ಮಂಡ್ಯ: ಗ್ರಾಮೀಣ ಪರಿಸರವನ್ನು ಸ್ವಚ್ಛತೆಯಿಂದ ಇಡುವ ಸಲುವಾಗಿ ನೈರ್ಮಲ್ಯ ಕ್ರಾಂತಿಗೆ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮ ಪಂಚಾಯಿತಿ ಪಣ ತೊಟ್ಟಿದೆ. ಪಂಚಾಯಿತಿ ವ್ಯಾಪ್ತಿಯೊಳಗೆ ನಿತ್ಯವೂ ಬೀಳುತ್ತಿರುವ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿ, ವಿಂಗಡಣೆ ಮಾಡಿ ದಾಸ್ತಾನು ಮಾಡುವುದರೊಂದಿಗೆ ವೈಜ್ಞಾನಿಕ ವಿಲೇವಾರಿಗೆ ನಿರ್ಧರಿಸಿದೆ. ಪಂಚಾಯಿತಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ದೃಢ ಸಂಕಲ್ಪ ಹೊತ್ತು ಮಾದರಿ ಪಂಚಾಯಿತಿಯಾಗುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.
Advertisement
ಪರಿಸರ ಸ್ವಚ್ಛತೆಯನ್ನು ಪ್ರಮುಖ ಗುರಿಯಾಗಿಸಿ ಕೊಂಡು ಶ್ರಮಿಸುತ್ತಿರುವ ಅಧಿಕಾರಿಗಳ ಈ ಮಹತ್ಕಾ ರ್ಯಕ್ಕೆ ಗ್ರಾಮಗಳ ಜನರೂ ಕೈಜೋಡಿ ಸಿದ್ದಾರೆ. ನಿತ್ಯವೂ ಬೀಳುವ ಕಸವನ್ನು ಬೇಕಾಬಿಟ್ಟಿ ಎಸೆಯದೆ ಒಂದೆಡೆ ಸಂಗ್ರಹಿಸಿಟ್ಟು ಕಸ ಸಂಗ್ರಹಿಸಲು ಬರುವ ಪೌರ ಕಾರ್ಮಿಕರಿಗೆ ನೀಡುತ್ತಾ ಗ್ರಾಮೀಣ ಪರಿಸರ ಹದಗೆಡದಂತೆ ಕಾಪಾಡಿಕೊಳ್ಳುವತ್ತ ಆಸಕ್ತಿ ವಹಿಸಿದ್ದಾರೆ.
Related Articles
Advertisement
ಕಸ ಸಂಗ್ರಹ: ಗ್ರಾಮಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಲೋಟಗಳು, ಒಡೆದುಹೋದ ಬಕೆಟ್‌ಗಳು, ಪ್ಲಾಸ್ಟಿಕ್ ಬಾಟಲ್ಗಳು, ಪ್ಲಾಸ್ಟಿಕ್ ಕವರ್‌ಗಳು, ಚಪ್ಪಲಿಗಳು, ಪ್ಲಾಸ್ಟಿಕ್ ವೈರ್‌ಗಳು ಸೇರಿದಂತೆ ವಿವಿಧ ಮಾದರಿಯ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಪಂಚಾಯಿತಿ ಪೌರ ಕಾರ್ಮಿಕರು ತರುತ್ತಾರೆ. ಬೆಳಗ್ಗೆ 6.30 ಗಂಟೆಯಿಂದಲೇ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ಬೆಳಗ್ಗೆ 11 ಗಂಟೆಯವರೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚರಂಡಿಗಳನ್ನು ಶುಚಿಗೊಳಿಸುವರು. ಆನಂತರ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ಮೇಳಾಪುರ ಹಾಗೂ ಹೆಬ್ಟಾಡಿ ಹುಂಡಿಗಳಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ತರುವ ಕೆಲಸವನ್ನು ಬದ್ಧತೆಯಿಂದ ನಿರ್ವಹಿಸುತ್ತಿದ್ದಾರೆ.
ರಕ್ಷಣಾ ಸಾಮಗ್ರಿ ವಿತರಣೆ: ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಲು ಬರುವ ಪೌರ ಕಾರ್ಮಿಕರಿಗೆ ಗ್ಲೌಸ್, ಶೂ, ಮಾಸ್ಕ್, ಹೆಲ್ಮೆಟ್ ಹಾಗೂ ಸಮವಸ್ತ್ರಗಳನ್ನು ನೀಡಲಾ ಗಿದೆ. ಅವುಗಳನ್ನು ಚಾಚೂ ತಪ್ಪದೆ ಕೆಲಸದಲ್ಲಿ ಬಳಸು ತ್ತಿರುವ ಕಾರ್ಮಿಕರು ಕಸ ಸಂಗ್ರಹಣೆ ಕಾರ್ಯವನ್ನು ನಿರ್ವಹಿಸುತ್ತಾ ಜನರಲ್ಲೂ ಜಾಗೃತಿ ಮೂಡಿಸುತ್ತಾ ಸ್ವಚ್ಛತೆಯ ಸಂದೇಶ ಸಾರುತ್ತಿದ್ದಾರೆ.
ಪ್ರತಿ ಬೀದಿಯ ಜನರೂ ಮನೆಯಿಂದ ಹೊರಬೀಳುವ ಅನುಪಯೋಗಿ ಪ್ಲಾಸ್ಟಿಕ್ ವಸ್ತುಗಳನ್ನು ಮನೆಯ ಮುಂಭಾಗದಲ್ಲಿ ಹಾಕುವರು. ಕೈಗಾಡಿ ಯೊಂದಿಗೆ ಬರುವ ಪೌರ ಕಾರ್ಮಿಕರು ಅವುಗಳನ್ನು ಚೀಲದಲ್ಲಿ ತುಂಬಿಕೊಂಡು ಸಾಗುವರು. ಎಲ್ಲಿಯೂ ಕಸ ಬೀಳದಂತೆ ಜಾಗೃತಿ ವಹಿಸುವ ಮೂಲಕ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಿರುವುದರಿಂದ ಪಂಚಾಯಿತಿ ವ್ಯಾಪ್ತಿಯ ಎರಡು ಗ್ರಾಮಗಳಲ್ಲಿ ಸ್ವಚ್ಛತಾ ಹಾಗೂ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣವಾಗಿದೆ.