Advertisement
ಮತ್ತೂಂದೆಡೆ ನಾಗಮಂಗಲ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದೆ ಫೈಟರ್ ರವಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಮದ್ದೂರಿನ ಕಾಂಗ್ರೆಸ್ ಟಿಕೆಟ್ ಕದಲೂರು ಉದಯ್ ಹೆಸರು ಘೋಷಣೆ ಮಾಡುತ್ತಿದ್ದಂತೆ ಇತ್ತ ಎಸ್.ಗುರುಚರಣ್ ಬೆಂಬಲಿಗರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ.
Related Articles
Advertisement
ಟಿಕೆಟ್ ಖಚಿತತೆ ಮೇಲೆ ಕೈ ಸೇರಿದ್ದ ಉದಯ್: ಕದಲೂರು ಉದಯ್ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದಾಗಿ ನಿಂದಲೂ ಬಿಜೆಪಿ ಸೇರುತ್ತಾರೆ ಎಂಬ ಚರ್ಚೆಗಳು ಬಲವಾಗಿ ನಡೆದಿದ್ದವು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸಿ, ಬಿಜೆಪಿ ಸರ್ಕಾರ ರಚನೆಗೆ ಉದಯ್ ಪ್ರಮುಖ ಕಾರಣರಾಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆಗಳು ನಡೆದವು. ಅದಾದ ಬಳಿಕ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಟಿಕೆಟ್ ಸಿಗುವ ಭರವಸೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅದರಂತೆ ಡಿ.ಕೆ.ಶಿವಕುಮಾರ್ ಉದಯ್ ಹೆಸರು ಘೋಷಣೆ ಮಾಡಿದ್ದಾರೆ.
ಹೈಕಮಾಂಡ್ ನಾಯಕರಿಗೆ ತಲೆನೋವು: ಮಂಡ್ಯ, ಮದ್ದೂರಿನಲ್ಲಿ ಉಂಟಾಗಿರುವ ಭಿನ್ನಮತದ ಕಾವು ರಾಜ್ಯ ನಾಯಕರಿಗೆ ತಲೆನೋವು ತಂದಿದೆ. ಮಂಡ್ಯದಲ್ಲಿ ಘೋಷಿತ ಅಭ್ಯರ್ಥಿ ರವಿಕುಮಾರ್‌ಗೌಡ ಗಣಿಗ ಬದಲಾವಣೆಗೆ ಪಟ್ಟು ಹಿಡಿದಿದ್ದರೆ, ಇದೀಗ ಮದ್ದೂರಿನಲ್ಲೂ ಗುರುಚರಣ್‌ಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಮಂಡ್ಯದಲ್ಲಿ ಸ್ವಲ್ಪ ತಣ್ಣಗಾಗಿದ್ದರೂ ಮದ್ದೂರಿನಲ್ಲಿ ಭಿನ್ನಮತ ಹೊತ್ತಿ ಉರಿಯುತ್ತಿದೆ. ಇದನ್ನು ಬಗೆಹರಿಸುವ ಜವಾಬ್ದಾರಿ ಹೈಕಮಾಂಡ್ ನಾಯಕರ ಹೆಗಲ ಮೇಲಿದೆ.
ಪಕ್ಷೇತರ ಅಭ್ಯರ್ಥಿಯಾಗಿ ಫೈಟರ್ ರವಿ: ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟುತ್ತಿದೆ. ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಗಮನಸೆಳೆದಿದ್ದ ಫೈಟರ್ ರವಿ ಆಲಿಯಾಸ್ ಮಲ್ಲಿಕಾರ್ಜುನ್ ಟಿಕೆಟ್ ಸಿಗುವ ಭರವಸೆ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದ್ದರು. ಆದರೆ, ರಾಜಕೀಯ ಸ್ಥಿತ್ಯಂತರಗಳಿಂದ ಬಿಜೆಪಿ ಮಾಜಿ ಸಂಸದ ಎಲ್. ಆರ್.ಶಿವರಾಮೇಗೌಡ ಪತ್ನಿ ಸುಧಾ ಶಿವರಾಮೇಗೌಡರಿಗೆ ನೀಡಿದೆ. ಇದರಿಂದ ಬೇಸತ್ತಿರುವ ಫೈಟರ್ ರವಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿರ್ಧರಿಸಿದ್ದಾರೆ. ಮೊದಲೇ ನಾಗಮಂಗಲ ಕ್ಷೇತ್ರದಲ್ಲಿ ಬಿಜೆಪಿಯ ಸ್ಪರ್ಧೆ ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಇದೀಗ ಸುಧಾ ಶಿವರಾಮೇಗೌಡರಿಗೆ ಟಿಕೆಟ್ ನೀಡಿರುವುದರಿಂದ ಸ್ವಲ್ಪಮಟ್ಟಿಗೆ ಮತ ಹೆಚ್ಚಿಸಬಹುದು. ಆದರೆ, ಫೈಟರ್ ರವಿ ಸ್ಪರ್ಧೆಯಿಂದ ಬಿಜೆಪಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
– ಎಚ್.ಶಿವರಾಜು