Advertisement

ಮಂಡ್ಯ: ಸಂಸದೆ, ಶಾಸಕರ ನಡುವೆ ಮಾತಿನ ಜಟಾಪಟಿ

08:23 PM Aug 18, 2021 | Team Udayavani |

ಮಂಡ್ಯ: ಕೋವಿಡ್‌ 3ನೇ ಅಲೆ ಭೀತಿ ಹಾಗೂ ಜಿಲ್ಲೆಯ ಸಮಸ್ಯೆಗಳಿಗೆ ಚರ್ಚೆ ಹಾಗೂ ಪರಿಹಾರ ಕಂಡುಕೊಳ್ಳಬೇಕಾದ ಸಭೆಯನ್ನು ಜನಪ್ರತಿನಿಧಿ ಗಳು ತಮ್ಮ ವೈಯಕ್ತಿಕ ಟೀಕೆಗಳಿಗೆ ಬಳಸಿಕೊಂಡ ಘಟನೆ ಬುಧವಾರ ನಡೆದಿದೆ.

Advertisement

ಜಿ.ಪಂ. ಸಭಾಂಗಣದಲ್ಲಿ ಸಂಸದೆ ಸುಮಲತಾ ಅಂಬರೀಶ್‌ ಅಧ್ಯಕ್ಷತೆಯಲ್ಲಿ ದಿಶಾ ಸಭೆ ನಿಗದಿಪಡಿಸಲಾಗಿತ್ತು. ಸಂಸದರ ಲೆಟರ್‌ ಹೆಡ್‌ ದುರ್ಬಳಕೆ, ಸಂಬಂಧಪಡದವರು ಸಭೆಯಲ್ಲಿ ಹಾಜರು, ಸಭೆ ನಡೆಸುತ್ತಿರುವುದೇ ಅಕ್ರಮ ಎಂಬ ವಿಷಯದಲ್ಲಿ ಚರ್ಚೆ, ಮಾತಿನ ಚಕಮಕಿ ನಡೆದು ಸುಮಾರು 2 ಗಂಟೆ ವಿಳಂಬವಾಗಿ ಸಭೆ ಆರಂಭವಾಯಿತು.

ಮಾತಿನ ಚಕಮಕಿ
ನೀವು ಎಂಎಲ್‌ಎ ಆದರೆ, ನಾನು ಎಂಪಿ. ಸಭೆ ಕರೆದಿರುವುದು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು. ಸುಮ್ಮನೆ ಅನಗತ್ಯ ಚರ್ಚೆಗಳಿಗೆ ಸಮಯ ಕಳೆಯುವುದಕ್ಕಲ್ಲ ಎಂದು ಸಂಸದೆ ಸುಮಲತಾ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಜೆಡಿಎಸ್‌ ಶಾಸಕರು ಹಾಜರು
ದಿಶಾ ಸಭೆಗೆ ಇದೇ ಮೊದಲ ಬಾರಿಗೆ ಜೆಡಿಎಸ್‌ ಶಾಸಕರು ಹಾಜರಾಗಿದ್ದರು. ಕಳೆದ 8 ಸಭೆಗಳಿಗೆ ಗೈರು ಹಾಜರಾಗಿದ್ದ ಶಾಸಕರು, ಬುಧವಾರ ಸಭೆ ಆರಂಭವಾಗುತ್ತಿದ್ದಂತೆ ಪ್ರತ್ಯಕ್ಷರಾಗಿದ್ದರು. ಅಲ್ಲದೆ, ವಿಧಾನ ಪರಿಷತ್‌ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಎನ್‌. ಅಪ್ಪಾಜಿಗೌಡ ಅವರು ಆಹ್ವಾನವಿಲ್ಲದಿದ್ದರೂ ಹಾಜರಾಗಿದ್ದರು. ಆಹ್ವಾನ ನೀಡದ ಬಗ್ಗೆ ಕೆ.ಟಿ. ಶ್ರೀಕಂಠೇಗೌಡ ಪ್ರಸ್ತಾಪ ಮಾಡಿದಾಗ ಸಭೆಯಲ್ಲಿ ಗೊಂದಲ ಉಂಟಾಯಿತು.

ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯು ವೈಜ್ಞಾನಿಕ ರೀತಿಯಲ್ಲಿ ಸಾಗುತ್ತಿಲ್ಲ. ಕೆಲವೆಡೆ ಸರ್ವೀಸ್‌ ರಸ್ತೆಗಳು, ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಮತ್ತು ಹೊರ ಹೋಗುವ ಅಂಡರ್‌ ಪಾಸ್‌ಗಳ ಸಂಪರ್ಕ ವ್ಯವಸ್ಥೆಯನ್ನು ಕೈಬಿಡಲಾಗಿದೆ. ಕೇಂದ್ರ ಭೂ ಸಾರಿಗೆ ಸಚಿವರು ಹಾಗೂ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಅವ್ಯವಸ್ಥೆಗಳ ಕುರಿತಾಗಿ ಚರ್ಚಿಸಲಾಗಿದೆ.
-ಸುಮಲತಾ ಅಂಬರೀಶ್‌, ಸಂಸದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next