Advertisement
ಮಂಡ್ಯ ವಿಶ್ವವಿದ್ಯಾಲಯದಡಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಡಿಯಲ್ಲೇ ಪರೀಕ್ಷೆ ಬರೆಯಲು ಹಾಗೂ ಶಿಕ್ಷಣ ಮುಂದು ವರೆಸುವಂತೆ ಒತ್ತಾಯಿಸಿ ಗುರುವಾರ ತರಗತಿ ಬಹಿಷ್ಕರಿಸಿ ಮತ್ತೆ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ನಗರದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಜಮಾಯಿಸಿದ ಸಾವಿರಾರು ವಿದ್ಯಾರ್ಥಿಗಳು ಮಹಾವಿದ್ಯಾಲಯದ ಪ್ರಾಂಶುಪಾಲರು, ಆಡಳಿತ ವರ್ಗ ಹಾಗೂ ಸರ್ಕಾರದ ಗೊಂದಲ ಸೃಷ್ಟಿಸುತ್ತಿರುವುದರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಪದವಿ ತರಗತಿಯ ಪರೀಕ್ಷೆ ಮುಗಿದಿದ್ದು ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಸ್ನಾತಕೋತ್ತರ ತರಗತಿಗಳಿಗೆ ಮುಖ್ಯ ಪರೀಕ್ಷೆ ನಡೆಯಬೇಕಾಗಿದೆ. ಆದರೆ,ಇದುವರೆಗೂ ಪರೀಕ್ಷೆ ನಡೆಸಿಲ್ಲ. ಇದರ ನಡುವೆಯೂ ಪ್ರಾಂಶುಪಾಲರು ಎರಡನೇ ಸೆಮಿಸ್ಟರ್‌ತರಗತಿ ನಡೆಸಲು ತೀರ್ಮಾನಿಸಿದ್ದಾರೆ. ಇದು ನಮ್ಮ ಶೈಕ್ಷಣಿಕ ಬದುಕನ್ನು ಅಂಧಕಾರಕ್ಕೆ ದೂಡುವ ಪ್ರಯತ್ನ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಯಾರಲ್ಲಿ ಹೇಳಬೇಕೆಂದು ಪರಿತಪಿಸುತ್ತಿದ್ದೇವೆ. ಆದ್ದರಿಂದ ಕೂಡಲೇ ಮಂಡ್ಯ ವಿಶ್ವವಿದ್ಯಾಲಯಕ್ಕೆ ನಿಯಮಬದ್ಧವಾಗಿ ಪ್ರವೇಶಾತಿ ಪಡೆದಿದ್ದೇವೆ. ಅದರಂತೆ ಮುಂದಿನ ಪರೀಕ್ಷೆಗಳು ಹಾಗೂ ಶೈಕ್ಷಣಿಕವಾಗಿ ಮಂಡ್ಯ ವಿಶ್ವವಿದ್ಯಾಲಯದಡಿಯಲ್ಲೇ ನಡೆಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ವಿರುದ್ಧವೂ ಸಿಟ್ಟು: ಈ ವಿಚಾರದ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಾರಿ ಖುದ್ದಾಗಿ ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿ ಪರಿಹರಿಸಬೇಕು ಎಂದು ಪಟ್ಟು ಹಿಡಿದರು. ಯಾವ ಅಧಿಕಾರಿಗಳೂ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಾದ ಎಂ.ಪಿ. ಗುರುಪ್ರಸಾದ್, ಚಂದನ್, ಕೆ.ಡಿ.ಋತು, ಕೆ.ಎಸ್. ಸ್ವಾತಿ, ಎಂ.ಕೆ.ಹೇಮಾ, ಪಿ.ಕಾವ್ಯಶ್ರೀ, ಆರ್.ವಿ. ದಿವ್ಯಾ, ಅರ್.ಪ್ರಿಯಾ, ಡಿ.ಇಂದುಜಾ, ಚಾಂದಿನಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಾಂಶುಪಾಲರ ಒತ್ತಡ: ಮಂಡ್ಯ ವಿವಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಡಿ ಪರೀಕ್ಷೆ ಬರೆಯುವಂತೆ ಸರ್ಕಾರದ ಜಂಟಿ ನಿರ್ದೇಶಕರು ಸೂಚಿಸಿದ್ದಾರೆ. ಆದರೆ, ಪ್ರಾಂಶುಪಾಲರು ಈ ವಿಚಾರವಾಗಿವಿದ್ಯಾರ್ಥಿಗಳಿಗೆ ಮಾಹಿತಿ ನೀಡದೆ ಹಿಂದೇಟು ಹಾಕುತ್ತಿದ್ದಾರೆ. ಮಹಾವಿದ್ಯಾಲಯದ ಅಡಿಯಲ್ಲೇ ಪರೀಕ್ಷೆ ಬರೆಯುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ರಸ್ತೆ ತಡೆಗೆ ವಿಫಲ ಯತ್ನ: ಮಂಡ್ಯ ವಿಶ್ವವಿದ್ಯಾಲಯ ಗೊಂದಲ ನಿವಾರಣೆಗೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗಮಿಸಿ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಾರದ ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಲು ನಿರ್ಧರಿಸಿದರು. ಆಗ ಪೊಲೀಸರು ಮಧ್ಯೆ ಪ್ರವೇಶಿಸಿ ಅನುಮತಿ ಇಲ್ಲದೆ ರಸ್ತೆ ತಡೆ ನಡೆಸುವಂತಿಲ್ಲ ಎಂದು ಹೇಳಿದಾಗ, ವಿದ್ಯಾರ್ಥಿಗಳು ಅನುಮತಿ ನೀಡುವಂತೆ ಮನವಿ ಮಾಡಿದರು. ಆದರೆ ಪೊಲೀಸರು ಅದಕ್ಕೆ ಸಮ್ಮತಿ ಸೂಚಿಸಲಿಲ್ಲ.