ಮಂಡ್ಯ: ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ಕಾಲ ಮೈಸೂರು ಸಂಸ್ಥಾನದ ಪಾಲಿಗೆ ಸುವರ್ಣಯುಗ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ನಗರದ ಕಲಾಮಂದಿರದಲ್ಲಿ ನಡೆದ ಶ್ರೀ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಆಡಳಿತಾವಧಿಯಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿ ಗೊಳಿಸಿದ್ದಲ್ಲದೆ, ಮಾದರಿ ಎನಿಸುವಂತಹ ಅಭಿವೃದ್ಧಿ ಯೋಜನೆಗಳಿಗೆ ಮುನ್ನುಡಿ ಬರೆದರು. ಮೈಸೂರು ಸಂಸ್ಥಾನದ ಬೆಳವಣಿಗೆಗೆ ಮಹೋನ್ನತ ಕೊಡುಗೆಗಳನ್ನು ನೀಡಿ ರಾಜರ್ಷಿ ಎನಿಸಿಕೊಂಡರು ಎಂದು ತಿಳಿಸಿದರು.
ಕೆಆರ್‌ಎಸ್ ಅಣೆಕಟ್ಟು ನಿರ್ಮಾಣ: ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟೆ ನಿರ್ಮಿಸಲು ನಾಲ್ವಡಿ ಅವರು ತಾಯಿ, ಪತ್ನಿ ಹಾಗೂ ತಮ್ಮ ಚಿನ್ನಾಭರಣ ಮಾರಾಟ ಮಾಡಿದರು. 2.60 ಕೋಟಿ ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿ 1.20 ಕೋಟಿ ಎಕರೆಗೆ ಆರಂಭದಲ್ಲಿ ನೀರನ್ನು ಹರಿಸಿದ ಕೀರ್ತಿ ನಾಲ್ವಡಿ ಅವರಿಗೆ ಸಲ್ಲುತ್ತದೆ. ಮಂಡ್ಯ ಜಿಲ್ಲೆ ಹಸಿರಾಗಿರುವುದು ಒಡೆಯರ್ ಅವರ ಬಹುದೊಡ್ಡ ಕೊಡುಗೆ ಎಂದು ಬಣ್ಣಿಸಿದರು.
ಮೊದಲ ಜಲ ವಿದ್ಯುತ್ ಸ್ಥಾವರ: ನಾಲ್ವಡಿ ಕೃಷ್ಣರಾಜ ಒಡೆಯರ್‌ಅವರ ದೂರದೃಷ್ಟಿಯ ಪಲವಾಗಿ ಮೈಸೂರು ಸಂಸ್ಥಾನ ರಾಜ್ಯದಲ್ಲೇ ಎಲ್ಲ ಕ್ಷೇತ್ರಗಳಲ್ಲೂ ಬಹಳ ಎತ್ತರಕ್ಕೆ ಬೆಳವಣಿಗೆ ಕಂಡಿತು. ಶಿಕ್ಷಣ, ನೀರಾವರಿ, ಕೈಗಾರಿಕೆ, ಸಾರಿಗೆ, ರೈಲ್ವೆ ಸೇರಿದಂತೆ ಎಲ್ಲ ರಂಗಗಳಲ್ಲೂ ಪ್ರಗತಿ ಸಾದಿಸಿತು. ಏಷ್ಯಾದ ಮೊದಲ ಜಲ ವಿದ್ಯುತ್ ಸ್ಥಾವರ ಶಿವನ ಸಮುದ್ರ, ಮೈಷುಗರ್ ಕಾರ್ಖಾನೆ, ಭದ್ರಾವತಿಯ ಉಕ್ಕಿನ ಕಾರ್ಖಾನೆ, ಕೋಲಾರದ ಚಿನ್ನದ ಗಣಿ ಇವೆಲ್ಲವೂ ನಾಲ್ವಡಿ ನೀಡಿದ ಅಭಿವೃದ್ಧಿಯ ಸಾಕ್ಷಿಗುಡ್ಡೆಗಳು ಎಂದು ಹೇಳಿದರು.
ಕ್ರಾಂತಿ ಪುರುಷರು: ನಾಡಿಗೆ ಅಪಾರವಾದ ಕೊಡುಗೆ ನೀಡುವ ಮೂಲಕ ರಾಜಪ್ರಭುತ್ವದ ಪರಂಪರೆಯಲ್ಲೇ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕೊಲ್ಲಾಪುರದ ಶಾಹು ಮಹಾರಾಜರು ಶ್ರೇಷ್ಠ ರಾಜರಾಗಿದ್ದಾರೆ. ಸಾಮಾಜಿಕ ಬದಲಾವಣೆಯಲ್ಲಿ ಕ್ರಾಂತಿ ಮಾಡಿ ಕ್ರಾಂತಿ ಪುರುಷರೂ ಆಗಿದ್ದಾರೆ. ಮೈಸೂರಿನ ಸಂಸ್ಥಾನದ ಜನರ ಪಾಲಿಗೆ ನಿತ್ಯ ಸ್ಮರಣೀಯರಾಗಿದ್ದು, ಅವರ ಕೊಡುಗೆಗಳನ್ನು ಎಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ನೀಡುವ ದೃಷ್ಟಿಯಿಂದ 800 ಶಾಲೆಗಳಲ್ಲಿ ಆರಂಭಿಸಿದ್ದರು. 7 ಸಾವಿರ ವಯಸ್ಕರ ಶಿಕ್ಷಣ ಕೇಂದ್ರಗಳನ್ನು ಆರಂಭಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಜಾಥಾಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಚಾಲನೆ ನೀಡಿದರು. ಜಿಲ್ಲಾಧಿಕಾರಿ ಮಂಜುಶ್ರೀ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಸ್ವಾಮಿ, ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಉಪವಿಭಾಗಾಧಿಕಾರಿ ರಾಜೇಶ್, ತಹಶೀಲ್ದಾರ್ ನಾಗೇಶ್, ನಗರಸಭೈ ಸದಸ್ಯರಾದ ರಾಮ ಲಿಂಗಯ್ಯ, ಶಿವಪ್ರಸಾದ್, ಶ್ರೀಧರ್, ಸೌಭಾಗ್ಯ, ಮೀನಾಕ್ಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ.ಬಿ.ವಿ.ನಂದೀಶ್, ಎಎಸ್ಪಿಬಲರಾಮೇಗೌಡ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಸಂತೋಷ್, ಎಂ.ಬಿ.ಶ್ರೀನಿವಾಸ್, ರಾಜು, ಗುರಪ್ಪಇತರರು ಭಾಗವಹಿಸಿದ್ದರು.