ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಚಿತ್ರ ಈ ವಾರವೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೊನ್ನೆಯಷ್ಟೇ ಬಿಡುಗಡೆಯಾಗಿರೋ ಟ್ರೇಲರ್ ಮೂಲಕ ಇಡೀ ಕಥೆಯ ವಿರಾಟ್ ರೂಪ ಪ್ರದರ್ಶಿಸಿರೋ ಈ ಸಿನಿಮಾ ನಾನಾ ಥರದಲ್ಲಿ ಪ್ರೇಕ್ಷಕರಲ್ಲೊಂದು ಕುತೂಹಲವನ್ನು ಚಾಲ್ತಿಯಲ್ಲಿಟ್ಟಿದೆ. ಇದು ಈ ಪಾಟಿ ಗಮನ ಸೆಳೆಯೋದಕ್ಕೆ ಪ್ರಧಾನ ಕಾರಣ ತಾರಾಗಣ. ಇದರ ತುಂಬಾ ಕನ್ನಡ ಚಿತ್ರರಂಗದ ಲೀಡ್ ಕಾಮಿಡಿ ನಟರೇ ತುಂಬಿಕೊಂಡಿರೋದರಿಂದ ಭರಪೂರವಾದೊಂದು ಕಾಮಿಡಿ ಫುಲ್ ಮೀಲ್ಸ್ಗಾಗಿ ಪ್ರೇಕ್ಷಕರು ಕಾಯಲಾರಂಭಿಸಿದ್ದಾರೆ.
ಅದನ್ನು ಸವಿಯೋ ಕಾಲವೂ ಸನ್ನಿಹಿತವಾಗಿದೆ.
ಇದು ಎಸ್.ವಿ ಬಾಬು ನಿರ್ಮಾಣ ಮಾಡಿರೋ ಹದಿನಾರನೇ ಚಿತ್ರ. ಹೆಚ್ಚಿನ ಪ್ರೇಕ್ಷಕರು ವರ್ಷಾಂತರಗಳಿಂದ ಏನನ್ನು ಬಯಸಿದ್ದರೋ ಅದೆಲ್ಲವನ್ನೂ ತುಂಬಿಕೊಂಡು ತೆರೆಗಾಣಲು ಸಜ್ಜುಗೊಂಡಿರೋ ಮನೆ ಮಾರಾಟಕ್ಕಿದೆ ಚಿತ್ರ ಈಗಾಗಲೇ ಟ್ರೇಲರ್ ಮೂಲಕ ಭಾರೀ ಸದ್ದು ಮಾಡುತ್ತಿದೆ. ಸಾಧು ಕೋಕಿಲಾ, ಕುರಿ ಪ್ರತಾಪ್, ಚಿಕ್ಕಣ್ಣ ಮತ್ತು ರವಿಶಂಕರ್ ಗೌಡ ಈ ಸಿನಿಮಾದ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರುತಿ ಹರಿಹರನ್ ಮತ್ತು ಕಾರುಣ್ಯಾ ರಾಮ್ ಮುಂತಾದವರು ವಿಶಿಷ್ಟವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಮಂಜು ಸ್ವರಾಜ್ ಪಾಲಿಗಿದು ವಿಶೇಷವಾದ ಚಿತ್ರ. ಶಿಶಿರದಿಂದ ಆರಂಭವಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಪಟಾಕಿ ಚಿತ್ರದವರೆಗೆ ಅವರು ಥರ ಥರದ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಸಂಪೂರ್ಣವಾಗಿ ಕಾಮಿಡಿ ಕಂ ಹಾರರ್ ಜಾನರಿನ ಚುಂಗು ಹಿಡಿದು ಹೊರಟಿದ್ದಾರೆ. ಅದರ ಮಜ ಏನೆಂಬುದರ ಚಹರೆಗಳು ಟ್ರೇಲರ್ ಮೂಲವೇ ಅನಾವರಣಗೊಂಡಿದೆ. ಕನ್ನಡ ಚಿತ್ರರಂಗದ ಮುಖ್ಯ ಹಾಸ್ಯ ಕಲಾವಿದರೆಲ್ಲ ಒಟ್ಟುಗೂಡಿದ್ದಾರೆಂದ ಮೇಲೆ ಇಲ್ಲಿ ಎಂಥಾ ನಗೆಹಬ್ಬವಿರ ಬಹುದೆಂಬ ಅಂದಾಜು ಯಾರಿಗಾದರೂ ಸಿಗದಿರಲು ಸಾಧ್ಯವಿಲ್ಲ. ಕನ್ನಡಕ್ಕೆ ಹೊಸತಾದ ಗಟ್ಟಿ ಕಥೆಯನ್ನೊಳಗೊಂಡಿರೋ ಈ ಸಿನಿಮಾ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.