸಿತ್ತು. ಅದರ ಬೆನ್ನಿಗೇ ಶನಿವಾರ ನಗರದ ಅನಧಿಕೃತ ವೀಸಾ ಏಜನ್ಸಿಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಅಧಿಕೃತ ಏಜನ್ಸಿಗಳನ್ನೇ ಬಳಸಿ: ಕಮಿಷನರ್‌
ವಿದೇಶ ಉದ್ಯೋಗಕ್ಕೆ ತೆರಳುವವರು ವೀಸಾ ಮತ್ತಿತರ ಪ್ರಕ್ರಿಯೆಗಳಿಗೆ ಅಧಿಕೃತ ಏಜನ್ಸಿಗಳಿಗೆ ಮಾತ್ರ ಹೋಗಬೇಕು ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ. ವೀಸಾ ಏಜನ್ಸಿಗಳು ಅಧಿಕೃತವೇ, ವಿದೇಶಾಂಗ ಇಲಾ ಖೆಯ ಪರಿವಾನಿಗೆ ಹೊಂದಿವೆಯೇ ಎಂಬುದನ್ನು ಪರಿಶೀಲಿಸಿ ಮುಂದುವರಿಯಬೇಕು ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next