Advertisement

ಅಕಾಲಿಕ ಜಲಪಾತೋತ್ಸವ ಯಾರಿಗಾಗಿ?

03:59 PM Jan 16, 2020 | Team Udayavani |

ಮಂಡ್ಯ: ಸಮೃದ್ಧ ಮಳೆ ಸುರಿದ ವೇಳೆ ಜಲಪಾತದಲ್ಲಿ ಜಲಧಾರೆ ಉಕ್ಕಿ ಹರಿಯುವ ಸೊಬಗನ್ನು ನೋಡುವುದೇ ನಯನ ಮನೋಹರ. ಆದರೆ, ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಹರಿಸಿ ಜಲಪಾತದಲ್ಲಿ ಕೃತಕ ಜಲಧಾರೆ ಸೃಷ್ಟಿಸಿ ಮಾಡುವ ಜಲಪಾತೋತ್ಸವ ಯಾರಿಗೆ ಮಜವಾಗಿರುತ್ತದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ವರುಣನ ಕೃಪೆಯಿಂದ ಕಳೆದ ವರ್ಷ ಉತ್ತಮ ಮುಂಗಾರು ಹಾಗೂ ಹಿಂಗಾರು ಮಳೆಯಾದ ಪರಿಣಾಮ ಜೀವನದಿಗಳೆಲ್ಲಾ ಉಕ್ಕಿ ಹರಿದು ಜಲಾಶಯಗಳು ಜೀವಕಳೆ ಪಡೆದುಕೊಂಡವು. ದಶಕಗಳ ಬಳಿಕ ನೂರು ದಿನಗಳ ಕಾಲ ಕೆಆರ್‌ ಎಸ್‌ ಪೂರ್ಣ ಮಟ್ಟವನ್ನು ಕಾಯ್ದುಕೊಂಡಿತ್ತು.

ಈ ಹಿಂದೆ ಗಗನಚುಕ್ಕಿ ಜಲಪಾತೋತ್ಸವವನ್ನು ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಿನಲ್ಲಿ ನಡೆಸಲಾಗಿತ್ತು. ಮಳೆಗಾಲದಲ್ಲಿ ನಡೆಯುವ ಜಲಪಾತೋತ್ಸವಕ್ಕೆ ಅರ್ಥವೂ ಇತ್ತು. ಈ ಬಾರಿ ನವೆಂಬರ್‌ ತಿಂಗಳಲ್ಲಿ ನಿಗದಿಯಾಗಿದ್ದ ಜಲಪಾತೋತ್ಸವ ಉಪ ಚುನಾವಣೆ ಕಾರಣದಿಂದ ಮುಂದಕ್ಕೆ ಹೋಗಿ ಅಂತಿಮವಾಗಿ ಜನವರಿ 18 ಹಾಗೂ 19ರಂದು ಎರಡು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದೆ.

ಎರಡರಿಂದ ಮೂರು ಟಿಎಂಸಿ ನೀರು ವ್ಯರ್ಥ: ಗಗನಚುಕ್ಕಿ ಜಲಪಾತೋತ್ಸವ ನಡೆಸಬೇಕಾದರೆ ಕನಿಷ್ಠ 2 ರಿಂದ 3 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಪ್ರಸ್ತುತ ಕೆಆರ್‌ಎಸ್‌ ಜಲಾಶಯದಲ್ಲಿ
120.67 ಅಡಿ ನೀರಿದ್ದು, ಅಣೆಕಟ್ಟೆಗೆ 285 ಕ್ಯುಸೆಕ್‌ ನೀರು ಹರಿದುಬರುತ್ತಿದ್ದರೆ, ಜಲಾಶಯದಿಂದ ನದಿಗೆ 1577 ಕ್ಯುಸೆಕ್‌ ಹಾಗೂ ನಾಲೆಗಳಿಗೆ 2849 ಕ್ಯುಸೆಕ್‌ ಸೇರಿದಂತೆ ಒಟ್ಟು 4538 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

30 ಕ್ಯುಸೆಕ್‌ ನೀರು: ಜಲಪಾತೋತ್ಸವಕ್ಕೆ ಕೇವಲ ಕೆಆರ್‌ಎಸ್‌ ನೀರನ್ನಷ್ಟೇ ಬಳಸಿಕೊಳ್ಳದೆ ಕಬಿನಿ ಜಲಾಶಯದಿಂದಲೂ ನೀರನ್ನು ಹರಿಸಲಾಗುತ್ತಿದೆ. ಕನಿಷ್ಠ ಎರಡೂ ಜಲಾಶಯಗಳಿಂದ 25 ರಿಂದ 30 ಕ್ಯುಸೆಕ್‌ ನೀರು ಹರಿದರಷ್ಟೇ ಜಲಪಾತದಲ್ಲಿ ಜಲಧಾರೆ ಧುಮ್ಮಿಕ್ಕಲು ಸಾಧ್ಯ. ಅದಕ್ಕಾಗಿ ಜಲಾಶಯಗಳಿಂದ ನೀರನ್ನು ಹೊರಗೆ ಬಿಟ್ಟು ಜಲಾಶಯಕ್ಕೆ ಸೊಬಗು ತುಂಬುವ ಕಾರ್ಯದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

Advertisement

ಜಲಪಾತೋತ್ಸವ ಹೆಸರಲ್ಲಿ ನೀರು ಪೋಲು: ಕಳೆದ ವರ್ಷ ತಮಿಳುನಾಡಿಗೆ ಹರಿಸಬೇಕಾಗಿದ್ದ ನೀರಿಗಿಂತಲೂ ಅಧಿಕ ಪ್ರಮಾಣದ ನೀರು ಹರಿದುಹೋಗಿದೆ. ಇದೀಗ ಜಲಪಾತೋತ್ಸವದ ಹೆಸರಿನಲ್ಲಿ 2ರಿಂದ 3 ಟಿಎಂಸಿ ಅಡಿ ನೀರನ್ನು ವ್ಯರ್ಥ ಮಾಡುವುದು ಎಷ್ಟರಮಟ್ಟಿಗೆ ಸರಿ. ಒಮ್ಮೆ ಮುಂದಕ್ಕೆ ಹರಿಸಿದ ನೀರನ್ನು ಮತ್ತೆ ಹಿಂದಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ಹೀಗಾಗಿ ಜಲಪಾತೋತ್ಸವದ ಹೆಸರಿನಲ್ಲಿ ಸಾಕಷ್ಟು ಪ್ರಮಾಣದ ನೀರು ತಮಿಳುನಾಡಿಗೆ ಸೇರುವುದು ನಿಶ್ಚಿತವಾಗಿದೆ.

ಭರಚುಕ್ಕಿಯಲ್ಲಿ ಜಲಪಾತೋತ್ಸವವಿಲ್ಲ: ಗಗನಚುಕ್ಕಿಯಲ್ಲಿ ಜಲಪಾತೋತ್ಸವ ನಡೆದ ಸಮಯದಲ್ಲಿ ಭರಚುಕ್ಕಿಯಲ್ಲೂ ಜಲಪಾತೋತ್ಸವ ಆಚರಿಸಲಾಗುತ್ತಿತ್ತು. ಗಗನಚುಕ್ಕಿಗೆ ಹರಿಸಲಾಗುವ ನೀರೇ ಭರಚುಕ್ಕಿಯ ಸೊಬಗನ್ನೂ ಹೆಚ್ಚಿಸುತ್ತದೆ. ಇವೆರಡು ಅವಳಿ ಜಲಪಾತಗಳಾಗಿದ್ದು, ಗಗನಚುಕ್ಕಿ ಮಂಡ್ಯ ಜಿಲ್ಲೆಗೂ, ಭರಚುಕ್ಕಿ ಚಾಮರಾಜನಗರ ಜಿಲ್ಲೆಗೂ ಸೇರಿದೆ. ಆದರೆ, ಚಾಮರಾಜನಗರ ಜಿಲ್ಲಾಡಳಿತ ಭರಚುಕ್ಕಿ ಜಲಪಾತೋತ್ಸವ ಆಚರಣೆಗೆ ಒಲವು ತೋರಿಲ್ಲ. ಮಂಡ್ಯ ಜಿಲ್ಲಾಡಳಿತ ಮಾತ್ರ ಜಲಪಾತೋತ್ಸವಕ್ಕೆ ಹೆಚ್ಚಿನ ಉತ್ಸಾಹ ತೋರುತ್ತಿರುವುದರ ಕಾರಣ ತಿಳಿದಿಲ್ಲ.

ಹೆಚ್‌ಡಿಕೆ ಬಿಡುಗಡೆ ಮಾಡಿದ್ದ ಹಣ: ಹೆಚ್‌ .ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಗಗನಚುಕ್ಕಿ ಜಲಪಾತೋತ್ಸವಕ್ಕೆ ಬಿಡುಗಡೆ ಮಾಡಿದ್ದ 50 ಲಕ್ಷ ರೂ. ಹಣ ಕಾರಣಾಂತರಗಳಿಂದ ಖರ್ಚಾಗಿರಲಿಲ್ಲ. ಹಾಗಾಗಿ ಆ ಹಣದ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 30 ಲಕ್ಷ ರೂ. ಹಣವೂ ಸೇರಿದಂತೆ ಒಂದು ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಲಾಗುತ್ತಿದೆ. ಇದರಿಂದ ರೈತರಿಗಾಗಲೀ, ಸಾರ್ವಜನಿಕರಿಗಾಗಲೀ ಯಾವ ಪ್ರಯೋಜನವಾಗಲಿದೆ ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ.

●ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next