ಮಂಡ್ಯ: 2018ರ ವಿಧಾನಸಭಾ ಚುನಾವಣೆಯಲ್ಲಿ ಶೇ.100ರಷ್ಟು ಫಲಿತಾಂಶ ಕೊಟ್ಟು ಜಿಲ್ಲೆಯ 7 ಕ್ಷೇತ್ರಗಳಲ್ಲೂ ಜೆಡಿಎಸ್ ವಿಜಯ ಪತಾಕೆ ಹಾರಿಸಿದೆ. ಈ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಟಿಕೆಟ್‌ಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಹಾಸನ-ರಾಮನಗರ ಜಿಲ್ಲೆಗಳಿಗಿಂತಲೂ ಹೆಚ್ಚು ಸುರಕ್ಷಿತ ಮತ್ತು ಸುಭದ್ರ ಆಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿನ ಸ್ಪಷ್ಟತೆ ಇರುವುದರಿಂದ ಆಕಾಂಕ್ಷಿತರ ಲಾಭಿ ತೀವ್ರಗೊಂಡಿದೆ.
ಒಕ್ಕಲಿಗ ಸಮುದಾಯದ ಸಂಘಟಿತ ಚುನಾವಣಾ ಹೋರಾಟದಿಂದ ಜೆಡಿಎಸ್ ಪಾರುಪತ್ಯ ಮುಂದುವರಿದಿದ್ದು, ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ನಡುವೆಯೇ ಸ್ಪರ್ಧೆ ನಡೆದರೂ ಜೆಡಿಎಸ್ ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ದೋಸ್ತಿಯಾಗಿ ಅಖಾಡಕ್ಕೆ ಇಳಿದರೆ ಇಲ್ಲಿ ಬಿಜೆಪಿಯನ್ನು ಮಣಿಸುವುದು ಕಷ್ಟವಾಗುವುದಿಲ್ಲ. ಹಾಗಾಗಿ, ದೋಸ್ತಿ ಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಮಣಿಸುವ ಸಾಹಸಕ್ಕೆ ಮುಂದಾಗುವ ಸಾಧ್ಯತೆಯೇ ಇಲ್ಲಿ ಹೆಚ್ಚು.
ಈ ಹಿಂದೆ ನಾಗಮಂಗಲ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಕೇಂದ್ರ ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿ ಲಕ್ಷ್ಮೀ ಅಶ್ವಿನ್‌ಗೌಡ ಈ ಬಾರಿ ಜೆಡಿಎಸ್ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸಿದ್ದಾರೆ. ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಮಂಡ್ಯ ವಿಧಾನಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ಕೃಷ್ಣ ಅವರೂ ರೇಸ್‌ನಲ್ಲಿದ್ದಾರೆ. ಉಳಿದಂತೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣರ ಪುತ್ರ ಸಂತೋಷ, ಎಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿಖೀಲ್ ಕುಮಾರಸ್ವಾಮಿ ಹೆಸರುಗಳೂ ಚಾಲ್ತಿಯಲ್ಲಿವೆ.
ಆದರೆ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳಿಗೆ ಡಿಮ್ಯಾಂಡ್ ಸೃಷ್ಟಿಯಾಗಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲೇ ನಿವೃತ್ತಿ ಘೋಷಿಸಿರುವ ಅಂಬರೀಶ್, ಕೇಂದ್ರ ರಾಜಕಾರಣ ದತ್ತ ಮುಖ ಮಾಡುವ ಸಾಧ್ಯತೆಗಳಿಲ್ಲ. ಮಾಜಿ ಸಂಸದೆ ರಮ್ಯಾ ಸ್ಪರ್ಧೆ ಕೂಡಾ ಅನುಮಾನ. ಮಾಜಿ ಶಾಸಕ ಎನ್.ಚೆಲುವರಾಯಸ್ವಾಮಿ ಲೋಕ ಸಭಾ ಉಪ ಚುನಾವಣಾ ಸ್ಪರ್ಧೆಗೆ ಈಗಾಗಲೇ ಬಹಿರಂಗವಾಗಿ ನಿರಾಸಕ್ತಿ ಪ್ರದರ್ಶಿಸಿದ್ದಾರೆ.
ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ಜಿಲ್ಲೆಯಲ್ಲೇ ಬಿಜೆಪಿಗೆ ಠೇವಣಿ ಉಳಿಸಿಕೊಳ್ಳುವಲ್ಲಿ ಸಫಲವಾಗಿರುವ ಕ್ಷೇತ್ರ ಮಂಡ್ಯ. ಪಕ್ಷದಿಂದ ಚಂದ ಗಾಲು ಶಿವಣ್ಣ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ರೈತಪರ ಹೋರಾಟಗಾರ ಶ್ರೀರಂಗಪಟ್ಟಣದ ಪರಾಜಿತ ಅಭ್ಯರ್ಥಿ ಕೆ.ಎಸ್.ನಂಜುಂಡೇಗೌಡ, ಶಾಸಕ ಆರ್.ಅಶೋಕ್ ಅವರ ಹೆಸರುಗಳು ರೇಸ್‌ನಲ್ಲಿವೆ.