ಕನ್ನಡದಲ್ಲಿ ಈಗಂತೂ ವಿಭಿನ್ನ ಶೀರ್ಷಿಕೆ ಇಟ್ಟುಕೊಂಡು ಚಿತ್ರಗಳು ಬರುತ್ತಲೇ ಇವೆ. ಅದರಲ್ಲೂ ಹೊಸಬರೇ ಅಂಥದ್ದೊಂದು ಹೊಸ ಪ್ರಯೋಗಕ್ಕೆ ಇಳಿಯುತ್ತಿದ್ದಾರೆ. ಈಗ ಆ ಸಾಲಿಗೆ “ಮಂಗಳವಾರ ರಜಾದಿನ’ ಎಂಬ ಚಿತ್ರವೂ ಸೇರಿದೆ. ಈ ಚಿತ್ರದ ಮೂಲಕ ಚಂದನ್ ಆಚಾರ್ ನಾಯಕರಾಗುತ್ತಿದ್ದಾರೆ. ಈ ಚಂದನ್ ಇದಕ್ಕೂ ಮುನ್ನ “ಕಿರಿಕ್ ಪಾರ್ಟಿ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಈಗ ಮೊದಲ ಬಾರಿಗೆ ಅವರು ಹೀರೋ ಆಗುತ್ತಿದ್ದಾರೆ.
ಇನ್ನು ಅವರಿಗೆ ನಾಯಕಿಯಾಗಿ “ಬಿಗ್ ಬಾಸ್’ ಖ್ಯಾತಿಯ ಲಾಸ್ಯ ನಾಗರಾಜ್ ನಟಿಸುತ್ತಿದ್ದಾರೆ. “ಮಂಗಳವಾರ ರಜಾದಿನ’ ಚಿತ್ರಕ್ಕೆ ಯುವಿನ್ ನಿರ್ದೇಶಕರು. ಇವರಿಗೂ ಇದು ಮೊದಲ ನಿರ್ದೇಶನದ ಚಿತ್ರ. ಕಥೆ,ಚಿತ್ರಕಥೆ, ಸಂಭಾಷಣೆ ಇವರದೇ. ತ್ರಿವರ್ಗ ಫಿಲ್ಮ್ಸ್ ಬ್ಯಾನರ್‌ನಲ್ಲಿ ಟೀಮ್ ತ್ರಿವರ್ಗ ನಿರ್ಮಿಸುತ್ತಿರುವ ಈ ಚಿತ್ರ ಈಗಾಗಲೇ ಶುರುವಾಗಿದ್ದು, ಮೊದಲ ಹಂತದ ಚಿತ್ರೀಕರಣವೂ ಮುಗಿದಿದೆ.
ಪಕ್ಕಾ ಹಾಸ್ಯ ಪ್ರಧಾನ ಚಿತ್ರವಾಗಿರುವ ಈ ಚಿತ್ರದ ನಿರ್ದೇಶಕ ಯುವಿನ್ ಈ ಹಿಂದೆ ಯೋಗರಾಜ್‌ಭಟ್ ಮತ್ತು ಗಡ್ಡ ವಿಜಿ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದೇ ಅನುಭವದ ಮೇಲೆ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಯೂಥ್‌ಫುಲ್ ಸಿನಿಮಾ ಆಗಿದ್ದು, ಪಕ್ಕಾ ಹಾಸ್ಯಪ್ರಧಾನವುಳ್ಳ ಕಥೆಯಾಗಿದ್ದು, ನಾಯಕನ ಜೀವನದ ಸುತ್ತ ಕಥೆ ಸಾಗಲಿದೆ ಎಂಬುದು ಚಿತ್ರತಂಡದ ಹೇಳಿಕೆ.
ಚಿತ್ರಕ್ಕೆ ಉದಯ್‌ಲೀಲಾ ಅವರು ಛಾಯಾಗ್ರಾಹಕರು. ಪ್ರಚೋತ್ ಡಿಸೋಜ ಅವರ ಸಂಗೀತವಿದೆ. ಜಯಂತ್ ಕಾಯ್ಕಿಣಿ, ಚಂದನ್ ಶೆಟ್ಟಿ, ಯೋಗರಾಜ್ ಭಟ್ ಚಿತ್ರಕ್ಕೆ ಗೀತೆಗಳನ್ನು ರಚಿಸಿದ್ದಾರೆ. ಮಧುಕುಮಾರ್ ಅವರು ಚಿತ್ರಕ್ಕೆ ಸಂಕಲನ ಮಾಡಿದರೆ, ಸುಧೀರ್ ನಿರ್ಮಾಣ ನಿರ್ವಹಣೆ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳುತ್ತಿದ್ದಾರೆ. ಈಗ ಬೆಂಗಳೂರು ಸುತ್ತಮುತ್ತಲಿನ ತಾಣಗಳಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ.