Advertisement

ವಾಸಿಸುವವನೇ ಮನೆಯೊಡೆಯ; ಮಹತ್ವದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ

03:45 AM Mar 25, 2017 | |

ವಿಧಾನಸಭೆ: ರಾಜ್ಯದಲ್ಲಿರುವ 58 ಸಾವಿರ ಜನ ವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಶುಕ್ರವಾರ ಧ್ವನಿಮತದಿಂದ ಅಂಗೀಕರಿಸಲಾಯಿತು. ಉಳುವವನೇ ಭೂ ಒಡೆಯ ಕಾಯ್ದೆಯ ಮಾದರಿಯಲ್ಲಿ ಮತ್ತೂಂದು ಐತಿಹಾಸಿಕ ಎನ್ನುವಂತಹ “ವಾಸಿಸುವವನಿಗೆ ಮನೆಯ ಒಡೆತನ’ ಕೊಡುವ ಮಹತ್ವದ ವಿಧೇಯಕ ಇದಾಗಿದೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಭೂ ಸುಧಾರಣಾ ಕಾಯ್ದೆ 1961ರ ತಿದ್ದುಪಡಿ ತರಲಾಗಿದ್ದು ಇದರಲ್ಲಿ ರಾಜ್ಯದಲ್ಲಿರುವ 58 ಸಾವಿರ ಗೊಲ್ಲರ ಹಟ್ಟಿ, ಲಂಬಾಣಿ ತಾಂಡಾ, ವಡ್ಡರ ಹಟ್ಟಿ, ಕುರುಬರ ಹಟ್ಟಿ, ನಾಯಕರ ಹಟ್ಟಿ, ಮಜಾರೆ ಗ್ರಾಮ, ದೊಡ್ಡಿ, ಪಾಳ್ಯ, ಕ್ಯಾಂಪ್‌, ಗೌಳಿ ದೊಡ್ಡಿ, ಕಾಲೋನಿಯಂತಹ ದಾಖಲೆ ಇಲ್ಲದ ಜನ ವಸತಿಗಳನ್ನು ಇನ್ನು ಮುಂದೆ ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಸರ್ಕಾರದ ಎಲ್ಲ ಸವಲತ್ತು ದೊರೆಯುವಂತೆ ಮಾಡುವುದು ಈ ವಿಧೇಯಕದ ಪ್ರಮುಖಾಂಶ. ಈ ವಿಧೇಯಕ ಅನ್ವಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸುವ ದಿನದವರೆಗೂ ಕೃಷಿ ಕಾರ್ಮಿಕರು ಸೇರಿ ಬಡಕುಟುಂಬಗಳು ತಾವು ವಾಸಿಸುವ ಮನೆ ಹಾಗೂ ಮನೆಗೆ ಹೊಂದಿಕೊಂಡಿರುವ ಜಾಗಕ್ಕೆ ನಿಯಮಗಳ ವ್ಯಾಪ್ತಿಗೊಳಪಟ್ಟು, ಅವರನ್ನೇ ಮಾಲಿಕರನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ಈ ಐತಿಹಾಸಿಕ ವಿಧೇಯಕದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಸೇರಿದಂತೆ ವಿಧಾನ ಸಭೆಯ ಬಹುತೇಕ ಸದಸ್ಯರು ಸ್ವಾಗತಿಸಿ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಅಭಿನಂದಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಈ ಸದನ ಒಂದು ಐತಿಹಾಸಿಕ ವಿಧೇಯಕ ಅಂಗೀಕರಿಸಿದೆ. ಸ್ವಾತಂತ್ರ್ಯ ಬಂದ ನಂತರ ಉಳುವವನೇ ಭೂ ಒಡೆಯ ಕಾಯ್ದೆ ಜಾರಿಗೆ ತರಲಾಗಿತ್ತು. ಇದೊಂದು ಪ್ರಗತಿದಾಯಕ, ಅಷ್ಟೇ ಅಲ್ಲ ಕ್ರಾಂತಿಕಾರಕ ವಿಧೇಯಕವಾಗಿದೆ. ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾದ ಮೇಲೆ ಈ ವಿಧೇಯಕ ಚುರುಕು ಪಡೆದುಕೊಂಡಿದೆ. ಹಕ್ಕು ವಂಚಿತ ಸಮುದಾಯದವರಿಗೆ ಇಂದು ಸ್ವತಂತ್ರ ಸಿಕ್ಕಂತಾಗಿದೆ. ಅವರು ಇನ್ನು ಮುಂದೆ ಸ್ವತಂತ್ರರಾಗಿ ಬದುಕುತ್ತಾರೆ. ನಾವು ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿಯೂ ಘೋಷಣೆ ಮಾಡಿದ್ದೇವು. ನಮ್ಮ ಪ್ರಣಾಳಿಕೆಯ ಮಹತ್ವದ ಘೋಷಣೆಯನ್ನು ಈಡೇರಿಸಿದಂತಾಯಿತು ಎಂದು ಹೇಳಿದರು.

ಕಾಗೋಡು ತಿಮ್ಮಪ್ಪ ಕೂಡ ಇದು ಕ್ರಾಂತಿಕಾರಕ ತೀರ್ಮಾನವಾಗಿದ್ದು, ನನಗೆ ಬಹಳ ಸಂತೋಷವಾಗಿದೆ. ಉಳುವವನೆ ಭೂ ಒಡೆಯ ಕಾಯ್ದೆ ಮಾಡಲು ಸಾಕಷ್ಟು ಹೋರಾಟ ಮಾಡಿದ್ದೆವು. ಈಗ ವಾಸಿಸುವವನೇ ಮನೆಯೊಡೆಯ ಕಾಯ್ದೆ ನನ್ನ ಅವಧಿಯಲ್ಲಿ ಆಗಿರುವುದು ಖುಷಿಯಾಗಿದೆ. ಯಾವುದೇ ದಾಖಲೆ ಇಲ್ಲದೇ ಮನೆಗಳಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಹಕ್ಕು ದೊರೆಯಲಿದೆ ಎಂದು ತಿಳಿಸಿದರು.

Advertisement

ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌, ತಳ ಸಮುದಾಯದವರಿಗೆ ಹಕ್ಕು ನೀಡುವ ಮಹತ್ವದ ವಿಧೇಯಕ ಸರ್ವಾನುಮತದಿಂದ ಅಂಗೀಕಾರವಾಗಿರುವುದು ಎಲ್ಲರಿಗೂ ಖುಷಿಯಾಗಿದೆ. ಈಗ ಸರ್ಕಾರ ಇದನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಕೆಲಸ ಮಾಡಬೇಕಿದೆ. ಸರ್ಕಾರ ಕಾನೂನು ರೂಪಿಸಿದರೂ ಅಧಿಕಾರಿಗಳು ಯಾವುದಾದರೊಂದು ಕೊಕ್ಕೆ ಹಾಕಿ ಅದನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಾರೆ. ಆ ರೀತಿ ಆಗದಂತೆ ಜಾಗ್ರತೆ ವಹಿಸಬೇಕೆಂದು ಮನವಿ ಮಾಡಿದರು.

ಸ್ಪೀಕರ್‌ ಕೆ.ಬಿ. ಕೋಳಿವಾಡ್‌, ಪಿ. ರಾಜೀವ, ಅಶೋಕ ಖೇಣಿ,  ಶಿವರಾಜ್‌ ತಂಗಡಗಿ, ಎಂ.ಪಿ. ರವೀಂದ್ರ, ಪರಮೇಶ್ವರ್‌ ನಾಯಕ್‌, ಬಿ.ಬಿ. ನಿಂಗಯ್ಯ ಸೇರಿದಂತೆ ಅನೇಕ ಸದಸ್ಯರು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ  ಹಾಗೂ ವಿಧೇಯಕ ಅಂಗೀಕಾರಕ್ಕೆ ನಿರಂತರ ಒತ್ತಡ ಹಾಕುತ್ತಿದ್ದ ಶಾಸಕ ಶಿವಮೂರ್ತಿ ನಾಯಕ್‌ ಅವರಿಗೆ ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next