Advertisement

ಯೋಗ ವಿಶ್ವಕ್ಕೆ ಭಾರತ ನೀಡಿದ ಕಾಣಿಕೆ

07:33 PM Jun 22, 2019 | Naveen |

ಮಂಡ್ಯ: ಯೋಗ ವಿಶ್ವಕ್ಕೆ ಭಾರತ ನೀಡಿದ ಕಾಣಿಕೆ. ದೇಹ, ಮನಸ್ಸು ಕ್ರಿಯಾಶೀಲತೆಯಿಂದ ಕೂಡಿರಲು, ಉತ್ತಮ ಆರೋಗ್ಯದೊಂದಿಗೆ ಏಕಾಗ್ರತೆ ಸಾಧಿಸಲು ಯೋಗ ಅವಶ್ಯಕವಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯಷ್‌ ಇಲಾಖೆ, ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಐದು ಸಾವಿರ ಯೋಗಪಟುಗಳ ಸಮ್ಮುಖದಲ್ಲಿ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸದೃಢ ಆರೋಗ್ಯ: ಯೋಗದ ಮಹತ್ವ ಇಡೀ ವಿಶ್ವಕ್ಕೇ ಅರಿವಾಗಿದೆ. ಪ್ರಪಂಚದ 200ಕ್ಕೂ ಹೆಚ್ಚು ದೇಶಗಳು ಯೋಗವನ್ನು ಅಳವಡಿಸಿಕೊಂಡಿವೆ. ಮುಂದುವರಿದ ರಾಷ್ಟ್ರಗಳಲ್ಲಿರುವ ಜನರು ಯೋಗಾಭ್ಯಾಸದೊಂದಿಗೆ ಸದೃಢ ಆರೋಗ್ಯವಂತರಾಗಿ ಎಲ್ಲರಿಗೂ ಅದರ ಪ್ರಾಮುಖ್ಯತೆ ತಿಳಿಸಿಕೊಡುತ್ತಿವೆ. ಯಾವ ದೇಶದಲ್ಲಿ ಕ್ರೀಡಾಂಗಣಗಳು ಹಾಗೂ ಯೋಗ ಮಂದಿರಗಳು ತುಂಬಿರುತ್ತವೆಯೋ, ಆ ದೇಶದಲ್ಲಿ ಆಸ್ಪತ್ರೆಗಳು ಖಾಲಿಯಾಗಿರುತ್ತವೆ. ಕಾರಣ ಯೋಗ ಸರ್ವ ರೋಗಗಳ ತಡೆಗಟ್ಟುವ ಅಸ್ತ್ರವಾಗಿ ಕೆಲಸ ಮಾಡುತ್ತದೆ ಎಂದು ವಿವರಿಸಿದರು.

ಪೂರ್ವಿಕರ ಬಳುವಳಿ: ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಇವೆಲ್ಲವೂ ಪೂರ್ವಿಕರಿಂದ ಸಿಕ್ಕಂತಹ ಬಳುವಳಿ. ಇವುಗಳಿಂದ ದೇಹಕ್ಕೆ ಹೊಸ ಚೈತನ್ಯ ಸಿಗುತ್ತದೆ. ಧ್ಯಾನ ಹಾಗೂ ಪ್ರಾಣಾಯಾಮಕ್ಕಿಂತ ಮಿಗಿಲಾದ ಚಿಕಿತ್ಸೆ ಮತ್ತೂಂದಿಲ್ಲ. ಆಧುನಿಕ ಯುಗದಲ್ಲಿ ಒತ್ತಡದ ಜೀವನ ನಡೆಸುತ್ತಿರುವವರೆಲ್ಲರೂ ದೈನಂದಿನ ಕೆಲಸಗಳ ನಡುವೆ ಯೋಗಕ್ಕೆ ಸಮಯವನ್ನು ಮೀಸಡಲಿಡಬೇಕು. ಅದರಿಂದ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಯೋಗ ಕಲಿತು ಕ್ಷೇಮವಾಗಿರಿ: ಆದಿಚುಂಚನಗಿರಿ ಕ್ಷೇತ್ರ ಕೊಮ್ಮೇರಹಳ್ಳಿ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಮಾನವ ಜನ್ಮ ಶ್ರೇಷ್ಠವಾದುದು. ಈ ಜನ್ಮಕ್ಕೆ ಯೋಗ ಮತ್ತಷ್ಟು ಒಳಿತನ್ನು ಬಯಸುತ್ತಿದೆ. ಹೀಗಾಗಿ ನಮ್ಮ ಹಿರಿಯರು ಆರೋಗ್ಯ ವಿಚಾರಣೆ ಮಾಡಲು ಯೋಗಕ್ಷೇಮ ಎಂದು ಕರೆಯು ತ್ತಾರೆ. ವೇದ ಹಾಗೂ ಬ್ರಹ್ಮಶಾಸ್ತ್ರಗಳಲ್ಲಿ ಯೋಗವನ್ನು ಪ್ರತಿಪಾದಿಸಿದ್ದು, ಇಂದು ವಿಶ್ವದಾದ್ಯಂತ ಯೋಗ ಪಸರಿಸಿಕೊಂಡಿದೆ. ನಾವೆಲ್ಲರೂ ಯೋಗವನ್ನು ಕಲಿತು ಕ್ಷೇಮವಾಗಿರೋಣ ಎಂದು ತಿಳಿಸಿದರು.

Advertisement

2 ಸಾವಿರ ವಿದ್ಯಾರ್ಥಿಗಳಿಂದ ಪ್ರದರ್ಶನ: ಐದನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಯೋಗ ಪಟುಗಳಾಗಿ ಭಾಗವಹಿಸಿದ್ದರು. ವಿವಿಧ ಯೋಗಾಸನಗಳು, ಧ್ಯಾನ ಹಾಗೂ ಪ್ರಾಣಾಯಾಮಗಳನ್ನು ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಯೋಗ ಆಚರಣೆ ಮಾಡುವುದಾಗಿ ಎಲ್ಲರಿಗೂ ಪ್ರತಿಜ್ಞಾ ವಿಧಿ ಭೋದಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್‌, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್‌, ದುರ್ದಂಡೇಶ್ವರ ಮಹಾಂತ ಶಿವಯೋಗಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಶ್ರೀ ಅನಂತ ಕುಮಾರಸ್ವಾಮೀಜಿ, ಯೋಗಗುರು ಶಂಕರನಾರಾಯಣ ಶಾಸ್ತ್ರಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಜಿ.ಆರ್‌.ಗೀತಾ, ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಪುಷ್ಪಾ, ನೆಹರು ಯು ಕೇಂದ್ರ ಸಮನ್ವಯ ಅಧಿಕಾರಿ ಎಸ್‌.ಸಿದ್ದರಾಮಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಕ ನಿರ್ದೇಶಕ ಬಿ.ವಿ.ನಂದೀಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next