Advertisement

Invest Karnataka: ಸಮಾವೇಶಕ್ಕೆ ಸಹಕಾರ ಕೋರಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌  

09:49 PM Sep 10, 2024 | Team Udayavani |

ಬೆಂಗಳೂರು: ಮುಂಬರುವ ಫೆಬ್ರವರಿಯಲ್ಲಿ 12-14  ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಹೆಚ್ಚಿನ ಹೂಡಿಕೆ ನಿರೀಕ್ಷಿಸಿ ಕೇಂದ್ರ ಸರ್ಕಾರದ ಸಹಕಾರ ಕೋರಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌  ಮಂಗಳವಾರ ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ನಿರ್ಮಲಾ ಸೀತಾರಾಮನ್‌ ಹಾಗೂ ಎಚ್‌.ಡಿ. ಕುಮಾರಸ್ವಾಮಿಯವರ  ಭೇಟಿಯಾಗಿ ಚರ್ಚಿಸಿದರು.

Advertisement

ಮೊದಲಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿದ ಅವರು, ರಕ್ಷಣಾ ಸಾಧನಗಳ ಉತ್ಪಾದನೆ ಮತ್ತು ಅವುಗಳ ರಫ್ತಿನ ಮೇಲೆ ಇರುವ ನಿರ್ಬಂಧದ ತೆರವು, ಡಿಫೆನ್ಸ್‌ ಕಾರಿಡಾರ್‌ ಸ್ಥಾಪನೆಯ ಜರೂರು, ರಾಜ್ಯದಲ್ಲಿರುವ ಬಿಎಚ್‌ಇಎಲ್‌ ಮತ್ತು ಬಿಇಎಂಎಲ್‌ ತರಹದ ಕೇಂದ್ರೋದ್ಯಮಗಳಲ್ಲಿ ಹೂಡಿಕೆ ಹೆಚ್ಚಳಕ್ಕೆ ಉತ್ತೇಜನ ಮತ್ತು ಕಾರವಾರದ ನೌಕಾ ವೈಮಾನಿಕ ನಿಲ್ದಾಣದ ರನ್‌-ವೇಯನ್ನು ಈಗಿರುವ 2 ಕಿ.ಮೀ.ನಿಂದ 2.7 ಕಿ.ಮೀ.ವರೆಗೆ ವಿಸ್ತರಿಸಲು ಬೇಕಾಗಿರುವ ನೆರವಿನ ಬಗ್ಗೆ ಚರ್ಚಿಸಿದರು.

ರಾಜ್ಯದವರೇ ಆದ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿಯವರ ಭೇಟಿಯಾದ ಪಾಟೀಲ್‌ ಮೇಲಿನ ಸಂಗತಿಗಳ ಜತೆಗೆ ಕರ್ನಾಟಕದ ಕೈಗಾರಿಕಾ ವಲಯದ ಬೆಳವಣಿಗೆಗೆ ಅಗತ್ಯವಿರುವ ನಿರ್ಣಾಯಕ ನೆರವಿನ ಕುರಿತು ವಿಚಾರ ವಿನಿಮಯ ನಡೆಸಿದರು. ವಿದ್ಯುಚ್ಛಾ ಲಿತ ವಾಹನ (ಇ.ವಿ.) ವಲಯದಲ್ಲಿ ನವೋದ್ಯಮಗಳಿಗೆ 10 ಸಾವಿರ ಕೋಟಿ ರೂ. ಪೂರೈಸಲು ಎದುರಾಗಿರುವ ಸವಾಲು, ಕೇಂದ್ರವು ಇತ್ತೀಚೆಗೆ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಯೋಜನೆಯಡಿ ರೂಪಿಸಿರುವ 12 ಸ್ಮಾರ್ಟ್‌ ಸಿಟಿ ಯೋಜನೆಯಿಂದ ಕರ್ನಾಟಕ ಹೊರಗಿಟ್ಟ ಬಗ್ಗೆ ಮಾತುಕತೆ ನಡೆಸಿದರು.

Advertisement

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಬೇಗನೆ ಹಾಳಾಗುವ ಪದಾರ್ಥಗಳ ವಿಮಾನದ ಮೂಲಕ ಹೊರದೇಶಗಳಿಗೆ ಕಳುಹಿಸುತ್ತಿರುವ ಸಣ್ಣ ಪ್ರಮಾಣದ ರಫ್ತುದಾರರ ಮೇಲೆ ಹೇರಿರುವ ಜಿಎಸ್‌ಟಿ ತೆರಿಗೆ ರದ್ದುಪಡಿಸಬೇಕು ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳ ಆಮದಿನ ಮೇಲೆ ಈಗ ಇರುವ ಭಾರೀ ಆಮದು ತೆರಿಗೆ ಮತ್ತು ಸುಂಕ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next