Advertisement

ಮೈಷುಗರ್‌ ಕಾರ್ಖಾನೆಯಲ್ಲಿ ಮತ್ತೆ ಸಕ್ಕರೆ ಸಿಹಿ 

10:18 PM Sep 01, 2022 | Team Udayavani |

ದೇಶದ ಏಕೈಕ ಸರಕಾರಿ ಸ್ವಾಮ್ಯದ ಕಾರ್ಖಾನೆ ಹಾಗೂ 90 ವರ್ಷಗಳ ಇತಿಹಾಸವಿರುವ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಕೋಲ್ಮನ್‌ ಅವರು ಸ್ಥಾಪಿಸಿದ ಮೈಷುಗರ್‌ ಕಾರ್ಖಾನೆ 4 ವರ್ಷಗಳ ಬಳಿಕ ಮತ್ತೆ ಪುನಾರಂಭಗೊಳ್ಳುತ್ತಿದೆ. ಮೈಷುಗರ್‌ ಕಾರ್ಖಾನೆ ಕಥೆ ಮುಗಿಯಿತು, ಅಸಿಸ್ಟೇಟ್‌ ಕಾರ್ಖಾನೆ ಹಾದಿಯಲ್ಲಿಯೇ ಮೈಷುಗರ್‌ ಕಾರ್ಖಾನೆ ಶಾಶ್ವತವಾಗಿ ಮುಚ್ಚಲಿದೆ, ಎಷ್ಟು ಅನುದಾನ ಕೊಟ್ಟರೂ ಪುನಶ್ಚೇತನ ಸಾಧ್ಯವಿಲ್ಲ, ಸರಕಾರ ಈ ಐತಿಹಾಸಿಕ ಕಾರ್ಖಾನೆಗೆ ಕೊನೆಯ ಮೊಳೆ ಹೊಡೆಯಲಿದೆ ಎಂಬ ಮಾತುಗಳೇ ಕೇಳಿ ಬರುತ್ತಿದ್ದವು. ಆದರೆ ಅದನ್ನು ಮೀರಿ ಸಂಘಟನೆಗಳ ಸಾಮೂಹಿಕ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ.

Advertisement

ಬುಧವಾರದಿಂದಲೇ ಚಾಲನೆ :

ಕಾರ್ಖಾನೆಯನ್ನು ಸರಕಾರಿ ಸ್ವಾಮ್ಯದಲ್ಲಿಯೇ ಪುನರಾರಂಭಿಸುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಡೆಸಿದ ಹೋರಾಟ ಫಲ ನೀಡಿದ್ದು, ಗಣೇಶ ಚತುರ್ಥಿ ದಿನ ಕಬ್ಬು ಅರೆಯುವಿಕೆ ಪ್ರಾರಂಭವಾಗಿದೆ. ಇದು ಈ ಭಾಗದ ರೈತರು, ಕಬ್ಬು ಬೆಳೆಗಾರರಲ್ಲಿ ಸಂತಸ ತಂದಿದೆ. ನಾಲ್ಕು ವರ್ಷಗಳ ಬವಣೆಗೆ ವಿರಾಮ ಬೀಳಲಿದೆ ಎಂಬ ಆಶಾಭಾವನೆ ಮೂಡಿದೆ.

ನಷ್ಟಕ್ಕೆ ಒಳಗಾಗಿದ್ದ ಕಾರ್ಖಾನೆ:

ದುರಾಡಳಿತ, ರಾಜಕೀಯ ಹಸ್ತಕ್ಷೇಪ, ದುಡಿಯುವ ಬಂಡವಾಳ ಕೊರತೆ, ಸಾಲ ಸಹಿತ ವಿವಿಧ ಸಮಸ್ಯೆಗಳಿಂದ ಕಾರ್ಖಾನೆ 2019ನೇ ಸಾಲಿನಿಂದ ಸಂಪೂರ್ಣ ಸ್ಥಗಿತಗೊಂಡಿತ್ತು. ನೂರಾರು ಕೋಟಿ ರೂ. ನಷ್ಟದಲ್ಲಿತ್ತು. ಇದರಿಂದ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರು ಸಂಕಷ್ಟ ಅನುಭವಿಸಿದ್ದರು. ಖಾಸಗಿ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಲು ಸಾಕಷ್ಟು ತೊಂದರೆಯಾಗುತ್ತಿತ್ತು. ಕಬ್ಬು ಕಟಾವು, ಕಾರ್ಮಿಕರ ಕೊರತೆ, ಸಾಗಾಣಿಕೆ, ವೆಚ್ಚ ಭರಿಸಲಾಗದೆ ಸಂಕಷ್ಟದಲ್ಲಿದ್ದರು.

Advertisement

ಸರಕಾರಗಳಿಂದ 522 ಕೋಟಿ ರೂ. :

ಕಾರ್ಖಾನೆಯ ಪುನಶ್ಚೇತನಕ್ಕಾಗಿ ಇದುವರೆಗೆ ಸರಕಾರಗಳು 522 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿವೆ. ಆದರೆ ಇದುವರೆಗೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಅನುದಾನ ಏನಾಗುತ್ತಿದೆ ಎಂಬುದರ ಬಗ್ಗೆ ಕಾರ್ಖಾನೆಯಲ್ಲಿ ಮಾಹಿತಿಯೇ ಇಲ್ಲ.

ಗುತ್ತಿಗೆಗೆ ವಹಿಸಲು ನಿರ್ಧಾರ:

2019ರಲ್ಲಿದ್ದ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಕಾರ್ಖಾನೆ ಯನ್ನು ಒ ಅಂಡ್‌ ಎಂಗೆ ವಹಿಸಲು ನಿರ್ಧರಿಸಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಅನಂತರ ಬಂದ ಬಿಜೆಪಿ ಸರಕಾರ ಪಾಂಡವಪುರದ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು 40 ವರ್ಷ ಖಾಸಗಿಯವರಿಗೆ ನೀಡಲು ಮುಂದಾಗಿತ್ತು.

ಐದಾರು ಬಾರಿ ಸಭೆ:

ಕಾರ್ಖಾನೆ ಆರಂಭಿಸುವ ವಿಚಾರದಲ್ಲಿ ಸಿಎಂ, ಸಕ್ಕರೆ ಸಚಿವರ ನೇತೃತ್ವದಲ್ಲಿ ಹಲವಾರು ಬಾರಿ ಜಿಲ್ಲೆಯ ರಾಜಕೀಯ ಪಕ್ಷಗಳು, ಜನಪ್ರತಿನಿಧಿ ಗಳು, ರೈತ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರ ಸಭೆಗಳು ನಡೆದಿದ್ದವು. ಅಲ್ಲಿಯೂ ಒಮ್ಮತಕ್ಕೆ ಬಾರದೆ ಇದ್ದುದರಿಂದ ಮುಂದೂಡಿಕೆಯಾಗುತ್ತಲೇ ಇತ್ತು.

50 ಕೋಟಿ ರೂ. ಘೋಷಣೆ :

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಮೈಷುಗರ್‌ ಕಾರ್ಖಾನೆಗೆ 50 ಕೋಟಿ ರೂ. ಘೋಷಣೆ ಮಾಡಿದರು. ಅದರಲ್ಲಿ 20 ಕೋಟಿ ರೂ. ಬಿಡುಗಡೆ ಮಾಡಿದ್ದು, ಉಳಿದ 30 ಕೋಟಿ ರೂ. ಬಿಡುಗಡೆಯಾಗಬೇಕಾಗಿದೆ.

ವಿವಿಧ ಸಂಘಟನೆಗಳ ಪ್ರತಿಭಟನೆ :

ಮಂಡ್ಯ ಜಿಲ್ಲಾ ರೈತ ಹಿತರಕ್ಷಣ ಸಮಿತಿ ಎರಡು ಗುಂಪುಗಳಾದ ಹಿನ್ನೆಲೆಯಲ್ಲಿ ಒಂದು ಗುಂಪು ಒ ಆ್ಯಂಡ್‌ ಎಂ ಪರ ನಿಂತಿದ್ದರೆ, ಮತ್ತೂಂದು ಬಣ ಸರಕಾರಿ ಸ್ವಾಮ್ಯದಲ್ಲಿಯೇ ಆರಂಭಿಸಬೇಕು ಎಂದು ಪಟ್ಟು ಹಿಡಿದಿದ್ದರು. ಅನಂತರ ಸರಕಾರ 40 ವರ್ಷ ಗುತ್ತಿಗೆ ನೀಡುತ್ತೇವೆ ಎಂದಾಗ ಎಲ್ಲ ಸಂಘಟನೆಗಳು ಒಗ್ಗೂಡಿದವು. ನಿರಂತರ ಒಂದು ತಿಂಗಳ ಕಾಲ ಧರಣಿ ನಡೆಸಿ ಸರಕಾರದ ಮೇಲೆ ಒತ್ತಡ ಹಾಕುವ ಮೂಲಕ ಸರಕಾರಿ ಸ್ವಾಮ್ಯದಲ್ಲಿಯೇ ನಡೆಸುವ ಘೋಷಣೆ ಮಾಡಲಾಯಿತು.

ಯಂತ್ರಗಳ ದುರಸ್ತಿ :

ನಾಲ್ಕು ವರ್ಷಗಳಿಂದ ಕಾರ್ಖಾನೆ ಸಂಪೂರ್ಣ ನಿಂತದ್ದರಿಂದ ಕಾರ್ಖಾನೆಯ ಕೆಲವು ಯಂತ್ರಗಳು ತುಕ್ಕು ಹಿಡಿದು ಹಾಳಾಗುವ ದುಃಸ್ಥಿತಿಯಲ್ಲಿದ್ದವು. ಆಗ ಪರಿಣತರ ತಂಡವನ್ನು ಕರೆಸಿ ಯಂತ್ರಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಅಧಿ ಕಾರಿಗಳು ಆಯಿಲಿಂಗ್‌ ಮಾಡಿ ಕಾರ್ಖಾನೆ ಪ್ರಾರಂಭಿಸಬಹುದು ಎಂದು ವರದಿಯಲ್ಲಿ ಉಲ್ಲೇಖೀಸಿದ್ದರು. ತಾಂತ್ರಿಕ ತಜ್ಞರ ವರದಿಯಂತೆ ಖಾಸಗಿ ಕಂಪೆನಿಗೆ ಯಂತ್ರಗಳ ದುರಸ್ತಿಯ ಟೆಂಡರ್‌ ನೀಡುವ ಮೂಲಕ ದುರಸ್ತಿ ಭರದಿಂದ ಸಾಗಿತ್ತು.

ಹೆಚ್ಚು ಆದಾಯವಿರುವ ಕಾರ್ಖಾನೆ :

ಮೈಷುಗರ್‌ ಹೆಚ್ಚು ಆದಾಯವಿರುವ ಕಾರ್ಖಾನೆ ಯಾಗಿದೆ. ಸಕ್ಕರೆ ಉತ್ಪಾದನೆಯ ಜತೆಗೆ ಸ್ಪಿರಿಟ್‌ ಉತ್ಪಾದಿಸುವ ಡಿಸ್ಟಿಲರಿ ಘಟಕ, ಸಹ ವಿದ್ಯುತ್‌ ಘಟಕ, ಮಡ್ಡಿ ತಯಾರಿಕೆ, ಮೊಲಾಸಸ್‌ ಸೇರಿದಂತೆ ಉಪ ಉತ್ಪನ್ನಗಳ ಮೂಲಕ ಆದಾಯ ಬರಲಿದೆ. ಬೆಂಗಳೂರಿನ ವಾಣಿಜ್ಯ ಸಕೀರ್ಣಗಳ ಬಾಡಿಗೆ, ಕಾರ್ಖಾನೆಯ ವ್ಯಾಪ್ತಿಯಲ್ಲಿ ನೂರಾರು ಎಕರೆ ಆಸ್ತಿ ಸಹಿತ ವಿವಿಧ ಮೂಲಗಳು ಕಾರ್ಖಾನೆ ಆದಾಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮುಂದೆ ನಷ್ಟವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರಕ್ಕಿದೆ.

ಆ.11ರಂದು ಬಾಯ್ಲರ್‌ಗೆ ಬೆಂಕಿ :

ಆ.11ರಂದು ಕಾರ್ಖಾನೆಯ ಬಾಯ್ಲರ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಸಚಿವ ಕೆ.ಸಿ. ನಾರಾಯಣಗೌಡ, ಶಾಸಕ ಎಂ. ಶ್ರೀನಿವಾಸ್‌ ಸೇರಿದಂತೆ ಮತ್ತಿತರರು ಬಾಯ್ಲರ್‌ಗೆ ಬೆಂಕಿ ಹಚ್ಚುವ ಮೂಲಕ ರೈತರಿಗೆ ಕಾರ್ಖಾನೆ ಆರಂಭವಾಗುವ ಬಗ್ಗೆ ಖಾತ್ರಿಪಡಿಸಿದ್ದರು.

ಶತಕ ಪೂರೈಸಲಿರುವ ಏಕೈಕ ಕಾರ್ಖಾನೆ :

ಮೈಷುಗರ್‌ ಕಾರ್ಖಾನೆ ಸತತವಾಗಿ ಇನ್ನು 10 ವರ್ಷ ನಿರಂತರವಾಗಿ ನಡೆದರೆ ಶತಕ ಪೂರೈಸಿದ ಏಕೈಕ ಕಾರ್ಖಾನೆ ಆಗಲಿದೆ. 1933ರ ಜ.30ರಂದು ಪ್ರಾರಂಭಗೊಂಡ ಕಾರ್ಖಾನೆ ಈಗ 90 ವರ್ಷ ಪೂರೈಸಿದ್ದು, ಶತಕ ಪೂರೈಸಲು 10 ವರ್ಷ ಬಾಕಿ ಉಳಿದಿದೆ.

ಇನ್ನು ಮುಂದೆ ಯಾವುದೇ ತೊಂದರೆ ಇಲ್ಲದೆ  ಕಾರ್ಖಾನೆ ನಿರಂತರವಾಗಿ ನಡೆಯಲಿ ಎಂಬುದು  ರೈತರ ಹೆಬ್ಬಯಕೆಯಾಗಿದೆ.

ಸವಾಲುಗಳು :

  • ಕಾರ್ಖಾನೆಯನ್ನು ಲಾಭದತ್ತ ಕೊಂಡೊಯ್ಯಬೇಕು.
  • ಭ್ರಷ್ಟಾಚಾರ ರಹಿತ ವಾಗಿ, ರಾಜಕೀಯ ಹಸ್ತಕ್ಷೇಪವಿಲ್ಲದೆ, ಕಾರ್ಮಿಕರು ಹಾಗೂ ಅಧಿಕಾರಿಗಳ ನಡುವೆ ಸಮನ್ವಯ ಕಾಪಾಡಬೇಕು.
  • ಹಣಕಾಸು ವ್ಯವಹಾರ ಪಾರದರ್ಶಕವಿದ್ದು, ಸುಸ್ಥಿತಿಯಲ್ಲಿಡಬೇಕು.
  • ನಿರಂತರವಾಗಿ ಕಾರ್ಖಾನೆ ನಡೆಯುವಂತೆ ನೋಡಿಕೊಳ್ಳಬೇಕು.
  • ನಿಗದಿತ ಅವಧಿಯ ಒಳಗೆ ರೈತರಿಗೆ ಹಣ ಪಾವತಿಸಬೇಕು.
  • ಕಾರ್ಖಾನೆಯ ಆಸ್ತಿಯನ್ನು ಸಂರಕ್ಷಿಸಬೇಕು.
  • ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಸಂಪೂರ್ಣವಾಗಿ ಅರೆಯಬೇಕು.
Advertisement

Udayavani is now on Telegram. Click here to join our channel and stay updated with the latest news.

Next