ಮಂಡ್ಯ: ಲೋಕಸಭಾ ಚುನಾವಣೆಯ ಕಾವು ಜಿಲ್ಲೆಯಲ್ಲಿ ಜೋರಾಗಿದ್ದು, ಮಂಡ್ಯದಲ್ಲಿ ಪಾರುಪತ್ಯ ಸಾಧಿಸಲು ಸಾಂಪ್ರದಾಯಿಕ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿದ್ದು, ಮೈತ್ರಿ, ಗ್ಯಾರಂಟಿ, ಜಾತಿ ಲೆಕ್ಕಾಚಾರಗಳು ನಡೆಯುತ್ತಿವೆ. ದಿಲ್ಲಿಯಲ್ಲೂ ಸದ್ದು ಮಾಡುವ ರಾಜಕಾರಣ ಜಿಲ್ಲೆಯಲ್ಲಿ ಹಾಸು ಹೊಕ್ಕಾಗಿದೆ. ಪ್ರತಿ ಗ್ರಾಮದಲ್ಲೂ ರಾಜಕಾರಣದ್ದೇ ಚರ್ಚೆ. ಒಂದೆಡೆ ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ ಆಗಿದ್ದು, ರಾಜಕೀಯ ಅನುಭವ ಹೊಂದಿದ್ದಾರೆ. ಆದರೂ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಸ್ಪರ್ಧೆಗಿಳಿದಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು)
ಹೊಸಬರಾಗಿದ್ದರೂ, ಅನುಭವಿ ರಾಜಕಾರಣಿ, ಸಚಿವ ಚಲುವರಾಯಸ್ವಾಮಿಯ ಕೃಪಕಟಾಕ್ಷ ಇದೆ.
Advertisement
ಇದುವರೆಗೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 13 ಬಾರಿ ಕಾಂಗ್ರೆಸ್ ಗೆದ್ದಿದ್ದರೆ, ಒಂದು ಬಾರಿ ಪ್ರಜಾ ಸೋಷ್ಯಲಿಸ್ಟ್ ಪಕ್ಷ, 5 ಬಾರಿ ಜೆಡಿಎಸ್ ಹಾಗೂ ಒಂದು ಬಾರಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಮೊದಲು ಕ್ಷೇತ್ರವನ್ನು ಆಳಿದ್ದು, ಕಾಂಗ್ರೆಸ್ ಪಕ್ಷ. ನಂತರ ನಿಧಾನವಾಗಿ ಜೆಡಿಎಸ್ ತೆಕ್ಕೆಗೆ ಜಾರಿದ್ದು, ಸಾಂಪ್ರದಾಯಿಕ ಎದುರಾಳಿಗಳಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಹಾವು-ಏಣಿ ಆಟ ನಡೆಯುತ್ತಲೇ ಇದೆ. ಇದರ ನಡುವೆ ಸಿನಿಮಾದವರು ಮಂಡ್ಯ ಆಳಿದ್ದಾರೆ. ಕಳೆದ ಬಾರಿ ಸಂಸದೆ ಸುಮಲತಾ ಅಂಬರೀಷ್ ಪಕ್ಷೇತರವಾಗಿ ಗೆದ್ದಿದ್ದು ಇತಿಹಾಸ.
Related Articles
Advertisement
ಕ್ಷೇತ್ರಕ್ಕೆ ಇಬ್ಬರ ಸ್ಪರ್ಧೆಯೂ ಹೊಸದಾಗಿದ್ದರೂ ಕುಮಾರಸ್ವಾಮಿ ಮಾಜಿ ಸಿಎಂ ಎಂಬ ಹಿನ್ನೆಲೆ ಇದೆ. ತನ್ನದೇ ಆದ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ನನ್ನ ಕೊಡುಗೆಯೂ ಇದೆ ಎಂದು ಕುಮಾರಸ್ವಾಮಿ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ, ಮೈತ್ರಿ ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಕಳೆದ ಬಾರಿಯ ಪುತ್ರನ ಸೋಲಿನ ಅನುಕಂಪ, ಆರೋಗ್ಯ ಸೇರಿದಂತೆ ಭಾವನಾತ್ಮಕವಾಗಿ ಮತದಾರರ ಸೆಳೆಯಲು ಮುಂದಾಗಿದ್ದಾರೆ.
ಗೆದ್ದರೆ ಕಾವೇರಿ ಸಮಸ್ಯೆ ನಿವಾರಿಸುವ ಭರವಸೆ ನೀಡುತ್ತಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ತಾನು ಸ್ಥಳೀಯ ವ್ಯಕ್ತಿ ಎಂಬ ಹಿನ್ನೆಲೆಯಲ್ಲಿ ಕಣಕ್ಕಿಳಿದಿದ್ದಾರೆ. ವೈಯಕ್ತಿಕ ವರ್ಚಸ್ಸು ಕಡಿಮೆ ಇದ್ದರೂ ಶಾಸಕರು, ವಿಧಾನ ಪರಿಷತ್ ಸದಸ್ಯರು ತಮ್ಮ ಬೆನ್ನೆಲುಬಾಗಿ ನಿಂತಿರುವುದು ಬಲ ತಂದಿದೆ. ಜಿಲ್ಲೆಯಲ್ಲಿ 7 ಮಂದಿ ಕಾಂಗ್ರೆಸ್ ಶಾಸಕರು, ಗ್ಯಾರಂಟಿ ಯೋಜನೆಗಳು ಹಾಗೂ ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ಚುನಾವಣೆ ಗೆದ್ದರೆ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ. ಏಳು ಶಾಸಕರ ಬೆಂಬಲದೊಂದಿಗೆ ಅಭಿವೃದ್ಧಿಗೆ ಸಹಕಾರ ಸಿಗಲಿದೆ ಎಂಬ ಹಿನ್ನೆಲೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಜಾತಿ ಲೆಕ್ಕಾಚಾರವೂ ಪ್ರಮುಖ ಪಾತ್ರ: ಪ್ರತೀ ಚುನಾವಣೆ ಯಲ್ಲಿಯೂ ಜಾತಿ ಲೆಕ್ಕಾಚಾರ ಪ್ರಮುಖ ವಿಷಯವಾಗಿ ಚರ್ಚೆಯಾಗುತ್ತಲೇ ಇರುತ್ತದೆ. ಮಂಡ್ಯ ಎಂದರೆ ಒಕ್ಕಲಿಗರ ಸಮುದಾಯ ಹೆಚ್ಚಿರುವ ಜಿಲ್ಲೆಯಾಗಿದೆ. ಮೈತ್ರಿ ಅಭ್ಯರ್ಥಿ ಒಕ್ಕಲಿಗ ಸಮುದಾಯದ ಮತಗಳು ಕೈ ಹಿಡಿಯಬ ಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಕಾಂಗ್ರೆಸ್‌ಗೆ ಅಹಿಂದ ಮತಗಳು ಬಲ ನೀಡಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಒಕ್ಕಲಿಗ ಮತದಾರರಿದ್ದರೆ, 9 ಲಕ್ಷಕ್ಕೂ ಹೆಚ್ಚು ಅಹಿಂದ ಮತದಾರರಿದ್ದಾರೆ. ಮೈತ್ರಿ ಪಕ್ಷ ಹಾಗೂ ಕಾಂಗ್ರೆಸ್ ಕೂಡ ಜಾತಿ ಲೆಕ್ಕಾಚಾರದಲ್ಲಿ ತೊಡಗಿದೆ. ಒಕ್ಕಲಿಗರ ಮತದಾರರು ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ನಂತರ ಕುರುಬ, ಲಿಂಗಾಯತ, ಮುಸ್ಲಿಂ ಸೇರಿದಂತೆ ಇತರೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಆಧಾರದ ಮೇಲೆಯೇ ಇಬ್ಬರೂ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
*ಎಚ್.ಶಿವರಾಜು