Advertisement

ಕೆ.ಆರ್‌.ಪೇಟೆಗೆ 2ನೇ ಬಾರಿ ಮಂತ್ರಿಗಿರಿ!

04:21 PM Dec 11, 2019 | Naveen |

ಮಂಡ್ಯ: ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಕಮಲ ಅರಳಿಸಿ ದಾಖಲೆ ಸೃಷ್ಟಿಸಿದ ಕೆ.ಸಿ.ನಾರಾಯಣಗೌಡರಿಗೆ ಮಂತ್ರಿಯೋಗ ಕೂಡಿಬಂದಿದೆ. ಸರಳ, ಸಜ್ಜನಿಕೆ ರಾಜಕಾರಣಿ ಕೆ.ಆರ್‌.ಪೇಟೆ ಕೃಷ್ಣ ಅವರ ಬಳಿಕ ಕ್ಷೇತ್ರದಿಂದ ಮಂತ್ರಿ ಸ್ಥಾನ ಅಲಂಕರಿಸುತ್ತಿರುವ ಎರಡನೇ ಶಾಸಕರಾಗಿದ್ದಾರೆ.

Advertisement

ಮುಖ್ಯಮಂತ್ರಿಯಾಗಿದ್ದ ಎಸ್‌.ಆರ್‌.ಬೊಮ್ಮಾಯಿ ಸರ್ಕಾರದಲ್ಲಿ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಸಚಿವರಾಗಿ ಕೆ.ಆರ್‌.ಪೇಟೆ ಕೃಷ್ಣ ಕಾರ್ಯನಿರ್ವಹಿಸಿದ್ದರು. ಬರೋಬ್ಬರಿ ಮೂರು ದಶಕಗಳ ಬಳಿಕ ಕೆ.ಆರ್‌. ಪೇಟೆ ಕ್ಷೇತ್ರಕ್ಕೆ ಸಚಿವ ಭಾಗ್ಯ ಕೂಡಿ ಬಂದಿದೆ. ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಯಾಗಿ ಆ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆಯುತ್ತಿರುವ ಕೆ.ಸಿ.ನಾರಾಯಣಗೌಡರು ಅದೃಷ್ಟವಂತ ಶಾಸಕರೆನಿಸಿದ್ದಾರೆ.

ಕ್ಷೇತ್ರದೊಳಗೆ ಅಭಿವೃದ್ಧಿಯ ಸ್ವರ್ಗವನ್ನೇ ಸೃಷ್ಟಿಸುವುದಾಗಿ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದ್ದು, ಅದು ಯಾವ ರೀತಿ ಸಾಕಾರಗೊಳ್ಳಲಿದೆ ಎನ್ನುವುದು ಸದ್ಯದ ಕುತೂಹಲವಾಗಿದೆ. ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೀಡಿದ ಭರವಸೆಯಂತೆ ಅನರ್ಹ ಶಾಸಕರೆಲ್ಲರೂ ಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ. ಅದರಲ್ಲಿ ಕೆ.ಸಿ.ನಾರಾಯಣಗೌಡರೂ ಒಬ್ಬರಾಗಿದ್ದು, ತೋಟಗಾರಿಕೆ ಖಾತೆ ಜೊತೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಸ್ಥಾನವೂ ನಾರಾಯಣಗೌಡರಿಗೆ ದೊರಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಸಿಎಂ ಕೊಡುಗೆ ನಿರೀಕ್ಷೆ: ಸತತ ಮೂರು ಬಾರಿ ಶಾಸಕರಾಗಿ ಕ್ಷೇತ್ರದಿಂದ ಆಯ್ಕೆಯಾದ ದಾಖಲೆ ಜೊತೆಗೆ ಬಿಜೆಪಿಗೆ ಮೊಟ್ಟ ಮೊದಲಬಾರಿ ಗೆಲುವನ್ನು ತಂದುಕೊಟ್ಟ ಖ್ಯಾತಿ ಮುಡಿಗೇರಿಸಿಕೊಂಡಿರುವ ಕೆ.ಸಿ.ನಾರಾಯಣಗೌಡರು ಸಚಿವರಾಗಿ ಅಭಿವೃದ್ಧಿಯಲ್ಲಿ ಯಾವ ಕೊಡುಗೆ ನೀಡಲಿದ್ದಾರೆ ಎಂಬ ಬಗ್ಗೆ ಎಲ್ಲರೂ ಆಸಕ್ತರಾಗಿದ್ದಾರೆ. ಅದೇ ರೀತಿ ಬಿಜೆಪಿಯನ್ನು ಗೆಲ್ಲಿಸಿದರೆ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವುದಾಗಿ ಸಿಎಂ ಯಡಿಯೂರಪ್ಪನವರೂ ಭರವಸೆ ನೀಡಿದ್ದು, ತವರಿಗೆ ನೀಡುವ ಕೊಡುಗೆಯ ಬಗ್ಗೆಯೂ ಜನರಲ್ಲಿ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಅಭಿವೃದ್ಧಿ ಗಾಳಿ ಗೋಪುರ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದ ಅಂಬರೀಶ್‌ ವಸತಿ ಖಾತೆ ಜೊತೆಗೆ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿದ್ದರು. ನಂತರದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಿಂದ ಡಿ.ಸಿ.ತಮ್ಮಣ್ಣ ಸಾರಿಗೆ ಹಾಗೂ ಪುಟ್ಟರಾಜು ಸಣ್ಣ ನೀರಾವರಿ ಖಾತೆ ಜೊತೆ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿದ್ದರು. ಪ್ರಬಲ ನಾಯಕರು ಸಚಿವ ಹುದ್ದೆಯಲ್ಲಿದ್ದರೂ ಜಿಲ್ಲೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣಲಿಲ್ಲ. ಸಿಎಂ ಆಗಿದ್ದ ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿಗೆ 8500 ಕೋಟಿ ರೂ. ಘೋಷಿಸಿದರೂ ಅದು ಜಿಲ್ಲೆಯ ಪಾಲಿಗೆ ಗಾಳಿ ಗೋಪುರವಾಯಿತು. ಅಲ್ಲದೆ, ಸಿದ್ದರಾಮಯ್ಯನವರ ಅವಧಿಯಲ್ಲಿ ಜಿಲ್ಲೆಯ ನೀರಾವರಿ ಕಾಮಗಾರಿಗಳಿಗೆ ಬಿಡುಗಡೆ ಮಾಡಿದ್ದ 850 ಕೋಟಿ ರೂ. ಹಣವನ್ನು ಕುಮಾರಸ್ವಾಮಿ ತಡೆಹಿಡಿದು ಅಭಿವೃದ್ಧಿ ಹಿನ್ನಡೆಗೆ ಕಾರಣರಾದರು ಎಂಬ ಆರೋಪಕ್ಕೂ ಗುರಿಯಾದರು.

Advertisement

ಸಮರ್ಪಕ ವಿನಿಯೋಗದ ಅನುದಾನ: ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯ ಆರ್ಥಿಕ ಜೀವನಾಡಿಯಾಗಿದ್ದ ಮೈಸೂರು ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ನೂರಾರು ಕೋಟಿ ರೂ. ಹಣ ಬಿಡುಗಡೆ ಮಾಡಿದ್ದರು. ನಗರೋತ್ಥಾನ ಯೋಜನೆಯಡಿ 60 ಕೋಟಿ ರೂ. ಹಣ ಬಿಡುಗಡೆ ಸೇರಿದಂತೆ ಹಲವಾರು ಅಭಿವೃದ್ಧಿ ಚಟುವಟಿಕೆಗೆ ಹಣ ಬಿಡುಗಡೆ ಮಾಡಿದ್ದರು. ಅನುದಾನದ ಹಣ ಸಮರ್ಪಕ ವಿನಿಯೋಗವಾಗದೆ  ಲ್ಲೆಯ ಅಭಿವೃದ್ಧಿ ಮಸುಕಾಯಿತು.

ಜಿಲ್ಲೆಗೆ ವಿಶೇಷ ಆದ್ಯತೆ: ಈಗ ಬಿಜೆಪಿ ಮೊದಲ ಬಾರಿಗೆ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಅಧಿಕೃತ ಶಾಸಕರನ್ನು ಹೊಂದಿದೆ. ಅಂತೆಯೇ ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯಮಟ್ಟದ ಕೇಸರಿ ಪಡೆ ನಾಯಕರ ಉತ್ಸಾಹವನ್ನೂ ಹೆಚ್ಚಿಸಿದೆ. ಜಿಲ್ಲೆಯ ಇತರೆ ಕ್ಷೇತ್ರಗಳಲ್ಲೂ ಕಮಲ ಅರಳಿಸುವ ವಿಶ್ವಾಸ ಅವರಲ್ಲಿ ಮೂಡಿರುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ವಿಶೇಷವಾದ ಒಲವನ್ನು ತೋರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ನಂಬಲಾಗಿದೆ.

ಅಭಿವೃದ್ಧಿಗೆ ಒತ್ತಾಸೆ: ಈಗ ಕೆ.ಸಿ.ನಾರಾಯಣಗೌಡರು ಸಚಿವರಾದ ನಂತರದಲ್ಲಿ ಜನರಿಗೆ ಕೊಟ್ಟ ಮಾತಿನಂತೆ ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಒತ್ತಾಸೆ ನೀಡಿದಲ್ಲಿ ಮಾತ್ರ ಇತರೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಮತ್ತಷ್ಟು ನೆಲೆ ದೊರಕಿಸುವುದಕ್ಕೆ ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಕೆ.ಸಿ.ನಾರಾಯಣಗೌಡರ ಕಾರ್ಯಶೈಲಿ ಹೇಗಿರಲಿದೆ ಎನ್ನುವುದನ್ನು ಜನರು ಎದುರು ನೋಡುತ್ತಿದ್ದಾರೆ.

ಹುಸಿಯಾದ ನಿರೀಕ್ಷೆ: ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಸಾಧಿಸಿದ ಸಮಯದಲ್ಲೂ ಕೇಂದ್ರದಿಂದ ಭರಪೂರ ಕೊಡುಗೆ ಜಿಲ್ಲೆಗೆ ಹರಿದು ಬರುವ ನಿರೀಕ್ಷೆ ಮೂಡಿಸಿದ್ದವು. ಅದೇ ರೀತಿ ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರದಲ್ಲಿ ಸುಮಲತಾ ಮೂಲಕ ಮತ್ತಷ್ಟು ಅಭಿವೃದ್ಧಿ ಯೋಜನೆಗಳು ಸಿಗುವ ಕನಸುಗಳು ಮತ್ತಷ್ಟು ಗರಿಗೆದರಿದ್ದವು.

ಆದರೆ, ಇದುವರೆಗೂ ನಿರೀಕ್ಷೆಯಂತೆ ಜಿಲ್ಲೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಹತ್ವವೆನಿಸುವಂತಹ ಯಾವುದೇ ಕೊಡುಗೆ ಸಿಕ್ಕಿಲ್ಲ. ಇದು ಈ ನೆಲದ ದೌರ್ಭಾಗ್ಯವೂ ಹೌದು. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಹುದ್ದೆ ಅಲಂಕರಿಸಲಿರುವ ಕೆ.ಸಿ.ನಾರಾಯಣಗೌಡರು ಜಿಲ್ಲೆಯ ಅಭಿವೃದ್ಧಿಯಲ್ಲಿ ಮಾಡುವ ಮೋಡಿ ಮುಂದಿನ ದಿನಗಳಲ್ಲಿ ಜಿಲ್ಲೆಯೊಳಗೆ ಬಿಜೆಪಿ ಭವಿಷ್ಯವನ್ನು ನಿರ್ಧರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next