Advertisement

ಯುವಜನೋತ್ಸವಕ್ಕೆ ಖಾಲಿ ಕುರ್ಚಿಗಳೇ ಪ್ರೇಕ್ಷಕರು!

04:05 PM Sep 28, 2019 | Team Udayavani |

ಮಂಡ್ಯ: ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯಸರ್ಕಾರ ಯುವಜನೋತ್ಸವ ಕಾರ್ಯಕ್ರಮವನ್ನು ರೂಪಿಸಿದ್ದರೂ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಬೇಜವಾಬ್ದಾರಿಯಿಂದ ಅದೊಂದು ಕಾಟಾಚಾರದ ಕಾರ್ಯಕ್ರಮವಾಗಿ ಪರಿವರ್ತನೆಯಾಗಿದೆ.

Advertisement

ಜಿಲ್ಲಾ ಪಂಚಾಯಿತಿಯಿಂದ ಯುವಜನೋತ್ಸವಕ್ಕೆ ಪ್ರತಿ ವರ್ಷ ಲಕ್ಷಾಂತರ ರೂ. ಅನುದಾನ ನೀಡಲಾಗುತ್ತಿದ್ದರೂ ವ್ಯವಸ್ಥಿತ ಪ್ರಚಾರ, ಕಲಾವಿದರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸುವಲ್ಲಿ ಇಲಾಖೆ ಅಧಿಕಾರಿಗಳು ನಿರಾಸಕ್ತಿ ವಹಿಸಿದ್ದಾರೆ. ಇದರಿಂದ ಯುವಜನೋತ್ಸವ ಕಳೆಗುಂದಿದೆ. ಯುವ ಪ್ರತಿಭೆಗಳಿಗೆ ಉತ್ತೇಜನವೂ ದೊರಕುತ್ತಿಲ್ಲ. ಪರಿಣಾಮ ಯುವಜನೋತ್ಸವಕ್ಕೆ ನೀಡುತ್ತಿರುವ ಅನುದಾನ ವ್ಯರ್ಥವಾಗುವುದರ ಜೊತೆಗೆ
ಯುವ ಪ್ರತಿಭೆಗಳಲ್ಲಿ ನಿರಾಸಕ್ತಿ ಮೂಡುವಂತಾಗಿದೆ.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಯುವಜನೋತ್ಸವ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕಲಾಮಂದಿರದ ಮೊದಲ ಸಾಲಿನಲ್ಲಿ ಕೂರುವಷ್ಟು ಜನರೂ ಬಂದಿರಲಿಲ್ಲ. ಕಲಾವಿದರು, ಯುವಕ-ಯುವತಿ ಸಂಘಟನೆಯವರಾರೂ ಕಂಡು ಬರಲೇ ಇಲ್ಲ. ಇಡೀ ಕಲಾಮಂದಿರ ಪ್ರೇಕ್ಷಕರಿಲ್ಲದೆ ಬಿಕೋ ಎನ್ನುತ್ತಿತ್ತು. ಖಾಲಿ ಕುರ್ಚಿಗಳೇ ಯುವ ಜನೋತ್ಸವಕ್ಕೆ ಪ್ರೇಕ್ಷಕರಾಗಿರುವಂತೆ ಕಂಡುಬಂದವು. ಯುವ ಪ್ರತಿಭೆಗಳಲ್ಲಿ ನಿರಾಸೆ: ಪ್ರೇಕ್ಷಕರ ಕೊರತೆಯಿಂದ ಯುವಜನೋತ್ಸವಕ್ಕೆ ಆಗಮಿಸಿದ್ದ ಯುವ ಪ್ರತಿಭೆಗಳಲ್ಲಿ ಉತ್ಸಾಹವೇ ಇರಲಿಲ್ಲ.

ಜನರೆದುರು ಅದ್ಭುತ ಪ್ರದರ್ಶನ ನೀಡಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸುವ ಅವರ ಕನಸು ಆಯೋಜಕರ ನಿರಾಸಕ್ತಿಯಿಂದ ಕಮರಿಹೋಗಿತ್ತು. ತೀರ್ಪುಗಾರರಿಂದ ಅಂಕಗಳನ್ನು ಪಡೆಯುವುದಕ್ಕಷ್ಟೇ ಸೀಮಿತವಾಗಿ ಯುವ ಪ್ರತಿಭೆಗಳು ಪ್ರದರ್ಶನ ನೀಡುತ್ತಿದ್ದರು.

ಕಲಾವಿದರಿಗೆ ಆಹ್ವಾನವಿಲ್ಲ: ಮಂಡ್ಯ ಜಿಲ್ಲೆ ಕಲಾವಿದರ ತವರೂರು. ಸರಿ ಸುಮಾರು ಎರಡು ಸಾವಿರ ಮಂದಿ ಕಲಾವಿದರು ಜಿಲ್ಲೆಯಲ್ಲಿದ್ದಾರೆ. ಆದರೂ, ಯುವಜನೋತ್ಸವಕ್ಕೆ ಆಗಮಿಸುವಂತೆ ಯಾವುದೇ ಕಲಾವಿದರಿಗೂ ಆಹ್ವಾನ ನೀಡಿಲ್ಲ.

Advertisement

ಶಾಲಾ-ಕಾಲೇಜು, ಯುವಕ-ಯುವತಿ ಸಂಘಗಳಿಗೂ ಕರಪತ್ರಗಳನ್ನು ಮುದ್ರಿಸಿ ಕಳುಹಿಸಿಲ್ಲ. ಕಲಾವಿದರಿಲ್ಲದೆ ಯುವಜನೋತ್ಸವವನ್ನು ತರಾತುರಿಯಲ್ಲಿ ಸಂಘಟಿಸಲಾಗಿದೆ. ಇದೊಂದು ದುಡ್ಡು ಮಾಡುವ ಕಾರ್ಯಕ್ರಮವಾಗಿದೆಯೇ ವಿನಃ ಕಲೆಯನ್ನು ಬೆಳೆಸುವ ಕಾರ್ಯಕ್ರಮವಾಗಿಲ್ಲ ಎನ್ನುವುದು ಹಲವು ಕಲಾವಿದರ ಆರೋಪವಾಗಿದೆ. ಅಲ್ಲದೆ, ಜನವರಿಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈಗ ನಡೆಯುತ್ತಿರುವ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮವನ್ನು ನವೆಂಬರ್‌ ತಿಂಗಳಲ್ಲಿ ಆಯೋಜಿಸಬೇಕಿತ್ತು.

ಯುವಜನ ಸೇವಾ ಕ್ರೀಡಾ ಇಲಾಖೆ ಅಧಿಕಾರಿ ಡಾ.ಬಿ.ವಿ.ನಂದೀಶ್‌ ಬೇರೆಡೆಗೆ ವರ್ಗಾವಣೆಯಾಗುವ ಸಾಧ್ಯತೆಗಳಿರುವುದನ್ನು ಮನಗಂಡು ಕಾರ್ಯಕ್ರಮ ನಡೆಸಿ ಮುಗಿಸುತ್ತಿದ್ದಾರೆ. ಒಂದೂವರೆ ತಿಂಗಳು ಮುಂಚಿತವಾಗಿಯೇ ಯುವಜನೋತ್ಸವ ಆಯೋಜಿಸಿ ಅವ್ಯವಸ್ಥೆಗೆ ಕಾರಣರಾಗಿದ್ದಾರೆ ಎಂದು ದೂರಿದ್ದಾರೆ.

ಇದು ಕೇವಲ ಈ ವರ್ಷದ ಯುವಜನೋತ್ಸವದ ಕತೆಯಲ್ಲ. ಪ್ರತಿ ವರ್ಷವೂ ಇದೇ ಮಾದರಿಯಲ್ಲೇ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಆದರೂ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಮಾತ್ರ ಈ ವಿಷಯದಲ್ಲಿ ಎಚ್ಚೆತ್ತುಕೊಂಡಿಲ್ಲ. 2.50 ಲಕ್ಷ ರೂ. ಅನುದಾನದಲ್ಲಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಅವಕಾಶವಿದೆ. ಆದರೂ, ಇಲಾಖಾ ಅಧಿಕಾರಿ ಡಾ.ನಂದೀಶ್‌ಗೆ ಇಚ್ಛಾಶಕ್ತಿ, ಬದ್ಧತೆ ಪ್ರದರ್ಶಿಸದಿರುವುದು ಈ ಎಲ್ಲಾ ಅವ್ಯವಸ್ಥೆಗಳ ಮೂಲವಾಗಿದೆ .

Advertisement

Udayavani is now on Telegram. Click here to join our channel and stay updated with the latest news.

Next