Advertisement
ತಾಲೂಕಿನ ಕೊತ್ತತ್ತಿ ಗ್ರಾಮದ ಶ್ರೀ ಭೂಮಿ ಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ತಮ್ಮಣ್ಣ ಅವರು ಅರಣ್ಯ ಇಲಾಖೆ ಅನುಮತಿ ಪಡೆಯದೆ ದೇವಸ್ಥಾನದ ವ್ಯಾಪ್ತಿಯಲ್ಲಿ ಬೆಳೆದಿದ್ದ ನೂರಾರು ನೀಲಗಿರಿ ಮರಗಳನ್ನು ಅಕ್ರಮವಾಗಿ ಕಡಿದು ಹಾಕಿದ್ದಾರೆ. ಬೆಲೆ ಬಾಳುವ ಬೃಹದಾಕಾರದ ಎರಡು ಆಲದ ಮರ ಹಾಗೂ ಒಂದು ಅರಳೀಮರವನ್ನು ಧರೆಗುರುಳಿಸಿದ್ದಾರೆ.
Related Articles
Advertisement
2005ರಲ್ಲಿ ಶ್ರೀ ಭೂಮಿ ಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ಗೆ ಅರಣ್ಯ ನೆಡುತೋಪು ಜಾಗವನ್ನು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ 30 ವರ್ಷ ಗುತ್ತಿಗೆಗೆ ನೀಡಲಾಗಿತ್ತು. ಗುತ್ತಿಗೆ ಪತ್ರದ ಷರತ್ತಿನಲ್ಲಿ ಅರಣ್ಯ ನೆಡುತೋಪು ಪ್ರದೇಶದಲ್ಲಿ ಬೆಳೆದು ನಿಂತಿರುವ ಮರಗಳನ್ನು ಕಡಿಯಬಾರದು. ಆ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸದಂತೆ ಷರತ್ತು ವಿಧಿಸಲಾಗಿತ್ತು.
ಆದರೆ, ಶ್ರೀ ಭೂಮಿ ಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ತಮ್ಮಣ್ಣ ಅವರು ಅರಣ್ಯ ಇಲಾಖೆ ಅನುಮತಿಯನ್ನು ಪಡೆಯದೆ, ಅಕ್ರಮವಾಗಿ ಬೆಲೆ ಬಾಳುವ ಮರಗಳನ್ನು ಕಡಿದು ಹಾಕಿದ್ದಾರೆ. ಮರಗಳನ್ನು ಯಾರಿಗೂ ಗೊತ್ತಾಗದಂತೆ ಮಾರಿ ಹಣ ಲಪಟಾಯಿಸುವ ಸಂಚು ನಡೆಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಸುಂದರ ಪರಿಸರ ಮಾಯ: ಶ್ರೀ ಭೂಮಿ ಸಿದ್ದೇಶ್ವರ ದೇವಸ್ಥಾನದ ಸುತ್ತಲೂ ಅರಳಿ, ಆಲದ ಮರಗಳು ಬೆಳೆದು ನಿಂತು ಸುಂದರ ಪರಿಸರವನ್ನು ಸೃಷ್ಟಿಸಿಕೊಟ್ಟಿದ್ದವು. ಇದೇ ಅರಣ್ಯ ನೆಡುತೋಪಿನಲ್ಲಿ ಸಾವಿರಾರು ನೀಲಗಿರಿ ಮರಗಳು ಬೆಳೆದು ನಿಂತಿದ್ದವು. ಮರಗಳನ್ನು ಕಡಿದು ಉರುಳಿಸಿರುವುದರಿಂದ ಆ ಪರಿಸರದಲ್ಲಿ ಈಗ ಬೋಳಾದ ವಾತಾವರಣ ಕಂಡು ಬರುತ್ತಿದೆ. ಮರದ ರೆಂಬೆ-ಕೊಂಬೆಗಳನ್ನು ಮನಸೋಇಚ್ಛೆ ಕಡಿದು ಹಾಕಿರುವುದರಿಂದ ಅಂಗಹೂನವಾದ ಮರಗಳು ವಿಲಕ್ಷಣವಾಗಿ ಕಾಣುತ್ತಿವೆ. ತಬ್ಬಿ ಹಿಡಿಯಲು ಸಾಧ್ಯವಾಗದ ಮರಗಳು ಧರಶಾಹಿಯಾಗಿರುವುದನ್ನು ಕಂಡು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪಿಗಳ ಸುಳಿವಿಲ್ಲ: ಮೂರ್‍ನಾಲ್ಕು ದಿನಗಳ ಹಿಂದಷ್ಟೇ ಮಂಡ್ಯ ಸಮೀಪದ ಇಂಡುವಾಳು ಪ್ರಕೃತಿ ಉದ್ಯಾನದಲ್ಲಿ ಬೆಲೆ ಬಾಳುವ ತೇಗದ ಮರವೊಂದನ್ನು ಕಡಿದು ಸಾಗಿಸುವ ವೇಳೆ ವಾಹನ ಅಪಘಾತಕ್ಕೀಡಾಗಿದ್ದರಿಂದ ಮರಗಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಹುಣಸೂರು ಮೂಲದ ಮರಗಳ್ಳರು ಮರ ಕಡಿದು ಸಾಗಿಸುವ ಪ್ರಯತ್ನ ನಡೆಸಿದ್ದರೆಂದು ಗೊತ್ತಾಗಿತ್ತು. ವಾಹನದ ಚಾಲಕ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ನಿಜವಾದ ಕಳ್ಳರು ಯಾರೆಂಬುದನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆಯವರಿಗೆ ಇದುವರೆಗೂ ಸಾಧ್ಯವಾಗಿಲ್ಲ