Advertisement

Mandya: ಭತ್ತದ ಸಸಿ ನಾಟಿ ಮಾಡಿದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

06:33 PM Aug 11, 2024 | Team Udayavani |

ಮಂಡ್ಯ:  ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಲಕ್ಷ್ಮಣ ಎಂಬವರ ಜಮೀನಿನಲ್ಲಿ ಭಾನುವಾರ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವ ಎಚ್. ​ಡಿ. ಕುಮಾರಸ್ವಾಮಿ (H.D.Kumaraswamy) ಭತ್ತದ ಸಸಿ ನಾಟಿ ಮಾಡುವ ಮೂಲಕ ಎಲ್ಲರ ಗಮನಸೆಳೆದರು.

Advertisement

ಆ  ಬಳಿಕ ಮಾತನಾಡಿದ ಅವರು, 2018ರಲ್ಲೂ ಕಾವೇರಿ ಮಾತೆಗೆ ಪೂಜೆ ಮಾಡಿ ಭತ್ತ ನಾಟಿ ಮಾಡಿದ್ದೆ, ಅದರಂತೆ ಜಲಾಶಯ  ಭರ್ತಿಯಾಗಿದೆ. ಈ ಬಾರಿಯೂ ಭತ್ತ ನಾಟಿಗೆ ಬರಲು ಮನವಿ ಮಾಡಿದ್ದರು, ರೈತರ ಮನವಿ ಮೇರೆಗೆ ಭತ್ತ ನಾಟಿಗೆ ಬಂದಿದ್ದೇನೆ.  ಭೂಮಿ ತಾಯಿ ಮಕ್ಕಳಾದ ನಮ್ಮೆಲ್ಲರಿಗೂ ಭೂಮಿಯೇ ಸರ್ವಸ್ವ. ಬೇಸಾಯವೇ ಬದುಕು. ಭತ್ತದ ನಾಟಿ ನನ್ನ ಮನೆಯ ಕಾರ್ಯಕ್ರಮವೇ ಆಗಿತ್ತು. ರೈತಾಪಿ ಜನರೊಂದಿಗೆ ಇಂತಹ ಸಾರ್ಥಕ, ಅನನ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನಲ್ಲಿ ಧನ್ಯತೆಯ ಭಾವ ಉಂಟು ಮಾಡಿದೆ ಎಂದರು.

ನನ್ನ ಆರೋಗ್ಯದ ಬಗ್ಗೆ ಚಿಂತೆಯಿಲ್ಲ:
ಭತ್ತ ನಾಟಿಯಲ್ಲಿ ನಾನು ಭಾಗವಹಿಸಿರುವುದು ರೈತರಿಗೆ ಬಹಳ ಸಂತೋಷವಾಗಿದೆ. ಎಚ್‌.ಡಿ.ದೇವೇಗೌಡ ಅವರು ರೈತ ಕುಟುಂಬದಿಂದ ಬಂದಿದ್ದು, ಬೇಸಾಯವು ರಕ್ತಗತವಾಗಿ ಬಂದಿದೆ.  ಕಳೆದ ವರ್ಷ ಮಳೆ ಸಮಸ್ಯೆಯಿಂದ ರೈತರು ಬಹಳ ತೊಂದರೆ   ಅನುಭವಿಸಿದ್ದು, ಈ ಬಾರಿ ಉತ್ತಮ ಮಳೆಯಿಂದಾಗಿ ರೈತರು ಬೇಸಾಯ ಮಾಡಲು ಉತ್ಸುಕರಾಗಿದ್ದಾರೆ ಎಂದರು.

ನನಗೆ ಮೂರು ಬಾರಿ ತಾಯಿ ಚಾಮುಂಡೇಶ್ವರಿ ಜನ್ಮ ಕೊಟ್ಟಿದ್ದಾಳೆ. ನನಗೆ ನನ್ನ ಆರೋಗ್ಯದ ಬಗ್ಗೆ ಚಿಂತೆಯಿಲ್ಲ, ನಾಡಿನ ರೈತರು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಹಾಗೂ ನಮ್ಮ ಯುವಕರಿಗೆ ಉದ್ಯೋಗ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಇನ್ನು ಮಂಡ್ಯದಲ್ಲಿ ನೂರಾರು ಯುವಕರು ಉದ್ಯೋಗಕ್ಕಾಗಿ ನನ್ನ ಬಳಿ ಮನವಿ ಸಲ್ಲಿಸಿದ್ದೀರಿ, ನಿಮಗೆ ಒಂದು ಮಾತು ಕೊಡುತ್ತೇನೆ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಮಾತುಕತೆ ನಡೆಸಿದ್ದೇನೆ, ಅಲ್ಲಿ ನಿಮಗೆ ಉದ್ಯೋಗ ಕಲ್ಪಿಸುತ್ತೇನೆ ಎಂದು ಹೇಳಿದರು.

Advertisement

ಕೃಷಿ ಖಾತೆಯನ್ನೇ  ನಿರೀಕ್ಷಿಸಿದ್ದೆ:

“ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ನನಗೆ ಕೃಷಿ ಖಾತೆ ಸಿಗಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆ, ಕೊನೆಗೆ ಆ ಖಾತೆ ಸಿಗಲಿಲ್ಲ. ಆದರೆ ಈಗಿನ ಕೇಂದ್ರ ಕೃಷಿ ಸಚಿವರಾದ ಶಿವರಾಜ್‌ ಸಿಂಗ್‌ ಚೌಹಾಣ್‌  ಮಧ್ಯಪ್ರದೇಶದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಅನುಭವ ಹೊಂದಿದವರು. ರೈತರ ಸಮಸ್ಯೆಗಳ ಬಗ್ಗೆ ಅವರಿಗೂ ತಿಳಿದಿದೆ. ರೈತ ಸಮುದಾಯಕ್ಕೆ ವಿಶ್ವಾಸ ತುಂಬಿ, ರೈತ ಸಮುದಾಯಕ್ಕೆ ಸಂಪೂರ್ಣ ಬಲ ತುಂಬುವ ಕೆಲಸ ಮಾಡುವರು ಎಂಬ ವಿಶ್ವಾಸ ನನಗಿದೆ. ಶಿವರಾಜ್‌ ಸಿಂಗ್‌ ಚೌಹಾಣ್‌ರಿಂದ ದೇಶದ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ  ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next