ಬೆಂಗಳೂರು: ಪಕ್ಷದ ಒಳಿತಿಗಾಗಿ ತಾವು ತಟಸ್ಥ ಧೋರಣೆ ಅನುಸರಿಸುತ್ತಿರುವುದಾಗಿ ಮಂಡ್ಯದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎದುರು ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಚಲುವರಾಯಸ್ವಾಮಿ,
ಪಿ.ಎಂ.ನರೇಂದ್ರಸ್ವಾಮಿ, ರವಿ ಗಣಿಗ ಅವರೊಂದಿಗೆ ಸಭೆ ನಡೆಸಿದ ದಿನೇಶ್,
ಮಂಡ್ಯದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿ ನಿಖೀಲ್ ಪರ ಪ್ರಚಾರ ಮಾಡದಿದ್ದರೆ ದೋಸ್ತಿಗಳ ನಡುವೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ .ಹೀಗಾಗಿ, ತಮ್ಮ ನಿಲುವು ಬದಲಾಯಿಸಿ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ, ಪಕ್ಷದ ಆದೇಶ ಪಾಲಿಸುವಂತೆ ಸೂಚಿಸಿದರು.
ಅಲ್ಲದೆ, ಶುಕ್ರವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರುಮಂಡ್ಯದಲ್ಲಿ ನಿಖೀಲ್ ಪರವಾಗಿ ಜಂಟಿ ಪ್ರಚಾರ ನಡೆಸಲಿದ್ದು, ಆ ಸಂದರ್ಭದಲ್ಲಿ ನಾಯಕರ ಜೊತೆ ಹಾಜರಿರಬೇಕು. ಏಪ್ರಿಲ್ 13ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕೆ.ಆರ್ .ನಗರದಲ್ಲಿ ಜಂಟಿ ಸಮಾವೇಶದಲ್ಲಿ ಪಾಲ್ಗೊಳ್ಳುವುದರಿಂದ ಆ ಸಂದರ್ಭದಲ್ಲಿ ಎಲ್ಲರೂ ಹಾಜರಿರಬೇಕು ಎಂದು ತಾಕೀತು ಮಾಡಿದರು ಎಂದು ತಿಳಿದು ಬಂದಿದೆ.
ಆದರೆ, ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳು ಭವಿಷ್ಯದಲ್ಲಿ ಪಕ್ಷ ಹಾಗೂ ಕಾರ್ಯಕರ್ತರ ಹಿತ ಕಾಯಲು ತಟಸ್ಥ ಧೋರಣೆ ತಳೆದಿರುವುದಾಗಿ ತಿಳಿಸಿದರು ಎನ್ನಲಾಗಿದೆ. ಅಲ್ಲದೆ, ಸಿದ್ದರಾಮಯ್ಯ ಹಾಗೂ ರಾಹುಲ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸಿಲ್ಲ ಎಂದು ತಿಳಿದು ಬಂದಿದೆ.