Advertisement
ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆಯ ಕೊರತೆಯಿಂದ ಕಬ್ಬು ಬೆಳೆ ಬಹುತೇಕ ಹಾನಿಗೊಳಗಾಗಿದೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಹಿನ್ನಡೆಯಾಗಿದೆ. ಬಿತ್ತನೆ ಕಾರ್ಯವೂ ಕುಂಠಿತಗೊಂಡಿದೆ. ಭತ್ತದ ಬಿತ್ತನೆ ಒಂದು ಹೆಕ್ಟೇರ್ ಪ್ರದೇಶದಲ್ಲೂ ನಡೆಯದೆ ಶೂನ್ಯ ಆವರಿಸಿದೆ. ಸೂಚನೆ ನೀಡಿದೆ. ಕೃಷ್ಣರಾಜಸಾಗರ ಜಲಾಶಯದಲ್ಲಿ 96 ಅಡಿ ನೀರು ಸಂಗ್ರಹವಾದರಷ್ಟೇ ನಾಲೆಗಳ ಮೂಲಕ ಕೃಷಿಗೆ ನೀರು ಹರಿಸಲು ಸಾಧ್ಯ ಎಂಬುದು ನೀರಾವರಿ ಇಲಾಖೆ ಅಧಿಕಾರಿಗಳ ಮಾತಾಗಿದೆ.
Related Articles
Advertisement
ಕುಡಿಯುವ ನೀರಿಗೂ ತೊಂದರೆ: ಹಾಲಿ ಕೆಆರ್‌ಎಸ್‌ನಲ್ಲಿ ಸಂಗ್ರಹವಾಗಿರುವ ನೀರನ್ನು ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳ ಜನರ ಕುಡಿಯುವ ನೀರಿಗೆ ಮೀಸಲಿಡಲಾಗಿದೆ. ಈ ನೀರನ್ನು ಕೃಷಿ ಚಟುವಟಿಕೆಗೆ ಕೊಡಲು ಸಾಧ್ಯವೇ ಇಲ್ಲ. ಅಣೆಕಟ್ಟೆಯಲ್ಲಿ 96 ಅಡಿಗಿಂತಲೂ ಹೆಚ್ಚಿನ ನೀರು ಸಂಗ್ರಹವಾದಲ್ಲಿ ಮಾತ್ರ ಮುಂಗಾರು ಬೆಳೆಗೆ ಕಟ್ಟು ನೀರು ಪದ್ಧತಿಯಲ್ಲಿ
ನೀರು ಹರಿಸಲು ಸಾಧ್ಯ ಎಂದು ನೀರಾವರಿ ಸಲಹಾ ಸಮಿತಿ ತೀರ್ಮಾನ ಕೈಗೊಂಡಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.
ಜುಲೈ ಮೊದಲ ವಾರದಿಂದಲೇ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಬೇಕಿತ್ತು. ಮಳೆ ಪ್ರಮಾಣ ಕಡಿಮೆಯಾಗಿರುವುದು ಹಾಗೂ ನಾಲೆಗಳಲ್ಲಿ ನೀರು ಹರಿಸದ ಕಾರಣ ಬಿತ್ತನೆ ಕಾರ್ಯ ಇನ್ನೂ ಆರಂಭವಾಗಿಲ್ಲ. 10 ದಿನಗಳ ಕಾಲ ನಾಲೆಗಳಲ್ಲಿ ನೀರು ಹರಿಸಲು ನಿರ್ಧರಿಸಿರುವುದರಿಂದ ಇರುವ ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರಿಗೆ ಸೂಚನೆ ನೀಡಲಾಗಿದೆ.
ಭತ್ತದ ಬಿತ್ತನೆಯಲ್ಲಿ ಶೂನ್ಯ ಸಾಧನೆ: ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ ಜಿಲ್ಲೆಯಲ್ಲಿ 58350 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡುವ ಗುರಿ ಹೊಂದಿತ್ತು. ಈವರೆಗೂ ಒಂದೇ ಒಂದು ಎಕರೆ ಪ್ರದೇಶದಲ್ಲೂ ಬಿತ್ತನೆಯಾಗಿಲ್ಲ. ಬಿತ್ತನೆ ಬೀಜ, ರಸಗೊಬ್ಬರ ಅಗತ್ಯವಿರುವಷ್ಟು ದಾಸ್ತಾನು ಮಾಡಲಾಗಿದೆ. ಮಳೆ ಬೀಳುವುದನ್ನೇ ಕೃಷಿ ಇಲಾಖೆ ಮತ್ತು ರೈತರು ಎದುರು ನೋಡುತ್ತಿದ್ದಾರೆ.
ಜಿಲ್ಲೆಯ 225 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡುವ ಗುರಿ ಹೊಂದಿದೆ. 103 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ. 61865 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಬೇಕಿತ್ತಾದರೂ ಮಳೆ ಕೊರತೆಯಿಂದಾಗಿ ಕೇವಲ 100 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಮೂಲಕ ಶೇ. 4.5ರಷ್ಟು ಸಾಧನೆ ಮಾಡಲಾಗಿದೆ. ತೊಗರಿ ಬಿತ್ತನೆ 1290 ಹೆಕ್ಟೇರ್‌ನಲ್ಲಿ ಆಗಬೇಕಿತ್ತು. ಆದರೆ, 578 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 13340 ಹೆಕ್ಟೇರ್‌ನಲ್ಲಿ ಹುರುಳಿ ಬಿತ್ತನೆ ಮಾಡಬೇಕಿದೆ. ಕೇವಲ 360 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ. ಉದ್ದು 650 ಹೆಕ್ಟೇರ್ ಗುರಿಯಲ್ಲಿ 363 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದರೆ, ಹೆಸರು 535 ಹೆಕ್ಟೇರ್ ಗುರಿಯಲ್ಲಿ 270 ಹೆಕ್ಟೇರ್, ಅಲಸಂದೆ 8365 ಹೆಕ್ಟೇರ್ ಗುರಿಯ ಪೈಕಿ 7706 ಹೆಕ್ಟೇರ್ ಬಿತ್ತನೆ ನಡೆದಿದ್ದರೆ, 3670 ಹೆಕ್ಟೇರ್‌ನಲ್ಲಿ ಗುರಿ ಹೊಂದಿದ್ದ ಅವರೆ 103 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಮಳೆ ಕೊರತೆ ಕಾರಣದಿಂದಾಗಿ ಏಕದಳ ಮತ್ತು ದ್ವಿದಳ ಧಾನ್ಯಗಳ ಮೇಲೂ ತೀವ್ರ ಪರಿಣಾಮ ಬೀರಿದೆ. ಮಳೆ ಇಲ್ಲದ ಕಾರಣ ಈ ಬೆಳೆಗಳು ಒಣಗುವ ಹಂತಕ್ಕೆ ಬಂದು ನಿಂತಿವೆ. ಈಗಾಗಲೇ ಬೆಳೆ ನಷ್ಟ ಸಮೀಕ್ಷೆ ನಡೆಸಲಾಗುತ್ತಿದ್ದು, ಯಾವ ಪ್ರಮಾಣದಲ್ಲಿ ಬೆಳೆ ನಷ್ಟ ಆಗಿದೆ ಎಂಬುದನ್ನು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾದಲ್ಲಿ ಮಾತ್ರ ಕೃಷಿ ಚಟುವಟಿಕೆ ಚುರುಕುಗೊಳ್ಳಲಿದೆ. ಇಲ್ಲದಿದ್ದರೆ ಕೃಷಿ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಳೆರಾಯನನ್ನೇ ಎದುರು ನೋಡುತ್ತಿರುವ ರೈತರು ದಿಕ್ಕು ತೋಚದೆ ಅಸಹಾಯಕರಾಗಿ ಕುಳಿತಿದ್ದಾರೆ.