Advertisement

ಮಂಗಳಾ ಈಜುಕೊಳ ಭರ್ತಿ

06:31 AM Mar 04, 2019 | Team Udayavani |

ಮಹಾನಗರ: ನೂತನವಾಗಿ ನವೀಕೃತಗೊಂಡ ಮಂಗಳಾ ಈಜುಕೊಳ ಮಾರ್ಚ್‌ನಿಂದ ಸಾರ್ವಜನಿಕರ ಉಪಯೋ ಗಕ್ಕೆ ಲಭ್ಯವಾಗಿದ್ದು, ಪ್ರಾರಂಭಗೊಂಡ ಎರಡು ದಿನಗಳಲ್ಲೇ 500ಕ್ಕೂ ಹೆಚ್ಚಿನ ಮಂದಿ ಆಗಮಿಸಿದ್ದು, ಸುಮಾರು 1 ಲಕ್ಷ
ರೂ. ಗೂ ಮಿಕ್ಕಿ ಶುಲ್ಕ ಸಂಗ್ರಹವಾಗಿದೆ.

Advertisement

ಈಜುಕೊಳದ ನವೀಕರಣ ಕಾಮಗಾರಿಗೆಂದು ಆರು ತಿಂಗಳಿನಿಂದ ಈಜುಕೊಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮಾರ್ಚ್‌ 1ರಿಂದ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿದ್ದು, ಮೊದಲನೇ ದಿನ 117 ಮಂದಿ ವಿದ್ಯಾರ್ಥಿಗಳು, 26 ಮಂದಿ ಸಾರ್ವಜನಿಕರು ಆಗಮಿಸಿದ್ದು, 88,540 ರೂ. ಸಂಗ್ರಹವಾಗಿದೆ. ಎರಡನೇ ದಿನ 248 ಮಂದಿ ವಿದ್ಯಾರ್ಥಿಗಳು, 51 ಮಂದಿ ಸಾರ್ವಜನಿಕರು ಆಗಮಿಸಿದ್ದಾರೆ. ಇದರಿಂದ 32,401 ರೂ. ಸಂಗ್ರಹವಾಗಿದೆ. ಒಟ್ಟಾರೆಯಾಗಿ ಎರಡೂ ದಿನಗಳಲ್ಲಿ ಸುಮಾರು 1 ಲಕ್ಷ ರೂ.ಗೂ ಹೆಚ್ಚಿನ ಹಣ ಸಂಗ್ರಹವಾಗಿವೆ. 


3 ತಿಂಗಳಿನ ಪಾಸಿಗೆ ಬೇಡಿಕೆ
ಈಜುಕೊಳ ಬೆಳಗ್ಗೆ 5 ಗಂಟೆಯಿಂದ ಪ್ರಾರಂಭವಾದ ಮೊದಲ ಪಾಳಿ ತಲಾ ಮುಕ್ಕಾಲು ಗಂಟೆಯಂತೆ 9.45ರ ತನಕ ಐದು ಪಾಳಿ ನಡೆಯುತ್ತದೆ. ಬಳಿಕ ಸಂಜೆ 3.45ಕ್ಕೆ ಪ್ರಾರಂಭವಾಗಿ ರಾತ್ರಿ 9.45ರ ತನಕ ಐದು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಎರಡು ಪಾಳಿಯ ಮಧ್ಯ 15 ನಿಮಿಷಗಳ ಬಿಡುವಿದ್ದು, ಪ್ರತಿ ಸೋಮವಾರ ಈಜುಕೊಳ ಪ್ರವೇಶಕ್ಕೆ ರಜೆ ಇದೆ. ಮಂಗಳಾ ಈಜುಕೊಳ ಸಂಸ್ಥೆಯ ಅಧಿಕಾರಿಗಳು ಹೇಳುವ ಪ್ರಕಾರ ‘ಈಜುಕೊಳ ಪ್ರವೇಶಕ್ಕೆ 1 ತಿಂಗಳು, 3 ತಿಂಗಳು, 6 ತಿಂಗಳು ಮತ್ತು 1 ವರ್ಷದವರೆಗಿನ ಪಾಸ್‌ ನಿಗದಿ ಮಾಡಿದ್ದು, ಮೂರು ತಿಂಗಳಿನ ಪಾಸಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ.

ಈಗಾಗಲೇ ಒಟ್ಟಾರೆಯಾಗಿ 50ಕ್ಕೂ ಹೆಚ್ಚು ಪಾಸ್‌ಗಳನ್ನು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಖರೀದಿ ಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬೇಸಗೆ ರಜೆಯ ಸಮಯದಲ್ಲಿ ಮಂಗಳೂರಿನ ಮಂಗಳಾ ಈಜು ಕೊಳದಲ್ಲಿ ಸಮ್ಮರ್‌ ಕ್ಯಾಂಪ್‌ ಗಳು ನಡೆಯುತ್ತದೆ. ಎರಡು ವರ್ಷಗಳ ಹಿಂದೆ ನೀರಿನ ಅಭಾವ, ಕಳೆದ ವರ್ಷ ಈಜುಕೊಳದ ಪಿಲ್ಟರ್‌ ಸಮಸ್ಯೆಯಿಂದಾಗಿ ಸಮ್ಮರ್‌ ಕ್ಯಾಂಪ್‌ ನಿಗದಿತ ರೀತಿಯಲ್ಲಿ ನಡೆಯಲಿಲ್ಲ. ಇದೀಗ ನೂತನ ತಂತ್ರಜ್ಞಾನದೊಂದಿಗೆ ಈಜುಕೊಳ ನಿರ್ಮಾಣವಾಗಿದ್ದು, ಮುಂದಿನ ತಿಂಗಳಿನಿಂದ ಸಮ್ಮರ್‌ ಕ್ಯಾಂಪ್‌ ಪ್ರಾರಂಭಿಸುವ ನಿಟ್ಟಿನಲ್ಲಿ ಸಂಸ್ಥೆ ಯೋಚಿಸುತ್ತಿದೆ.

ನೂತನ ತಂತ್ರಜ್ಞಾನ 
ಮಂಗಳಾ ಈಜುಕೊಳದಲ್ಲಿ ಮಾ.1ರಿಂದ ಸಾರ್ವಜನಿಕ, ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಈಗಾಗಲೇ ಉತ್ತಮ ಸ್ಪಂದನೆ ಸಿಗುತ್ತಿದೆ. ಈಜುಗಾರರನ್ನು ಆಕರ್ಷಿಸಲೆಂದು ಈಗಾಗಲೇ ನೂತನ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
– ಭಾಸ್ಕರ್‌ ಕೆ., ಪಾಲಿಕೆ ಮೇಯರ್‌

ಉತ್ತಮ ಸ್ಪಂದನೆ
ಮಂಗಳಾ ಈಜುಕೊಳದಲ್ಲಿ ನೂತನ ತಂತ್ರಜ್ಞಾನ ಅಳವಡಿಸಿದ ಬಳಿಕ ಸಾರ್ವಜನಿಕರು, ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಿರುವ ಹಳೆಯ ನೀರು ಶುದ್ಧೀಕರಣ ಘಟಕವನ್ನು ಕೆಡವಿ ಕಿಡ್ಸ್‌ ಈಜುಕೊಳ ನಿರ್ಮಾಣ ಮಾಡಲು ಚಿಂತಿಸಲಾಗಿದ್ದು, ಮಾತುಕತೆಯ ಹಂತದಲ್ಲಿದೆ.
– ರಾಜೇಶ್‌ ಕುಮಾರ್‌,
 ಪಾಲಿಕೆ ಎಂಜಿನಿಯರ್‌

Advertisement

ಮತ್ತೊಂದು  ಈಜುಕೊಳ 
ನಗರದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಮಟ್ಟದ ನೂತನ ಈಜುಕೊಳ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಚಿಂತಿಸಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಈಗಾಗಲೇ ಹೇಳಿಕೆ ನೀಡಿದ್ದಾರೆ. ಈಜುಕೊಳ ನಿರ್ಮಾಣಕ್ಕೆ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಪಾಲಿಕೆ ಸ್ಥಳ ಗುರುತು ಮಾಡಲಿದ್ದು, ಮುಂದಿನ ದಿನಗಳಲ್ಲಿ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯನ್ನು ಏರ್ಪಡಿಸಲಾಗುವುದು ಇದರ ಮುಖ್ಯ ಉದ್ದೇಶವಾಗಿದೆ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next