Advertisement

ಮಾಪನದಲ್ಲಿ ದಾಖಲಾದ ಮಳೆ ಜಿಲ್ಲೆಯಲ್ಲಾಗಿಲ್ಲ!

03:40 PM Jul 25, 2019 | Naveen |

ಮಂಡ್ಯ: ಜಿಲ್ಲೆಯ ಯಾವ ಭಾಗದಲ್ಲಿ ಎಷ್ಟು ಮಿ.ಮೀ. ಮಳೆಯಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ಸಿಗುವುದು ಮಳೆ ಮಾಪನ ಕೇಂದ್ರದಲ್ಲಿ ಮಾತ್ರ. ಆದರೆ, ಇಲ್ಲಿಯೇ ಸ್ಪಷ್ಟ ಮಾಹಿತಿ ಸಿಗದಿದ್ದರೆ ಎಲ್ಲಿ ಕೇಳುವುದು ಎನ್ನುವುದು ಪ್ರಶ್ನೆಯಾಗಿದೆ.

Advertisement

ವಾಸ್ತವದಲ್ಲಿ ಬಿದ್ದಿರುವ ಮಳೆಯ ಪ್ರಮಾಣಕ್ಕೂ ಮಾಪನದಲ್ಲಿ ದಾಖಲಾಗಿರುವ ಮಳೆಯ ಪ್ರಮಾಣಕ್ಕೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಮಾಪನದಲ್ಲಿ ದಾಖಲಾಗಿರುವ ಮಳೆ ಜಿಲ್ಲೆಯಲ್ಲಿ ಆಗಿಲ್ಲ. ಇದರಿಂದ ಮಳೆ ಮಾಪನ ಕೇಂದ್ರ ನೀಡುವ ಮಾಹಿತಿಯನ್ನು ಎಲ್ಲರೂ ಅನುಮಾನದಿಂದ ನೋಡುವಂತಾಗಿದೆ. ಜಿಲ್ಲೆಯ ಪ್ರತಿ ಹೋಬಳಿ ಕೇಂದ್ರದಲ್ಲೂ ಸ್ವಯಂ ಚಾಲಿತ ಮಳೆ ಮಾಪನ ಕೇಂದ್ರಗಳಿವೆ. ಅಲ್ಲದೆ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅಳವಡಿಸಿರುವ ಟೆಲಿಮೆಟ್ರಿಕ್‌ ರೈನ್‌ಗೇಜ್‌ ಸ್ಟೇಷನ್‌ಗಳೂ ಅಲ್ಲಲ್ಲಿವೆ. ಈ ಎಲ್ಲಾ ಕೇಂದ್ರಗಳಲ್ಲೂ ಮಳೆಯ ಪ್ರಮಾಣ ದಾಖಲಾಗುತ್ತಿದೆ. ಅದು ನೀಡುತ್ತಿರುವ ಮಾಹಿತಿ ವೈಜ್ಞಾನಿಕವೇ, ಅವೈಜ್ಞಾನಿಕವೇ ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ನೀಡುತ್ತಿರುವ ಮಳೆ ಮಾಹಿತಿಯ ಬಗ್ಗೆ ಅಪನಂಬಿಕೆ ಸೃಷ್ಟಿಯಾಗುತ್ತಿರುವುದಂತೂ ಸತ್ಯ. ಏಕೆಂದರೆ, ಮಾಪನದಲ್ಲಿ ದಾಖಲಾಗಿರುವ ಮಳೆ ಜಿಲ್ಲೆಯಲ್ಲಿ ಕಾಣಸಿಗದಿರುವುದೇ ಮುಖ್ಯ ಕಾರಣವಾಗಿದೆ.

ಶೇ.13ರಷ್ಟು ಮಳೆ ಕೊರತೆ: ಮಳೆ ಮಾಪನ ಕೇಂದ್ರ ನೀಡುವ ಮಾಹಿತಿ ಬೆಂಗಳೂರಿನಲ್ಲಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ ರವಾನೆಯಾಗುñ‌್ತದೆ. ಅಲ್ಲಿಂದ ದೊರಕಿರುವ ಅಂಕಿ-ಅಂಶಗಳ ಪ್ರಕಾರ ಈ ವರ್ಷ ಜನವರಿಯಿಂದ ಜುಲೈ 23ರವರೆಗೆ ಜಿಲ್ಲೆಯಲ್ಲಿ 276.7 ಮಿ.ಮೀ. ವಾಡಿಕೆ ಮಳೆಗೆ 240.9 ಮಿ.ಮೀ.ನಷ್ಟು ಮಳೆಯಾಗಿದೆ. ಶೇ.13ರಷ್ಟು ಮಾತ್ರ ಮಳೆ ಕೊರತೆ ಎಂದು ತಿಳಿಸಿದೆ. ಇನ್ನು ಜುಲೈ ತಿಂಗಳಲ್ಲಿ 37.7 ಮಿ.ಮೀ. ವಾಡಿಕೆ ಮಳೆಗೆ ಸರಾಸರಿ 38.3 ಮಿ.ಮೀ.ನಷ್ಟು ಹೆಚ್ಚು ಮಳೆಯಾಗಿರುವುದಾಗಿ ಅಂಕಿ-ಅಂಶಗಳು ಹೇಳುತ್ತಿವೆ. ಈ ಪ್ರಮಾಣದ ಮಳೆ ವಾಸ್ತವದಲ್ಲಿ ಆಗಿಲ್ಲದಿರುವುದು ಮಳೆ ಮಾಪನ ಕೇಂದ್ರ ನೀಡುವ ಮಾಹಿತಿ ಬಗ್ಗೆ ಸಂದೇಹಗಳು ಮೂಡುವಂತೆ ಮಾಡಿವೆ.

ವಾಸ್ತವದಲ್ಲಿ ಇಷ್ಟೊಂದು ಪ್ರಮಾಣದ ಮಳೆಯಾಗಿದ್ದರೆ ಜಿಲ್ಲಾದ್ಯಂತ ಕೃಷಿ ಹಾಗೂ ಬಿತ್ತನೆ ಚಟುವಟಿಕೆ ಚುರುಕುಗೊಳ್ಳಬೇಕಿತ್ತು. ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹವಾಗಬೇಕಿತ್ತು. ಮಳೆ ಮಾಪನ ಕೇಂದ್ರಗಳು ನೀಡಿರುವ ಮಳೆಯ ಪ್ರಮಾಣಕ್ಕೂ ಜಿಲ್ಲೆಯೊಳಗೆ ಬರಗಾಲದ ಛಾಯೆ ಆವರಿಸುತ್ತಿರುವುದಕ್ಕೂ ತದ್ವಿರುದ್ಧ ಸನ್ನಿವೇಶ ಸೃಷ್ಟಿಯಾಗಿದೆ. ಜಿಲ್ಲಾದ್ಯಂತ ಕೃಷಿ ಚಟುವಟಿಕೆಯಲ್ಲಿ ತೀವ್ರ ಹಿನ್ನಡೆಯಾಗಿದ್ದು ಜುಲೈ ಅಂತ್ಯ ಸಮೀಪಿಸಿದರೂ ಕೇವಲ 770 ಹೆಕ್ಟೇರ್‌ನಲ್ಲಿ ಏಕದಳ, 9160 ಹೆಕ್ಟೇರ್‌ನಲ್ಲಿ ದ್ವಿದಳ, 2602 ಹೆಕ್ಟೇರ್‌ನಲ್ಲಿ ಎಣ್ಣೆಕಾಳು, 5047 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಮಾತ್ರ ಬಿತ್ತನೆಯಾಗಿದೆ. ಇದು ಮಳೆಯ ಪ್ರಮಾಣ ಕುಸಿದಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮೈಸೂರಿನಲ್ಲಿ ಉಪ ಕೇಂದ್ರ: ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದರೂ ಸ್ವಯಂ ಚಾಲಿತ ಮಳೆ ಮಾಪನ ಕೇಂದ್ರದ ಉಪಕೇಂದ್ರ ಮಂಡ್ಯದಲ್ಲಿ ಇಲ್ಲ. ಅದಿರುವುದು ಮೈಸೂರಿನಲ್ಲಿ ಮಾತ್ರ. ಈ ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗುವ ಮಾಹಿತಿ ನೀಡುವ ಜವಾಬ್ದಾರಿಯನ್ನು ಸ್ಥಳೀಯ ಡಿ-ಗ್ರೂಪ್‌ ನೌಕರರಿಗೆ ನೀಡಿರುತ್ತಾರೆ. ಮಳೆ ಬಿದ್ದಂತಹ ಸಮಯದ‌ಲ್ಲಿ ಅಲ್ಲಿ ದಾಖಲಾಗುವ ಮಾಹಿತಿಯನ್ನು ಕೇಂದ್ರಕ್ಕೆ ರವಾನಿಸುತ್ತಿದ್ದಾರೆ ಎಂದು ನೀರಾವರಿ ಇಲಾಖೆ ಕಚೇರಿ ಮೂಲಗಳು ತಿಳಿಸಿವೆ.

Advertisement

ಮಳೆಯ ಪ್ರಮಾಣ ಅಳೆಯುವುದು ಹೇಗೆ? ಮಳೆ ಮಾಪನ ಕೇಂದ್ರದ ಒಂದರಲ್ಲಿ ಬಾಟಲಿ ಇಡಲಾಗುತ್ತದೆ. ಮಳೆಯಾದಾಗ ಬಾಟಲಿಯಲ್ಲಿ ಸಂಗ್ರಹವಾ ಗುವ ನೀರಿನ ಪ್ರಮಾಣ ಅಳೆಯುವ ಮೂಲಕ ಮಳೆಯ ಪ್ರಮಾಣವನ್ನು ತಿಳಿಯಲಾಗುತ್ತದೆ. ಇನ್ನೊಂದರಲ್ಲಿ ಮೀಟರ್‌ನ್ನು ಅಳವಡಿಸಲಾಗಿದ್ದು ಅದರಲ್ಲಿರುವ ಗ್ರಾಫ್ ಹಾಳೆಯಲ್ಲಿ ಮಳೆ ಪ್ರಮಾಣದ ಗುರುತು ಮಾಡಿ ಪ್ರಮಾಣ ತಿಳಿಸುತ್ತದೆ. ಎರಡು ಯಂತ್ರಗಳಿಂದ ಮಳೆ ಪ್ರಮಾಣದ ಮಾಹಿತಿ ಬರೆದಿಡಲಾಗುತ್ತದೆ. ಸುಮಾರು 40 ವರ್ಷಗಳ ಹಿಂದೆ ಸ್ವಯಂಚಾಲಿತ ಮಳೆ ಮಾಪನ ಕೇಂದ್ರಗಳನ್ನು ಅಳವಡಿಸಲಾಗಿದೆಯೇ ಹೊರತು ಅವು ಸುಸ್ಥಿತಿಯಲ್ಲಿವೆಯೋ, ಇಲ್ಲವೋ, ಅವು ನೀಡುತ್ತಿರುವ ಮಾಹಿತಿ ವೈಜ್ಞಾನಿಕವೇ ಎಂಬ ಬಗ್ಗೆ ಯಾರೊಬ್ಬರೂ ಪರಿಶೀಲನೆ ನಡೆಸುವ ಗೋಜಿಗೆ ಹೋಗಿಲ್ಲ.

ರೈತರಿಗೆ ಅನ್ಯಾಯ: ಮಳೆಯ ಪ್ರಮಾಣ ಮಾಪನ ಕೇಂದ್ರದಿಂದ ದೊರೆಯುತ್ತಿರುವ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಕೃಷಿ ಇಲಾಖೆ ಪ್ರತಿ ವರ್ಷ ರಾಜ್ಯಸರ್ಕಾರಕ್ಕೆ ಮಾಹಿತಿ ರವಾನಿಸುತ್ತಿದೆ. ಕೇಂದ್ರದ ಮಳೆ ಬಗ್ಗೆ ನೀಡುತ್ತಿರುವ ಮಾಹಿತಿ ವೈಜ್ಞಾನಿಕವೇ, ಅವೈಜ್ಞಾನಿಕವೇ ಎಂಬ ಬಗ್ಗೆ ಪರಿಶೀಲನೆ ನಡೆಸುವುದಕ್ಕೂ ಕೃಷಿ ಇಲಾಖೆ ಮುಂದಾಗದೆ ಯಥಾವತ್ತಾಗಿ ಕಳುಹಿ ಸುತ್ತಿದೆ. ಇದರಿಂದ ರೈತರಿಗೆ ವಂಚನೆಯಾಗುತ್ತಿದೆ. ರಾಜ್ಯ ಸರ್ಕಾರ ಬರ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡುವ ಸಮಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಬಿದ್ದ ಮಳೆಯ ಪ್ರಮಾಣವನ್ನು ಪರಿಗಣಿಸಿ ಘೋಷಣೆ ಮಾಡು ತ್ತದೆ. ಆ ಸಮಯದಲ್ಲಿ ಮಳೆಯ ಪ್ರಮಾಣ ಕುರಿತು ತಪ್ಪು ಮಾಹಿತಿಗಳು ರವಾನೆಯಾದಾಗ ಬರಪೀಡಿತ ಜಿಲ್ಲೆಗಳ ರೈತರಿಗೆ ಸಿಗಬಹುದಾದ ಪರಿಹಾರವೂ ಕೈತಪ್ಪಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next