Advertisement
2019ರ ಮಂಡ್ಯ ಲೋಕಸಭಾ ಚುನಾವಣೆ ಇಡೀ ದೇಶವೇ ತಿರುಗಿ ನೋಡಿವಂತೆ ಮಾಡಿತ್ತು. ನಿಖಿಲ್ ಮತ್ತು ಸುಮಲತಾ ಅಂಬರೀಶ್ ನಡುವಿನ ಜಿದ್ದಾಜಿದ್ದಿ ಹೋರಾಟ ಸಾಕಷ್ಟು ಸುದ್ದಿಯಾಗುವ ಜೊತೆಗೆ ಸುಮಲತಾ ಮತ್ತು ಜೆಡಿಎಸ್‌ನವರ ನಡುವೆ ವೈಷಮ್ಯ ಹೆಚ್ಚುವುದಕ್ಕೂ ಇದು ಕಾರಣವಾಗಿತ್ತು. ಇದೀಗ ಮಂಡ್ಯದಲ್ಲಿ ಇಬ್ಬರ ನಡುವಿನ ಕಿಚ್ಚು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕರ್ಮಭೂಮಿಯಲ್ಲೂ ಮಾರ್ಧನಿಸುತ್ತಿದೆ.
Related Articles
Advertisement
ಸೇಡು ತೀರಿಸಿಕೊಳ್ಳಲು ನಿಂತರಾ ಸುಮಲತಾ: ಮಂಡ್ಯ ಲೋಕಸಭಾ ಚುನಾವಣೆಯ ಬಳಿಕ ಸುಮಲತಾ ಮತ್ತು ದಳಪತಿಗಳ ನಡುವೆ ವೈಷಮ್ಯ ಹೊಗೆಯಾಡುತ್ತಿದೆ. ಸುಮಲತಾ ವಿರುದ್ಧ ಕುಮಾರಸ್ವಾಮಿ ಲೋಕಸಭಾ ಚುನಾವಣೆಯ ಬಳಿ ನೀಡಿದ್ದ ಹೇಳಿಕೆಗಳು, ಮಂಡ್ಯದಲ್ಲಿ ಸುಮಲತಾ ಮತ್ತು ಜೆಡಿಎಸ್ ನಡುವೆ ತದನಂತರದ ದಿನಗಳಲ್ಲಿ ನಡೆದ ವಾಕ್ಸಮರಗಳನ್ನು ಗಮನಿಸಿದರೆ, ಈ ಹಗೆತನ ಮುಂ ದುವರಿದಿರುವುದನ್ನು ಸಾಕ್ಷೀಕರಿಸಿತ್ತು. ಇದೀಗ ರಾಮ ನಗರ ಜಿಲ್ಲೆಗೆ ಎಂಟ್ರಿ ಆಗಿ ಟಾಂಗ್ ನೀಡುವ ಮೂಲಕ ಸುಮಲತಾ ಈ ಚುನಾವಣೆಯಲ್ಲಿ ದಳಪತಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ನಿಂತಿದ್ದಾರಾ ಎಂಬ ಭಾವನೆ ಮೂಡಿದೆ.
ಅಂಬರೀಶ್‌ಗೆ ಸಿಗದ ಬೆಂಬಲ ಸುಮಲತಾಗೆ ಸಿಕ್ಕೀತೆ?: ಸುಮಲತಾ ಅವರಿಗೆ ಹಳೇ ಮೈಸೂರು ಭಾಗದಲ್ಲಿ ಮಹತ್ವ ಸಿಕ್ಕಿದೆ ಎಂದರೆ ಅದು ಅವರ ಪತಿ ನಟ ಅಂಬರೀಶ್ ಅವರ ಜನಪ್ರಿಯತೆಯ ಬಳುವಳಿ. ಆದರೆ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ನಟ ಅಂಬರೀಶ್ ಅವರಿಗೆ ಅಭಿಮಾನಿಗಳ ದೊಡ್ಡಪಡೆಯೇ ಇತ್ತಾದರೂ, ರಾಜಕೀಯವಾಗಿ ಅಂಬರೀಶ್ ಅವರಿಗೆ ಈ ಎರಡೂ ಕ್ಷೇತ್ರಗಳು ಪ್ರತಿರೋಧವನ್ನೊಡ್ಡುತ್ತಾ ಬಂದಿದ್ದು ಇತಿಹಾಸ. 1994ರಲ್ಲಿ ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್ ಆಗಿ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಲು ಬಂದಿದ್ದ ಅಂಬರೀಶ್ ಅವರಿಗೆ ಜನತಾದಳದ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗಲಾಟೆ ಎಬ್ಬಿಸಿದ್ದರು. 1996ರಲ್ಲಿ ನಡೆದ ರಾಮನಗರ ಉಪಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಅಂಬರೀಶ್ ಅವರು ಪರಾಜಿತರಾಗಿದ್ದರು. ಈ ಎರಡೂ ಘಟನೆಗಳು ಈ ಭಾಗದಲ್ಲಿ ಅಂಬರೀಶ್ ನಟರಾಗಿ ಸಾಕಷ್ಟು ಜನಪ್ರಿಯವಾಗಿದ್ದರೂ, ರಾಜಕೀಯವಾಗಿ ಜನ ಸ್ವೀಕರಿಸಲಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಇದೀಗ ಸುಮಲತಾ ಅವರಿಗೆ ಈ ಕ್ಷೇತ್ರದಲ್ಲಿ ಮನ್ನಣೆ ದೊರೆಯುವುದೇ ಎಂದು ಕಾಯ್ದು ನೋಡಬೇಕಿದೆ.
ಸಂಸದೆ ಹೇಳಿಕೆಗೆ ದಳಪತಿಗಳಿಂದ ತಟಸ್ಥ ಪ್ರತಿಕ್ರಿಯೆ: ಜಿಲ್ಲೆಗೆ ಸುಮಲತಾ ಎಂಟ್ರಿ ನೀಡಿ ದಳಪತಿಗಳ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಾರಾದರೂ, ಸುಮಲತಾ ಹೇಳಿಕೆಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ತಟಸ್ಥ ಪ್ರತಿಕ್ರಿಯೆ ನೀಡಲಾಗುತ್ತಿದೆ. ಇತ್ತೀಚಿಗೆ ಅವರು ದೊಡ್ಡ ಪಕ್ಷಕ್ಕೆ ಸೇರಿದ್ದಾರೆ, ಅವರ ಬಗ್ಗೆ ನಾನು ಮಾತನಾಡಲಾದೀತೆ ಎಂದು ವ್ಯಂಗ್ಯವಾಗಿ ಕುಮಾರಸ್ವಾಮಿ ಪ್ರತಿಕ್ರಿಯಿಸುವ ಮೂಲಕ ಸುಮಲತಾ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳುವ ಸೂಚನೆಯನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇತ್ತೀಚಿಗೆ ನೀಡಿದ್ದರು. ಸುಮಲತಾ ಹೇಳಿಕೆ ಜೆಡಿಎಸ್‌ನ ಯಾವುದೇ ಮುಖಂಡರು ಪ್ರತಿಕ್ರಿಯಿಸದೆ ಸುಮ್ಮನಾಗುವ ಮೂಲಕ ಸುಮಲತಾ ಅವರ ಹೇಳಿಕೆಗೆ ಮಹತ್ವ ಸಿಗದಂತೆ ಮಾಡುವ ತಂತ್ರ ಅನುಸರಿಸಿದೆ.
-ಸು.ನಾ.ನಂದಕುಮಾರ್