Advertisement

ನಾಲೆಗೆ ಬಿದ್ದ ಬಸ್‌; ಬಾಲಕ ಸೇರಿ ಇಬ್ಬರು ಬಚಾವ್‌:30 ಶವಗಳು ಹೊರಕ್ಕೆ!

01:02 PM Nov 24, 2018 | |

ಮಂಡ್ಯ: ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಖಾಸಗಿ ಬಸ್ಸೊಂದು ನಾಲೆಗೆ ಉರುಳಿ ಬಿದ್ದು ಕನಿಷ್ಠ 30 ಮಂದಿ ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. 

Advertisement

ಪಾಂಡವಪುರದಿಂದ ಮಂಡ್ಯ ಕಡೆಗೆ ತೆರಳುತ್ತಿದ್ದ ಬಸ್‌  ಮಧ್ಯಾಹ್ನ  12.15 ರ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿನಾಲೆಗೆ ಉರುಳಿ ಘೋರ ದುರಂತ ಸಂಭವಿಸಿದೆ.

ಬಸ್‌ ಮಖಾಡೆ ಬಿದ್ದ ಪರಿಣಾಮ ಪ್ರಯಾಣಿಕರಿಗೆ ಬಾಗಿಲುಗಳಿಂದ ಹೊರ ಬರಲು ಸಾಧ್ಯವಾಗಲಿಲ್ಲ. ಸುಮಾರು 12 ಅಡಿಯಷ್ಟು ನೀರು ನಾಲೆಯಲ್ಲಿ ತುಂಬಿಕೊಂಡಿತ್ತು. ಹೆಚ್ಚಿನ ಪ್ರಯಾಣಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 

ಬಸ್‌ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿದ್ದಾರೆ. ಕೆಲವರನ್ನು ಸ್ಥಳದಲ್ಲಿದ್ದವರು ಮೇಲಕ್ಕೆತ್ತಿದ್ದಾರೆ ಆದರೆ ಆ ಪೈಕಿ ಬಹುತೇಕರು ಪ್ರಾಣ ಕಳೆದುಕೊಂಡಿದ್ದಾರೆ. 

Advertisement

ದುರಂತದಲ್ಲಿ  ಓರ್ವ ಬಾಲಕ ಮತ್ತು ಯುವಕ ಮಾತ್ರ ಬದುಕುಳಿದಿದ್ದು,  ಬಸ್‌ನಲ್ಲಿದ್ದ ಗಿರೀಶ್‌ ಎಂಬ ಯುವಕ ಬಸ್‌ನಿಂದ ಹೊರ ಬಂದು ಲೋಹಿತ್‌ ಎಂಬ ಬಾಲಕನನ್ನು ಸುರಕ್ಷಿತವಾಗಿ ಹೊರಗೆತ್ತಿದ್ದಾರೆ. 6 ನೇ ತರಗತಿ ವಿದ್ಯಾರ್ಥಿ ರೋಹಿತ್‌ ಎಂಬಾತನನ್ನು ಸುರಕ್ಷಿತವಾಗಿ ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.ಕಿಟಕಿ ಬದಿಯಲ್ಲಿದ್ದ ಬಾಲಕ ಬಸ್‌ ಬಿದ್ದೊಡನೆಯ ಹೊರ ಬಂದಿದ್ದ ಕಾರಣ ಬದುಕುಳಿದಿದ್ದಾನೆ ಎನ್ನಲಾಗಿದೆ. 

ಚಾಲಕ ನಾಪತ್ತೆ 
ಅವಘಡ ನಡೆದ ಬಳಿಕ ಚಾಲಕ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಪ್ರತ್ಯಕ್ಷ ದರ್ಶಿಗಳ ಪ್ರಕಾರ ಬಸ್‌ ನಾಲೆಗೆ ಬಿದ್ದೊಡನೆಯೇ ವ್ಯಕ್ತಿಯೊಬ್ಬ ಸ್ಥಳದಿಂದ ಪರಾರಿಯಾಗಿದ್ದ ಎನ್ನಲಾಗಿದೆ. 

30 ಶವಗಳು ಹೊರಕ್ಕೆ 
ಈಗಾಗಲೇ 30 ಶವಗಳನ್ನು ನಾಲೆಯಿಂದ ಹೊರ ತೆಗೆಯಲಾಗಿದ್ದು, ಸ್ಥಳದಲ್ಲಿ ಹೆಣಗಳ ರಾಶಿ ಕಂಡರೆ ಎಂಥಹವರೂ ಬೆಚ್ಚಿ ಬೀಳುವಂತಿದೆ. ಮೃತರ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದು ಆಕ್ರಂದನ ಮುಗಿಲು ಮುಟ್ಟಿದೆ. 

ಮೃತರಲ್ಲಿ ಹೆಚ್ಚಿನವರು 11 ಮಹಿಳೆಯರು ಮತ್ತು 4 ಮಕ್ಕಳು ಸೇರಿದ್ದಾರೆ. ಬಸ್ಸನ್ನು  ಕ್ರೇನ್ ಮೂಲಕ ಮೇಲಕ್ಕೆತ್ತಲಾಗುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಸಿಎಂ ದಿಗ್ಭ್ರಮೆ 
ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು,ತನ್ನೆಲ್ಲಾ ಕೆಲಸಗಳನ್ನು ಬದಿಕಗೊತ್ತಿ ದುರಂತ ನಡೆದ ಸ್ಥಳಕ್ಕೆ ತೆರಳುತ್ತಿದ್ದಾರೆ. 

ಅಧಿಕಾರಿಗಳಿಗೆ ಸೂಚನೆ 
ದುರಂತ ನಡೆದಿರುವ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಸಿಎಂ ಎಚ್‌ಡಿಕೆ ಅವರು ಕರೆ ಮಾಡಿ ಸೂಚನೆಗಳನ್ನು ನೀಡಿದ್ದಾರೆ. 

ಅವಘಡಕ್ಕೆ ಕಾರಣ?
ಘೋರದುಂತಕ್ಕೆ ಕಾರಣ ಏನು ಎನ್ನುವುದೇ ನಿಗೂಢವಾಗಿದೆ. ಬಸ್‌ ಚಲಿಸುತ್ತಿದ್ದಾಗ ಯಾವುದೇ ವಾಹನ ಅಡ್ಡಬಂದಿಲ್ಲ.ರಸ್ತೆಯೂ ಸುಸ್ಥಿತಿಯಲ್ಲೆ ಇತ್ತು ಎಂದು ತಿಳಿದು ಬಂದಿದೆ. ತಡೆಗೋಡೆ ಇಲ್ಲದ ಕಾರಣ ಬಸ್‌ ಕಾಲುವೆಗೆ ಇಳಿದಿದೆ. ಸ್ಟಿಯರಿಂಗ್‌ ಲಾಕ್‌ ಆಗಿ ಅವಘಡ ಸಂಭವಿಸಿರುವ ಬಗ್ಗೆಯೂ ಶಂಕೆ ವ್ಯಕ್ತ ಪಡಿಸಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next