ಮಂಡ್ಯ: ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್ ಬಳಕೆ ನಿಷೇಧ ಜಿಲ್ಲೆಯಲ್ಲಿ ಜಾರಿಯಲ್ಲಿದ್ದರೂ ಪರಿಣಾಮಕಾರಿ ಅನುಷ್ಠಾನ ಮಾತ್ರ ಇಂದಿಗೂ ಸಾಧ್ಯವಾಗಿಲ್ಲ. ದಂಡದ ಎಚ್ಚರಿಕೆ ನಡುವೆಯೂ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕೈಚೀಲಗಳ ಮಾರಾಟ ನಿರ್ಭೀತಿಯಿಂದ ಸಾಗಿದೆ.
Advertisement
ಜನರ ಮನಸ್ಥಿತಿ ಬದಲಾಗದಿರುವುದೂ ಪ್ಲಾಸ್ಟಿಕ್ ನಿಷೇಧಕ್ಕೆ ದೊಡ್ಡ ತೊಡಕಾಗಿ ಪರಿಣಮಿಸಿದೆ. ಮೂರು ತಿಂಗಳಿಗೋ, ಆರು ತಿಂಗಳಿಗೋ ಒಮ್ಮೆ ನಗರಸಭೆ, ಪುರಸಭೆ ಅಧಿಕಾರಿಗಳು ನಾಲ್ಕೈದು ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ಪ್ರಕ್ರಿಯೆ ಸಾಮಾನ್ಯವಾಗಿದೆ.
Related Articles
ಬ್ಯಾಗ್‌ಗಳನ್ನು ನೀಡಿ ಅದಕ್ಕೆ ಪ್ರತ್ಯೇಕ ಹಣ ಪಡೆಯುತ್ತಿದ್ದಾರೆ.
Advertisement
ಆದರೆ, ಬೀದಿ ವ್ಯಾಪಾರಿಗಳು, ಸಣ್ಣ-ಪುಟ್ಟ ಅಂಗಡಿಯವರು ಹಾಗೂ ಕೆಲವು ದೊಡ್ಡ ಮಟ್ಟದ ವರ್ತಕರು-ವ್ಯಾಪಾರಿಗಳು ಮಾತ್ರ ಪ್ಲಾಸ್ಟಿಕ್ ಕೈಚೀಲಗಳು ಹಾಗೂ ನಿಷೇಧಿತ ವಸ್ತುಗಳ ಮಾರಾಟವನ್ನು ಕೈಬಿಡುತ್ತಿಲ್ಲ. ಅಂತಹ ವ್ಯಾಪಾರಿಗಳು ಹಾಗೂ ಬಳಸುವವರನ್ನು ಹಿಡಿದು ದಂಡ ಶಿಕ್ಷೆಗೆ ಗುರಿಪಡಿಸದಿರುವುದರಿಂದ ಪ್ಲಾಸ್ಟಿಕ್ ನಿಷೇಧ ಕಾನೂನಿನ ಬಗ್ಗೆ ಜನರು ನಿರ್ಲಕ್ಷ್ಯ ವಹಿಸಲು ಕಾರಣವಾಗಿದೆ.
ಗ್ರಾಮೀಣ ಭಾಗದಲ್ಲಿ ದಿಟ್ಟ ಹೆಜ್ಜೆ: ಪ್ಲಾಸ್ಟಿಕ್ ವಿರುದ್ಧ ಹೋರಾಟ ನಡೆಸುವಲ್ಲಿ ಸ್ಥಳೀಯ ಸಂಸ್ಥೆಗಳು ದಿಟ್ಟ ಹೆಜ್ಜೆ ಇಟ್ಟಿವೆ. ಗ್ರಾಮೀಣ ಪ್ರದೇಶದಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ ಹಳ್ಳಿಗಳಲ್ಲೂ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಪ್ರಾರಂಭಿಕವಾಗಿ ಮದ್ದೂರು ತಾಲೂಕು ಅಣ್ಣೂರು, ಹೆಮ್ಮನಹಳ್ಳಿ ಹಾಗೂ ಯಡಗನಹಳ್ಳಿ ಗ್ರಾಮ ಪಂಚಾಯಿತಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಿ, ಮನೆಮನೆಗೆ ಬಟ್ಟೆ ಬ್ಯಾಗ್‌ಳನ್ನು ವಿತರಿಸುವ ಕಾರ್ಯವನ್ನು ಮಾಡುತ್ತಿವೆ.
ಬಟ್ಟೆ, ಪೇಪರ್ ಬ್ಯಾಗ್ ಮಾರಾಟ ಮಂಡ್ಯ ತಾಲೂಕಿನ ಕೀಲಾರ ಗ್ರಾಮ ಪಂಚಾಯಿತಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಲು ಸಜ್ಜಾಗಿದ್ದು, ಎಲ್ಲ ಗ್ರಾಮಸ್ಥರಿಗೂ ಇದರ ಬಗ್ಗೆ ಅರಿವು ಮೂಡಿಸಿ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲ ಅಂಗಡಿಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೊತೆ ಪಂಚಾಯತ್ ಸದಸ್ಯರೇ ಖುದ್ದು ಭೇಟಿ ನೀಡಿ ಮನವರಿಕೆ ಮಾಡುತ್ತಿದ್ದಾರೆ. ಅಲ್ಲಲ್ಲಿ ನೋಟಿಸ್ ಅಂಟಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಕೆಲವು ಅಂಗಡಿ ಮಾಲೀಕರು ಪ್ಲಾಸ್ಟಿಕ್ ನಿಷೇಧಕ್ಕೆ ಸಹಕಾರ ನೀಡುತ್ತಿದ್ದು, ಈಗಾಗಲೇ ಬಟ್ಟೆ ಹಾಗೂ ಪೇಪರ್ ಬ್ಯಾಗ್‌ಗಳನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಸೇರಿದಂತೆ ಗ್ರಾಮದಲ್ಲಿನ 30ಕ್ಕೂ ಹೆಚ್ಚು ಸಂಘಟನೆಗಳ ಯುವಕರು, ಮುಖಂಡರು ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕೆ ಕೈ ಜೋಡಿಸಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳೂ ತಮ್ಮ ಪೋಷಕರಿಗೆ ತಿಳಿವಳಿಕೆ ನೀಡುತ್ತಿದ್ದು, ಶೀಘ್ರವಾಗಿ ಕೀಲಾರ ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಲಿದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇದೆ.
ಪ್ಲಾಸ್ಟಿಕ್ ವಿರುದ್ಧ ಸಮರ: ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮ ಪಂಚಾಯಿತಿಯೂ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿದೆ. ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಂದ ಹೊರಬೀಳುವ ಪ್ಲಾಸ್ಟಿಕ್‌ನ್ನು ಸಂಗ್ರಹಿಸಿ ಒಂದೆಡೆ ಶೇಖರಿಸಲಾಗುತ್ತಿದ್ದು, ನಂತರ ಅದನ್ನು ಪುನರ್ಬಳಕೆ ಮಾಡುವ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಪಂಚಾಯಿತಿ ಅಧಿಕಾರಿಗಳು ಪ್ಲಾಸ್ಟಿಕ್ ಬಳಸದಂತೆ ಜನರಲ್ಲಿ ಮನವಿ ಮಾಡುತ್ತಿದ್ದು, ಗ್ರಾಮಸ್ತರೂ ಹೆಚ್ಚಿನ ರೀತಿಯ ಸಹಕಾರ ನೀಡುತ್ತಿರುವುದಾಗಿ ತಿಳಿದುಬಂದಿದೆ.
ವಿದ್ಯಾವಂತರಿಂದಲೇ ಹೆಚ್ಚು ಬಳಕೆ: ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ-ಪಟ್ಟಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಿದೆ. ವಿದ್ಯಾವಂತ ಸಮೂಹ ಹೆಚ್ಚಿರುವ ಸ್ಥಳಗಳಲ್ಲೇ ನಿಯಂತ್ರಣ ಸಾಧ್ಯವಾಗದಿರುವುದು ದೌರ್ಭಾಗ್ಯದ ಸಂಗತಿ. ಅಲ್ಲದೆ,ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅಪಾಯದ ಬಗ್ಗೆ ಅರಿವು-ಜಾಗೃತಿ ಮೂಡಿಸಬೇಕಾದ ಬುದ್ಧಿವಂತರೇ ಕೈಯ್ಯಲ್ಲಿ ಪ್ಲಾಸ್ಟಿಕ್ ಹಿಡಿದು ಓಡಾಡುತ್ತಿದ್ದಾರೆ. ಇವರಲ್ಲಿ ಜಾಗೃತಿ ಮೂಡುವುದು ಯಾವಾಗ ಎನ್ನುವುದು ಪ್ರಶ್ನೆಯಾಗಿದೆ. ನಿಯಂತ್ರಣವೇ ಇಲ್ಲ: ಹೊರಗಿನಿಂದ ಪ್ಲಾಸ್ಟಿಕ್ ವಸ್ತುಗಳು ನಿತ್ಯವೂ ಜಿಲ್ಲೆಯೊಳಗೆ ಪ್ರವೇಶಿಸುತ್ತಾ ನಗರ-ಪಟ್ಟಣ ಪ್ರದೇಶಗಳ ಅಂಗಡಿಗಳೊಳಗೆ ವಿರಾಜಮಾನವಾಗುತ್ತಿವೆ. ಈ ಪ್ಲಾಸ್ಟಿಕ್ ಉತ್ಪಾದಕ ಕಂಪನಿಗಳ ಮೇಲೆ ಯಾವುದೇ ಕ್ರಮ ಜರುಗಿಸುತ್ತಿಲ್ಲ.
ಅಲ್ಲದೆ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ಜಿಲ್ಲೆಯೊಳಗೆ ಪ್ರವೇಶಿಸದಂತೆ ತಡೆಯುವುದಕ್ಕೂ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮುಂದಾಗುತ್ತಿಲ್ಲ. ಇದರಿಂದ ಪ್ಲಾಸ್ಟಿಕ್ ಕಾನೂನಿನ ಹಿಡಿತದಿಂದ ಜಾರಿಕೊಂಡು ಓಡಾಡುತ್ತಲೇ ಇದೆ.