ಬೆಂಗಳೂರು : ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಮಹತ್ವದ ಸಭೆ ನಡೆಸಲಾಯಿತು.
ವಿಧಾನಸೌಧದ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಭಾಗಿಯಾಗಿ ತಮ್ಮ ಅಭಿಪ್ರಾಯ ಮುಂದಿಟ್ಟರು.
ಸಭೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸಕ್ಕರೆ ಸಚಿವ ಶಂಕರಪಾಟೀಲ್ ಮುನೇನಕೊಪ್ಪ,ಸಂಸದೆ ಸುಮಲತಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಶಾಸಕರಾದ ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶ್ರೀಕಂಠೇಗೌಡ, ಅಪ್ಪಾಜಿಗೌಡ, ರವೀಂದ್ರ ಶ್ರೀಕಂಠಯ್ಯ,ಶ್ರೀನಿವಾಸ್, ಬಡಗಲಪುರ ನಾಗೇಂದ್ರ ಸೇರಿ ಹಲವು ರೈತ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.
420 ಕೋಟಿ ರೂ. ನಷ್ಟ
2008 ರಿಂದ ಮೂರು ಸರಕಾರಗಳಿಂದ ಒಟ್ಟು 700 ಕೋಟಿ ರೂಪಾಯಿಯಷ್ಟು ಹಣವನ್ನು ಕಾರ್ಖಾನೆಯ ಪುನಶ್ಚೇತನಕ್ಕಾಗಿ ಕೊಡಲಾಗಿತ್ತಾದರೂ, ಸುಮಾರು 420 ಕೋಟಿ ರೂ. ನಷ್ಟದಲ್ಲಿದೆ. ನಷ್ಟದ ಹಿನ್ನೆಲೆಯಲ್ಲಿ ಕಾರ್ಖಾನೆಯ ಕಾರ್ಯವನ್ನು ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ.
ಖಾಸಗಿಕರಣ ಮಾಡುವ ಪ್ರಸ್ತಾಪ ಸದ್ಯಕ್ಕೆ ವಾಪಸು
ಮೂರು ತಿಂಗಳಲ್ಲಿ ಮೈಶುಗರ್ ಪುನಶ್ಚೇತನಕ್ಕೆ ಕ್ರಮಕ್ಕೆ ಸೂಚನೆ ನೀಡಲಾಗಿದ್ದು, ಕಬ್ಬಿನ ಉಪ ಉತ್ಪನ್ನಗಳನ್ನು ತಯಾರಿಸಲು ಆದ್ಯತೆ ನೀಡಲಾಗುವುದು. ಕೂಡಲೆ ದಕ್ಷ ಅಧಿಕಾರಿಯನ್ನು ಎಂಡಿಯಾಗಿ ನೇಮಕ ಮಾಡಲು ತೀರ್ಮಾನ ಮಾಡಿದ್ದೇವೆ. ಅಗತ್ಯ ಯಂತ್ರಗಳನ್ನು ಸರಿಪಡಿಸಲು ಈಗಿನಿಂದಲೇ ಕ್ರಮ ಕೈಗೊಳ್ಳಲಾಗುವುದು.ಖಾಸಗಿಕರಣ ಮಾಡುವ ಪ್ರಸ್ತಾಪ ಸದ್ಯಕ್ಕೆ ವಾಪಸ್ಸು ಪಡೆಯುತ್ತೇವೆ. ಕಾರ್ಖಾನೆಗೆ ಅಗತ್ಯ ಹಣಕಾಸು ನೆರವು ನೀಡಲಾಗುವುದು ಎಂದು ಸಭೆಯ ಬಳಿಕ ಮುಖ್ಯಮಂತ್ರಿಗಳು ತಿಳಿಸಿದರು.