Advertisement

ಮಂಗಲ್ಪಾಡಿ : ಬೇಕೂರು ಕುಟುಂಬ ಕ್ಷೇಮ ಕೇಂದ್ರಕ್ಕೆ ಆರೈಕೆ ಬೇಕಾಗಿದೆ

12:07 AM May 08, 2019 | sudhir |

ಕುಂಬಳೆ: ಇದೊಂದು ಪಾಳುಬಿದ್ದ ಅನಾಥ ಕಟ್ಟಡವಲ್ಲ. ಮಂಗಲ್ಪಾಡಿ ಗ್ರಾ. ಪಂ. ಅಧೀನದ ಬೇಕೂರು ಕುಟುಂಬ ಕ್ಷೇಮ ಕೇಂದ್ರ ಕಟ್ಟಡವಾಗಿದೆ.ಈ ಕಟ್ಟಡ ಕಟ್ಟಿದ ಬಳಿಕ ಇದರ ದುರಸ್ತಿಯತ್ತ ಸಂಬಂಧಪಟ್ಟವರು ಗಮನ ಹರಿಸದೆ ಜೀರ್ಣಗೊಂಡಿದೆ.

Advertisement

ಸದ್ಯ ಕಟ್ಟಡದೊಳಗಿರುವ ಕೇವಲ ಒಂದು ಕೊಠಡಿಯಲ್ಲಿ ಮಾತ್ರ ಕುಟುಂಬ ಕೇÒಮ ಕೇಂದ್ರ ಕಾರ್ಯಾಚರಿಸುತ್ತಿದೆ. ಇಲ್ಲಿನ ಆರೋಗ್ಯ ಪರಿಚಾರಕಿ ಈ ಶಿಥಿಲ ಕಟ್ಟಡದಲ್ಲಿ ಭಯದಲ್ಲೇ ಬೆಳಗ್ಗಿನಿಂದ ಸಂಜೆ ತನಕ ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿರುವರು. ಹೆಚ್ಚಿನೆಲ್ಲ ಕುಟುಂಬ ಕ್ಷೇಮ ಕೇಂದ್ರ ಕಟ್ಟಡಗಳ ಒಂದು ಭಾಗದಲ್ಲಿ ಇಲ್ಲಿನ ನೌಕರರಿಗೆ ವಾಸಿಸಲು ವ್ಯವಸ್ಥೆ ಇರುವುದು. ಆದರೆ ಈ ಕಟ್ಟಡದ ಒಂದು ಭಾಗದ ಅಡುಗೆ ಕೋಣೆಯ ಮತ್ತು ನೌಕರರ ವಾಸ ಕಟ್ಟಡದ ಭಾಗದ ಮಾಡು ಕುಸಿದಿದೆ. ಕಿಟಿಕಿ ಬಾಗಿಲುಗಳು ಮುರಿದಿವೆ. ಕಟ್ಟಡದೊಳಗೆ ಕಸಕಡ್ಡಿಗಳು ತುಂಬಿ ಗಬ್ಬುವಾಸನೆ ಬರುತ್ತಿದೆ.

ಕಟ್ಟಡದ ಆವರಣ ಕುಸಿದು ಬಿದ್ದಿದೆ. ರಾತ್ರಿ ಕಾಲದಲ್ಲಿ ಈ ಕೇಂದ್ರದ ಕಟ್ಟಡ ಸಮಾಜದ್ರೋಹಿಗಳ ತಾಣವಾಗಿದೆ. ಗ್ರಾಮೀಣ ಪ್ರದೇಶದ ಜನರ ಪ್ರಾಥಮಿಕ ಆರೋಗ್ಯದ ಚಿಕಿತ್ಸೆಗೆ ಈ ಕೇಂದ್ರ ಬಹಳಷ್ಟು ಸಹಕಾರಿಯಾಗಿದೆ. ಆದರೆ ಇಲ್ಲಿ ಶೌಚಾಲಯವಿಲ್ಲ. ನೀರಿನ ವ್ಯವಸ್ಥೆ ಇಲ್ಲ. ಆಸನದ ವ್ಯವಸ್ಥೆ ಇಲ್ಲ. ಅಗತ್ಯಕ್ಕೆ ಹತ್ತಿರದ ಸರಕಾರಿ ಶಾಲೆಯಿಂದ ನೀರು ತರಬೇಕಾಗಿದೆ.

ಇಷ್ಟೆಲ್ಲ ಅವ್ಯವಸ್ಥೆ ಇದ್ದರೂ ಗ್ರಾಮ ಪಂಚಾಯತ್‌ ಇನ್ನೂ ನಿಧಿಯ ಕೊರತೆಯ ನೆಪ ಒಡ್ಡಿದೆ. ಕಟ್ಟಡ ದುರಸ್ತಿಗೆ ಹೇರಳ ನಿಧಿ ಬೇಕಾಗಿದೆ ಎಂಬುದಾಗಿ ಸಬೂಬು ಹೇಳುತ್ತಿದೆ.ಈ ಕಟ್ಟಡವನ್ನು ದುರಸ್ತಿ ಪಡಿಸುವ ಸ್ಥಿತಿಯಲ್ಲಿಲ್ಲ.ಪೂರ್ತಿ ಕೆಡವಿ ನೂತನ ಕಟ್ಟಡ ನಿರ್ಮಿಸಬೇಕಾಗಿದೆ.

ಆದುದರಿಂದ ಧಾರಾಳ ಆದಾಯವಿರುವ ಗ್ರಾಮ ಪಂಚಾಯತ್‌ ವತಿಯಿಂದ ಕಟ್ಟಡ ಧರಾಶಾಯಿಯಾಗುವ ಮುನ್ನ ಈ ಕುಟುಂಬ ಕೇÒಮ ಕೇಂದ್ರದ ಕೇÒಮದತ್ತ ಗಮನ ಹರಿಸಿ ಸಂಭಾವ್ಯ ದುರಂತವನ್ನು ತಪ್ಪಿಸಬೇಕಾಗಿದೆ.

Advertisement

ಆಡಳಿತದ ನಿರ್ಲಕ್ಷ್ಯ
ಕುಟುಂಬ ಕ್ಷೇಮ ಕೇಂದ್ರ ಕಟ್ಟಡದ ನವೀಕರಣಕ್ಕೆ ಗ್ರಾ. ಪಂ.ನ ಆಡಳಿತದ ಗಮನಕ್ಕೆ ತಂದಿರುವೆ. ಈ ಭಾಗಕ್ಕೆ ಜಿಲ್ಲಾಧಿಕಾರಿಯವರು ಆಗಮಸಿದಾಗ ಕಟ್ಟಡಕ್ಕೆ ನಿಧಿ ಮಂಜೂರು ಗೊಳಿಸಲು ಮನವಿ ಸಲ್ಲಿಸಿರುವೆ. ಆದರೆ ನಿಧಿ ಕೊರತೆ ನೆಪದಲ್ಲಿ ಆಡಳಿತ ನಿರ್ಲಕ್ಷ್ಯ ತಾಳಿದೆ.
-ಉಮೇಶ್‌ ಶೆಟ್ಟಿ ಬಿ. ಸದಸ್ಯರು ಮಂಗಲ್ಪಾಡಿ ಗ್ರಾಮ ಪಂಚಾಯತ್‌

ವಾಸಕ್ಕೆ ಅಯೋಗ್ಯ ಕಟ್ಟಡ
ಕಟ್ಟಡದಲ್ಲಿ ಕರ್ತವ್ಯಕ್ಕೆ ನಿತ್ಯ ಹಾಜರಾಗುವೆ.ಕಟ್ಟಡದ ದುರವಸ್ಥೆಯ ಕುರಿತು ಸಂಬಂಧ ಪಟ್ಟವರ ಗಮನಕ್ಕೆ ತಂದಿರುವೆ. ಇಲ್ಲಿ ವಾಸಿಸಲು ಅಸಾಧ್ಯವಾಗಿದ್ದು ಮಂಗಲ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಕಟ್ಟಡದಲ್ಲಿ ವಾಸಿಸುವೆ. ಸರಕಾರಿ ಉದ್ಯೋಗಿಯಾಗಿದ್ದು ಹೆಚ್ಚಿನ ವಿಚಾರ ಹೇಳುವಂತಿಲ್ಲ
-ಶೈಲಜಾ, ಇಲ್ಲಿನ ಆರೋಗ್ಯ ನೌಕರೆ

  • ಅಚ್ಯುತ ಚೇವಾರ್‌
Advertisement

Udayavani is now on Telegram. Click here to join our channel and stay updated with the latest news.

Next