Advertisement
ಮಂಡ್ಯ, ಮದ್ದೂರು ಹಾಗೂ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ಜೋರಾ ಗಿಯೇ ತಟ್ಟಿತ್ತು. ಇದೀಗ ಅದು ಸ್ವಲ್ಪಮಟ್ಟಿಗೆ ಕಡಿಮೆಯಾದಂತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅತೃಪ್ತರ ಮನವೊಲಿಸಲಾಗಿದೆ. ಆದರೂ, ಇನ್ನೂ ಅಸಮಾಧಾನ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ.
Related Articles
Advertisement
ಜೆಡಿಎಸ್‌ಗೆ ಅಭ್ಯರ್ಥಿಗಳ ಬಂಡಾಯದ ಬಿಸಿ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಂಡಾಯದ ಬಿಸಿ ಜೋರಾ ಗಿಯೇ ತಟ್ಟಿದೆ. ಕ್ಷೇತ್ರದಲ್ಲದ ವ್ಯಕ್ತಿಯನ್ನು ಅಭ್ಯರ್ಥಿ ಯನ್ನಾಗಿಸಿರುವುದು ಕಣ್ಣು ಕೆಂಪಗಾಗುವಂತೆ ಮಾಡಿದೆ. ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಸ್ವಾಭಿಮಾನದ ಕಹಳೆ ಮೊಳಗಿಸಲಾಗಿದೆ. ಅದಕ್ಕಾಗಿ ಕೆ.ಎಸ್.ವಿಜಯಾನಂದ, ಅಳಿಯ ಎಚ್.ಎನ್.ಯೋಗೇಶ್, ಮುಖಂಡ ಮುದ್ದನಘಟ್ಟ ಮಹಾಲಿಂಗೇಗೌಡ ಅವರಿಂದ ನಾಮಪತ್ರ ಸಲ್ಲಿಸಿ, ಜೆಡಿಎಸ್ ವರಿಷ್ಠರ ವಿರುದ್ಧವೇ ತೊಡೆತಟ್ಟಲಾಗಿದೆ. ಇದು ಯಾವ ಮಟ್ಟಕ್ಕೆ ಹೋಗಲಿದೆ ಕಾದು ನೋಡಬೇಕು.
ಇಂದು ಸ್ವಾಭಿಮಾನಿ ಪಡೆಯಿಂದ ಸಭೆ: ಜೆಡಿಎಸ್ ವಿರುದ್ಧ ಬಂಡಾಯ ಸಾರಿರುವ ಶಾಸಕ ಎಂ.ಶ್ರೀನಿವಾಸ್ ನೇತೃತ್ವದ ಬಣದಿಂದ ಏ.24ರ ಬೆಳಗ್ಗೆ 10 ಗಂಟೆಗೆ ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಸಭೆ ಕರೆಯ ಲಾಗಿದೆ. ಈಗಾಗಲೇ ಜೆಡಿಎಸ್ ಬಂಡಾಯವಾಗಿ ನಾಮಪತ್ರ ಸಲ್ಲಿಸಿರುವ ಕೆ.ಎಸ್.ವಿಜಯಾನಂದ, ಎಚ್.ಎನ್.ಯೋಗೇಶ್ ಹಾಗೂ ಮುದ್ದನಘಟ್ಟ ಮಹಾಲಿಂಗೇಗೌಡ ಮೂವರಲ್ಲಿ ಒಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಿ, ಇಬ್ಬರು ನಾಮಪತ್ರ ವಾಪಸ್ ಪಡೆಯಲಿದ್ದಾರೆ.
ವಿಜಯ್ ಆನಂದ್ ಕಣಕ್ಕೆ: ಜೆಡಿಎಸ್ ಬಂಡಾ ಯವಾಗಿ ನಾಮಪತ್ರ ಸಲ್ಲಿಸಿರುವ ಮೂವರ ಪೈಕಿ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಮೊಮ್ಮಗ ಕೆ.ಎಸ್.ವಿಜಯ್ ಆನಂದ್ ಅವರು ಕಣದಲ್ಲಿ ಉಳಿಯುವುದು ಬಹುತೇಕ ಖಚಿತವಾಗಿದೆ. ಹಾಗೆಯೇ ಇವರ ಜತೆಯಲ್ಲಿ ನಾಮಪತ್ರ ಸಲ್ಲಿಸಿ ರುವ ಎಚ್.ಎನ್.ಯೋಗೇಶ್ ಹಾಗೂ ಮುದ್ದನ ಘಟ್ಟ ಮಹಾಲಿಂಗೇ ಗೌಡ ಇಬ್ಬರು ವಾಪಸ್ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಿಜೆಪಿಗೂ ಬಂಡಾಯಗಾರರ ಸಮಸ್ಯೆ: ಬಿಜೆಪಿಗೂ ಬಂಡಾಯಗಾರರು ತಲೆ ನೋವು ತಂದಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯ ಎದ್ದಿರುವ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಟಿಕೆಟ್ ಸಿಗದೇ ಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದರೆ, ಅತ್ತ ನಾಗಮಂಗಲ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ್ ಆಲಿಯಾಸ್ ಫೈಟರ್ ರವಿ ಅವರು ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದಾರೆ. ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಫೈಟರ್ ರವಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ, ಬಿಜೆಪಿಯಿಂದ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.
ಮುಖಂಡರ ಮನವೊಲಿಕೆ, ಪಕ್ಷಾಂತರ ಹೆಚ್ಚಳ: ನಾಮಪತ್ರ ಪಡೆಯಲು ಸೋಮವಾರ ಕೊನೇ ದಿನವಾದ ಹಿನ್ನೆಲೆಯಲ್ಲಿ ಬಂಡಾಯಗಾರರ ಶಮನಗೊಳಿಸುವ ಪ್ರಯತ್ನಗಳು ಮೂರು ಪಕ್ಷಗಳಲ್ಲೂ ನಡೆಯುತ್ತಿದೆ. ಮನವೊಲಿಕೆ ಮಾಡುತ್ತಾ ಪಕ್ಷದಿಂದ ಹೊರ ಹೋಗದಂತೆ ತಡೆಯುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲದೆ, ಇದರ ಜತೆಗೆ ಪಕ್ಷಾಂತರ ಪರ್ವವೂ ಹೆಚ್ಚಾಗಿದೆ. ಟಿಕೆಟ್ ಸಿಗದ ಆಕಾಂಕ್ಷಿಗಳು ಬೇರೆ ಬೇರೆ ಪಕ್ಷಗಳಿಗೆ ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಅಲ್ಲದೆ, ಚುನಾವಣೆ ಹಿನ್ನೆಲೆಯಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳನ್ನು ತಮ್ಮ ಪಕ್ಷಕ್ಕೆ ಕರೆತರುವ ಮೂಲಕ ತಮ್ಮ ಬಲ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ನಾನು ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಇದು ನನ್ನ ಅಚಲ ನಿರ್ಧಾರವಾಗಿದೆ. ಇದು ನನ್ನ ರಾಜಕೀಯದ ಭವಿಷ್ಯದ ನಿರ್ಧಾರವಾಗಿದೆ. ಕಳೆದ ಅನೇಕ ವರ್ಷಗಳಿಂದ ಜೆಡಿಎಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಅದಕ್ಕಾಗಿ ನನಗೆ ಒಂದು ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಆದರೆ, ನನನ್ನು ಕಡೆಗಣಿಸಲಾಗಿದೆ. – ಕೆ.ಎಸ್.ವಿಜಯ್ ಆನಂದ್, ಜೆಡಿಎಸ್ ಬಂಡಾಯ ಅಭ್ಯರ್ಥಿ
ನನ್ನ ಮನೆಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು ಮನವೊಲಿಸಿದ್ದಾರೆ. ಆದರೆ, ನಾನು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವೆ. ಕಾಂಗ್ರೆಸ್ ಸೇರ್ಪಡೆಗೊಂಡು ಒಂದು ರೀತಿಯ ಡೋಲಾಯಮಾನ ಸ್ಥಿತಿಗೆ ತಲುಪಿದ್ದೇನೆ. ಮುಂದಿನ ನಿರ್ಧಾರ ಪ್ರಕಟಿಸಲಾಗುವುದು. – ಡಾ.ಎಚ್.ಕೃಷ್ಣ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ
-ಎಚ್.ಶಿವರಾಜು