Advertisement

ಕುಜ ಕ್ರೂರ ಗ್ರಹ: ಜಾತಕದ ಯಾವ ಸ್ಥಾನದಲ್ಲಿ ಕುಜ ಗ್ರಹ ಇದ್ದರೆ ದೋಷ ಬರುತ್ತದೆ?

02:44 PM Sep 02, 2021 | Team Udayavani |

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ, ಚಂದ್ರನ ಆದಿಯಾಗಿ ರಾಹು, ಕೇತು ತನಕ 9 ಗ್ರಹಗಳನ್ನು ಗಣನೆಗೆ ತೆಗೆದುಕೊಂಡು, ಆ ಗ್ರಹಗಳು ಇರುವ ಸ್ಥಾನಗಳ ಆಧಾರದ ಮೇಲೆ ಫಲಗಳನ್ನು ಹೇಳುವುದು ಪದ್ಧತಿ. ಆದರೆ ಜ್ಯೋತಿಷ್ಯದಲ್ಲಿ ಅತ್ಯಂತ ಹೆಚ್ಚಾಗಿ ಕೇಳಿ ಬರುವ ಒಂದು ದೋಷ ಎಂದರೆ ಕುಜ(ಮಂಗಳ) ದೋಷ. ಆದರೆ ಕುಜ ದೋಷ ಎಂದರೇನು, ಅದನ್ನು ದೋಷ ಎಂದು ಪರಿಗಣಿಸಬೇಕೆ ಎಂಬ ಬಗ್ಗೆ ವಿಶ್ಲೇಷಿಸೋಣ…

Advertisement

ನವಗ್ರಹಗಳಲ್ಲಿ ಯಾವ ಗ್ರಹಗಳೂ ಅಶುಭವಲ್ಲ. ಜಾತಕ ಹೊಂದಿರುವ ವ್ಯಕ್ತಿಯ ಪ್ರಾರಬ್ಧ ಕರ್ಮಗಳಿಗೆ ಅನುಸಾರವಾಗಿ ಗ್ರಹಗಳು ಶುಭ ಮತ್ತು ಅಶುಭ ಸ್ಥಾನಗಳನ್ನು ಹೊಂದುತ್ತವೆ. ಅದೇ ರೀತಿ ಕುಜ (ಮಂಗಳ) ಗ್ರಹ ಕೂಡಾ ಅಶುಭ ಗ್ರಹ ಅಲ್ಲ. ಕರ್ಕಾಟಕ ಲಗ್ನದವರಿಗೆ ಕುಜ ಯೋಗಕಾರಕ ಗ್ರಹ. 5 (ವೃಶ್ಚಿಕ) ಮತ್ತು 10 (ಮೇಷ)ನೇ ರಾಶಿಗಳ ಅಧಿಪತಿ. (ಕೇಂದ್ರ, ತ್ರಿಕೋನ ಸ್ಥಾನದ ಅಧಿಪತಿ). ಅದೇ ರೀತಿ ಸಿಂಹ ಲಗ್ನದವರಿಗೆ 4 ಮತ್ತು 9ನೇ ಸ್ಥಾನದ ಅಧಿಪತಿ.

ಕುಜ ದೋಷ ಕೇವಲ ಮದುವೆ, ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟಂತೆ ಗಣನೆಗೆ ತೆಗೆದುಕೊಳ್ಳಬೇಕಾದ ಒಂದು ಅಂಶ. ಸ್ವಾಭಾವಿಕವಾಗಿ ಕುಜ ಒಂದು ಕ್ರೂರಗ್ರಹ. ಅದು ಯಾವ ಸ್ಥಾನದಲ್ಲಿ ಇರುತ್ತದೆಯೋ ಅಲ್ಲಿ ತನ್ನ ಕ್ರೂರ ಸ್ವಭಾವವನ್ನು ತೋರಿಸುತ್ತದೆ. ಕುಜನು ಲಗ್ನದಿಂದ 1,2,4,7, 8 ಮತ್ತು 12ನೇ ಮನೆಗಳಲ್ಲಿ ಇದ್ದರೆ ಅದನ್ನು ಕುಜ ದೋಷ ಎಂದು ಪರಿಗಣಿಸುತ್ತಾರೆ. ಮದುವೆ ಎಂಬುದು ಜೀವನದ ಒಂದು ಮಹತ್ವದ ಘಟ್ಟ. ಗಂಡು, ಹೆಣ್ಣಿನ ಮದುರವಾದ ಜೀವನಕ್ಕೆ ಅಡಿಪಾಯ ಕುಂಡಲಿಯ ಮೊದಲಿನ ಮನೆಯನ್ನು ಲಗ್ನ ಎಂದು, ಶರೀರ, ವೈಯಕ್ತಿಕ ಜೀವನ, ಸ್ವಭಾವ ಎಂದೂ, ದ್ವಿತೀಯ ಮನೆಯನ್ನು ಕುಟುಂಬ ಸ್ಥಾನವೆಂದು, ಧನ, ವಾಕ್ ಸ್ಥಾನವೆಂದೂ, ನಾಲ್ಕನೇ ಮನೆಯನ್ನು ಸುಖ ಸ್ಥಾನ, ಏಳನೇ ಮನೆಯನ್ನು ಕಳತ್ರ ಸ್ಥಾನ (ದಾಂಪತ್ಯ), ಎಂಟನೇ ಮನೆಯನ್ನು ಮಾಂಗಲ್ಯ ಸ್ಥಾನ, ಹಾಗೇ ಹನ್ನೆರಡನೇ ಮನೆಯನ್ನು ಶಯನ ಸುಖ ಸ್ಥಾನವೆಂದು ಕೇಳಬಹುದು. ಆ ಸ್ಥಾನಗಳಲ್ಲಿ ಕ್ರೂರ ಸ್ವಭಾವದ ಕುಜ ಸ್ಥಾನ ಪಡೆದುಕೊಂಡರೆ, ಆ ಮನೆಗಳ ಪಾವಿತ್ರತೆಯನ್ನು ಹಾಳು ಮಾಡುತ್ತಾನೆ.

ಕುಜನಿಗೆ ಎಲ್ಲ ಗ್ರಹಗಳ ತರ 7ನೇ ದೃಷ್ಠಿ ಅಲ್ಲದೆ (ರಾಹು ಕೇತು ಹೊರತುಪಡಿಸಿ) 4ನೇ ಮತ್ತು 8ನೇ ವಿಶೇಷ ದೃಷ್ಠಿ ಇದೆ. ತಾನು ಇರುವ ಮನೆಯಿಂದ 4ನೇ, 7ನೇ ಮತ್ತು 8ನೇ ಮನೆಗಳನ್ನು (ಸ್ಥಾನಗಳನ್ನು) ವೀಕ್ಷಣೆ ಮಾಡುತ್ತಾನೆ.

12ನೇ ಮನೆಯಲ್ಲಿ ಉಪಸ್ಥಿತನಿದ್ದು ತನ್ನ 8ನೇ ದೃಷ್ಠಿಯಿಂದ ಸಪ್ತಮ ಸ್ಥಾನವನ್ನು, 1ನೇ ಮನೆಯಲ್ಲಿ ಉಪಸ್ಥಿತನಿದ್ದು ತನ್ನ 7ನೇ ದೃಷ್ಟಿಯಿಂದ ಸಪ್ತಮ ಸ್ಥಾನವನ್ನೂ, ಹಾಗೇ 4ನೇ ಮನೆಯಲ್ಲಿದ್ದು, ತನ್ನ 4ನೇ ದೃಷ್ಟಿಯಿಂದ ಸಪ್ತಮ ಸ್ಥಾನವನ್ನು ವೀಕ್ಷಣೆ ಮಾಡುತ್ತಾನೆ. ಇದೇ ರೀತಿ ಚಂದ್ರನಿಂದಲೂ, ಶುಕ್ರ ಇರುವ ಸ್ಥಾನದಿಂದಲೂ ಕುಜ ದೋಷನ್ನು ಪರಿಗಣಿಸುವ ಪದ್ಧತಿ ಇದೆ.

Advertisement

ರವೀಂದ್ರ. ವಿ. (ಜ್ಯೋತಿಷ್ಯ ಶಾಸ್ತ್ರ ವಿಶಾರದ)

ಬಿಎಸ್ಸಿ, ಎಲ್ ಎಲ್ ಬಿ

ಜ್ಯೋತಿಷ್ಯ ವಿಶ್ಲೇಷಕರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next