Advertisement

ಮನಸ್ಸಿದ್ದರೆ ಮಾರ್ಗ…

06:58 PM Jan 23, 2020 | mahesh |

“ಮನಸ್ಸಿದ್ದರೆ ಮಾರ್ಗ’ ಎಂಬ ಮಾತು ಎಲ್ಲರ ಜೀವನಕ್ಕೂ ತುಂಬ ಮುಖ್ಯವಾದುದು. ಆದರೆ, ಈ ಮಾತನ್ನು ಕೆಲವರಿಂದ ಮಾತ್ರ ಸಾಧ್ಯಗೊಳ್ಳಿಸಲಾಗುತ್ತದೆ. ನಿರಂತರ ಶ್ರಮ, ಅವಮಾನ, ಸೋಲುಗಳು ಮನುಷ್ಯನನ್ನು ಸಾಧನೆಯ ಹಾದಿಯ ಕಡೆಗೆ ಕರೆದೊಯ್ಯುತ್ತದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಆಗಿ ಅನೇಕ ಸೋಲುಗಳನ್ನು, ಅವಮಾನಗಳನ್ನು ಹಿಂದೆ ಹಾಕಿ ಒಂದು ಸಣ್ಣ ಹಳ್ಳಿಯಿಂದ ಬಂದು ರಂಗಭೂಮಿಯ ನಾಟಕಗಳ ಮೂಲಕ ಚಲನಚಿತ್ರಕ್ಕೆ ಪ್ರವೇಶ ಮಾಡಿ ಇಂದು ಎಲ್ಲರ ಮನೆಮಾತಾಗಿರುವ ಅದ್ಭುತ ರಂಗಭೂಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್‌ ಸರ್‌.

Advertisement

ಮಂಡ್ಯ ರಮೇಶ್‌ ಸರ್‌ ಭಾರತೀಯ ನಟ, ಹಾಸ್ಯನಟ, ನಿರ್ದೇಶಕ ಮತ್ತು ರಂಗಭೂಮಿ ಕಲಾವಿದರು. ಪ್ರಸ್ತುತ ಮೈಸೂರಿನ “ನಟನಾ ಸ್ಕೂಲ್‌ ಆಫ್ ಥಿಯೇರ್ಟರ್‌ ಆರ್ಟ್ಸ್’ ನ ಸ್ಥಾಪಕ ನಿರ್ದೇಶಕರು. ಇವರಿಗೆ ರಂಗಭೂಮಿ ಉಡುಪಿ ಇವರಿಂದ ನಮ್ಮ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಂದವರನ್ನು ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯವರು, ಮಂಡ್ಯ ರಮೇಶ್‌ ಅವರೊಂದಿಗೆ ವಿದ್ಯಾರ್ಥಿಗಳು ಮಾತುಕತೆ ನಡೆಸುವ ಸಲುವಾಗಿ “ಕಟ್ಟೆ ಪಂಚಾತಿಕೆ’ ಎನ್ನುವ ಒಂದು ಗಂಟೆಯ ಕಾರ್ಯಾಗಾರವನ್ನು ಆಯೋಜಿಸಿದರು. ಈ ಕಾರ್ಯಕ್ರಮದಲ್ಲಿ ಇವರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕಲೆಯೂ ಹೇಗೆ ಮಹತ್ವದ್ದು ಎನ್ನಿಸುತ್ತದೆ ಎನ್ನುವುದನ್ನು ತಿಳಿಸಿಕೊಟ್ಟರು. ಕಲೆಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. “ವಿದ್ಯಾರ್ಥಿಗಳು ಮೊಬೈಲ್‌ಗ‌ಳಿಂದ ದೂರವಿದ್ದು ಮನೆಯಲ್ಲಿರುವ ಹಿರಿಯರೊಂದಿಗೆ ಒಂದಿಷ್ಟು ಸಮಯ ಕಳೆದು ಅವರು ಹೇಳುವ ಕಥೆಗಳನ್ನು ಕೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆ ಜೊತೆಗೆ ಕಲೆಯನ್ನು ರೂಢಿಸಿಕೊಳ್ಳಬೇಕು’ ಎಂದು ಮಂಡ್ಯ ರಮೇಶ್‌ ಅವರು ಅತ್ಯಂತ ಸರಳವಾಗಿ ತಮ್ಮ ಕಲಾ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು . ಅವರಿಗೆ ಬಾಲ್ಯದಲ್ಲಿ ಆದ ಅವಮಾನಗಳನ್ನು ಹೇಗೆ ಸನ್ಮಾನದ ಹಾಗೆ ಸ್ವೀಕರಿಸಿದರು ಎನ್ನುವುದನ್ನು ಮನದಟ್ಟು ಮಾಡಿದರು.

ಹೀಗೆ 1982ರಲ್ಲಿ ರಂಗಭೂಮಿ ಜೀವನ ಪ್ರಾರಂಭಿಸಿದ ಇವರು ಇಂದು ಒಬ್ಬ ಉತ್ತಮ ರಂಗಕರ್ಮಿಯಾಗಿ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. 1995ರಲ್ಲಿ “ಜನುಮದ ಜೋಡಿ’ ಚಲನಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಇಂದಿಗೆ ಸುಮಾರು 150 ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕಿರುತರೆಯಲ್ಲಿಯೂ ಕೂಡ ತಮ್ಮ ನಟನಾ ಶೈಲಿಯನ್ನು ಜನರಿಗೆ ಪ್ರದರ್ಶಿಸಿದ್ದಾರೆ.

ಸಂದೇಶ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ತಮ್ಮ ಮುಡಿಗೆರಿಸಿಕೊಂಡಿರುವ ಇವರಿಗೆ ಪ್ರಸ್ತುತ ರಂಗಭೂಮಿ ಉಡುಪಿ ಇವರು ಎಂ.ಜಿ.ಎಂ ಕಾಲೇಜಿನಲ್ಲಿ “ರಂಗ ಕಣ್ಮಣಿ’ ಎನ್ನುವ ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ನೀಡಿ ಗೌರವಿಸಿದೆ.  ಅವರ ಸಾಧನೆಯ ಹಾದಿಯು ಯುವಜನರಿಗೆ ಪ್ರೇರಣೆ. ಅವರ ಅನುಭವದ ಮಾತುಗಳಲ್ಲಿ ಮಾರ್ಗದರ್ಶನದ ಪ್ರೀತಿ ಇದೆ.

ರಮ್ಯಾ ಬಿ.
ತೃತೀಯ ಬಿಎ (ಪತ್ರಿಕೋದ್ಯಮ ವಿಭಾಗ)
ಎಂ.ಜಿ.ಎಂ. ಕಾಲೇಜು, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next