ಮಂಡ್ಯ: ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಹಾಗೂ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ನಡುವಿನ ಶೀತಲ ಸಮರ ಮತ್ತೊಮ್ಮೆ ಸ್ಫೋಟಿಸಿದ್ದು, ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಬೈಪಾಸ್ ನಿರ್ಮಾಣದಿಂದ ನೀರು ನುಗ್ಗಿತ್ತು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರವಿವಾರ ಸಂಸದ ಪ್ರತಾಪ ಸಿಂಹ ಮಂಡ್ಯ ನಗರದಲ್ಲಿ ಮಳೆಯಿಂದ ಜಲಾವೃತಗೊಂಡಿದ್ದ ವಿವೇಕಾನಂದ ಬಡಾವಣೆ, ಬೀಡಿ ಕಾರ್ಮಿಕರ ಕಾಲನಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು. ಸ್ಥಳೀಯರು ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದರು. ಇದು ಸಂಸದರಿಬ್ಬರ ನಡುವಿನ ವಾಕ್ಸಮರಕ್ಕೆ ಮತ್ತೊಮ್ಮೆ ವೇದಿಕೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಕಾಮಗಾರಿ ವಿಚಾರದಲ್ಲಿ ಈ ಹಿಂದೆ ಇಬ್ಬರ ನಡುವೆ ವಾಕ್ಸಮರವೇ ನಡೆದಿತ್ತು. ಯಲಿಯೂರು ಬಳಿ ಸೇತುವೆ ನಿರ್ಮಾಣ ವಿಚಾರಕ್ಕೆ ಸಂಬಂ ಧಿಸಿದಂತೆ ಸ್ಥಳೀಯರು ಪ್ರತಾಪಸಿಂಹಗೆ ಮನವಿ ಮಾಡಿದ್ದರು. ಆಗ ಪ್ರತಾಪಸಿಂಹ ಮಂಡ್ಯ ಸಂಸದರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬ ಹೇಳಿಕೆ ನೀಡಿದ್ದರಿಂದ ಇಬ್ಬರ ನಡುವೆ ಮಾತಿನ ಸಮರವೇ ನಡೆದಿತ್ತು.
ಇದನ್ನೂ ಓದಿ:
ಆರ್ಥಿಕ ಸುಧಾರಣೆ ಅಬಾಧಿತ;ದಾವೋಸ್ ವಿಶ್ವ ಆರ್ಥಿಕ ಶೃಂಗದಲ್ಲಿ ನೀತಿ ಆಯೋಗದ ಸಿಇಒ ಪ್ರತಿಪಾದನೆ
ಪ್ರತಾಪಸಿಂಹ ಹೇಳಿಕೆಗೆ ಸುಮಲತಾ ಕೆಂಡ ಕಾರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರತಾಪಸಿಂಹ, ಸುಮಲತಾ ಅವರ ಹೇಳಿಕೆಗೆ ಮಹತ್ವ ಕೊಡುವಂತಿಲ್ಲ. ಅಲ್ಲದೆ, ನನ್ನ ಕ್ಷೇತ್ರದಲ್ಲಿ ರಸ್ತೆ ಸಮಸ್ಯೆ ಬಗ್ಗೆ ಮಾತನಾಡಿರುವ ಅವರು, ಆ ರಸ್ತೆಗಳು ಯಾರ ವ್ಯಾಪ್ತಿಗೆ ಬರಲಿದೆ ಎಂಬುದರ ಅರಿವಿಲ್ಲದೆ ಮಾತನಾಡಿದ್ದಾರೆ ಎಂದು ಹೇಳಿದ್ದರು.