Advertisement

CM Siddaramaiah ವಿರುದ್ಧ ಲೋಕಾಯುಕ್ತದಲ್ಲಿ 61 ಪ್ರಕರಣ: ಎಚ್‌.ಡಿ.ಕುಮಾರಸ್ವಾಮಿ

12:44 AM Aug 22, 2024 | Team Udayavani |

ಬೆಂಗಳೂರು: ಮುಡಾ ಹಗರಣದಲ್ಲಿ ಸಿಲುಕಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನಾವು ಹೇಳಿದ್ದೇವಾ? ಇದು ಸರಕಾರ ಮಾಡಿಕೊಂಡಿರುವ ಸ್ವಯಂಕೃತ ಅಪರಾಧ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹರಿಹಾಯ್ದರು.

Advertisement

ಪಕ್ಷದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2014ರಿಂದ ಇದುವರೆಗೆ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ, ಕರ್ತವ್ಯಲೋಪ ಸೇರಿ ಲೋಕಾಯುಕ್ತದಲ್ಲಿ 61 ಪ್ರಕರಣಗಳಿವೆ. ಈ ಪೈಕಿ 50 ಪ್ರಕರಣಗಳು ತನಿಖೆ ಹಂತಕ್ಕೇ ಬಂದಿಲ್ಲ ಎಂದರು. ಹಿಂದೆ ಇದ್ದ ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಅವರೇ ಒಪ್ಪಿಕೊಂಡಿದ್ದಂತೆ ಸಂಸ್ಥೆಯ ಮುಂದೆ 7 ಸಾವಿರ ಪ್ರಕರಣಗಳಿದ್ದು ಜ್ಯೇಷ್ಠತೆ ಆಧಾರದ ಮೇಲೆ ಇತ್ಯರ್ಥ ಮಾಡಲಾಗುತ್ತಿದೆ. ವಿಳಂಬ ಮಾಡುತ್ತಿಲ್ಲ ಎಂದಿ
ದ್ದರು. ಅನಂತರ ಭಾಸ್ಕರ ರಾವ್‌ ಎಂಬುವರನ್ನು ಕೂರಿಸಿ ಲೋಕಾಯುಕ್ತದ ನರ ಕಿತ್ತು ಎಸಿಬಿ ಮೂಲಕ ತಮ್ಮ ವಿರುದ್ಧದ ಪ್ರಕರಣಗಳನ್ನೆಲ್ಲ ಮುಚ್ಚಿ ಹಾಕಿಕೊಂಡರು.

ಇಂತಹವರು ನನ್ನ ಜೀವನ ತೆರೆದ ಪುಸ್ತಕ, ಹಿಂದುಳಿದ ವರ್ಗದ ನಾಯಕ ಎಂಬ ಕಾರಣಕ್ಕೆ ಹೊಟ್ಟೆ ಕಿಚ್ಚು ಎಂದೆಲ್ಲ ಭಜನೆ ಮಾಡುತ್ತಿದ್ದಾರೆ. ನೀವು ಸರಿ ಇದ್ದಿದ್ದರೆ ವಿರೋಧ ಪಕ್ಷ ಏನು ಮಾಡಲು ಸಾಧ್ಯ? 2018ರಲ್ಲಿ ನನ್ನ ವಿರುದ್ಧ ಇದ್ದ ಪ್ರಕರಣಗಳನ್ನು ಮುಚ್ಚಿ ಹಾಕಿಸಲು ಸಾಧ್ಯವಿರಲಿಲ್ಲವೇ? ನಾನು ಮನಸ್ಸು ಮಾಡಿದ್ದರೆ 5 ನಿಮಿಷದಲ್ಲಿ ಕ್ಲೋಸ್‌ ಮಾಡಿಸುತ್ತಿದ್ದೆ. ಆದರೆ, ನಾನು ನಿಮ್ಮಂತೆ ಅಲ್ಲ. ನನ್ನನ್ನೂ ಒಳಗೊಂಡಂತೆ ತನಿಖೆಗೆ ಆದೇಶಿಸಿಕೊಂಡಿದ್ದವನು ಎಂದು ಹೇಳಿದರು.

ಸಿಎಂ ಕಚೇರಿಯಿಂದಲೇ ಮಾಹಿತಿ
ಅಂದು ನಿವೃತ್ತ ಐಪಿಎಸ್‌ ಅಧಿಕಾರಿ (ಕೆಂಪಯ್ಯ)ಯನ್ನು ಇಟ್ಟುಕೊಂಡು ಜೈಲಿಗೆ ಕಳುಹಿಸಲು ನೋಡಿದ ಸಿದ್ದರಾಮಯ್ಯ ಇಂದು ಕಾನೂನು ಸಲಹೆಗಾರ (ಪೊನ್ನಣ್ಣ)ನನ್ನು ಇಟ್ಟುಕೊಂಡು ಅದೇ ಪ್ರಯತ್ನ ಮಾಡುತ್ತಿದ್ದಾರೆ. ನೂರು ಸಿದ್ದರಾಮಯ್ಯ ಬಂದರೂ ಅದು ಸಾಧ್ಯವಿಲ್ಲ. ಪೊನ್ನಣ್ಣ, ನೀನೊಬ್ಬನೇ ಬುದ್ಧಿವಂತ ಅಲ್ಲ. ನಿನಗೊಬ್ಬನಿಗೇ ಕಾನೂನು ತಿಳಿದಿರುವುದಲ್ಲ. ರಾತ್ರಿಯೆಲ್ಲ ಕೂತು ಏನು ಚರ್ಚಿಸಿದ್ದೀರಿ ಗೊತ್ತಿದೆ. ಸಿಎಂ ಕಚೇರಿಯಿಂದಲೇ ನನಗೆ ಮಾಹಿತಿ ಕೊಡುವವರಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಅಷ್ಟು ಸುಲಭವಾಗಿ ಬಿಡಲ್ಲ
ಬೇಲೆಕೇರಿ ಬಂದರಿನ ಅದಿರು ಕದ್ದು ಮಾರಿದವರ ಮೇಲೆ ಸಿಬಿಐ ಚಾರ್ಜ್‌ಶೀಟ್‌ ಹಾಕಿತ್ತು. 2015ರಲ್ಲಿ ಅಂತಹ 105 ಅರ್ಜಿಗಳ ಪೈಕಿ ಸಿದ್ದರಾಮಯ್ಯ ಎಷ್ಟಕ್ಕೆ ಗಣಿಗಾರಿಕೆ ನಡೆಸಲು ಅನುಮತಿ ಕೊಟ್ಟಿಲ್ಲ ಎಂದು ದಾಖಲೆಗಳನ್ನು ಪ್ರದರ್ಶಿಸಿ ಒಳಗಿಟ್ಟುಕೊಂಡ ಕುಮಾರಸ್ವಾಮಿ, ಇನ್ನೂ ಸಮಯ ಇದೆ. ಆತುರ ಇಲ್ಲ.

Advertisement

ಎಲ್ಲವನ್ನೂ ಈಗಲೇ ಬಹಿರಂಗಗೊಳಿಸಿದರೆ ದಾಖಲೆ ತಿದ್ದುವ ನಿಪುಣರಿದ್ದಾರೆ. ನಾನೂ ಸೇಫ್ ಗೇಮ್‌ ಆಡಬೇಕಿದೆ. ಅಷ್ಟಿಲ್ಲದಿದ್ದರೆ, ಬೈರತಿ ಸುರೇಶ್‌ ಹೆಲಿಕಾಪ್ಟರ್‌ನಲ್ಲಿ ತಂದ ದಾಖಲೆಗಳೇನಾದವು? ಎಲ್ಲಿಗೆ ಹೋದವು? ಕಪ್ಪು ಚುಕ್ಕೆ ಇಲ್ಲವಂತೆ. ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ನೇರ ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next