Advertisement
ಈ ರೀತಿ ಮಳೆಗಾಲದಲ್ಲಿ ಧುಮ್ಮಿಕ್ಕುವ ಜಲಧಾರೆಯೊಂದು ಮಳವಳ್ಳಿ ತಾಲೂಕಿನಲ್ಲಿದೆ. ಅದುವೇ ಕೊಂಡ ಜಲಪಾತ. ಮಳವಳ್ಳಿ ತಾಲೂಕಿನ ಹಲಗೂರು ಬಳಿ ಶಿಂಷಾನದಿ ಸೃಷ್ಟಿಸಿರುವ ಜಲಪಾತವೊಂದು ರಮಣೀಯವಾಗಿದೆ.
Related Articles
Advertisement
ಕಚ್ಚಾ ರಸ್ತೆ: ಇಂತಹದೊಂದು ಜಲಧಾರೆಯ ಸೌಂದರ್ಯ ನಿಜಕ್ಕೂ ರೋಮಾಂಚನ, ಗಗನಚುಕ್ಕಿ-ಭರಚುಕ್ಕಿಯಷ್ಟೇ ಪ್ರಕೃತಿ ವೈಭವ ಹೊಂದಿರುವ, ಅವುಗಳ ಚೆಲುವನ್ನೂ ನಾಚಿಸುವ ಈ ಜಲಪಾತ ಹೆಚ್ಚು ಜನರನ್ನು ಆಕರ್ಷಿಸದಿರುವುದು ನಿಜಕ್ಕೂ ದುರಂತ. ಕೇವಲ ಕಾಲು ಹಾದಿಯಂತಿರುವ ಕಚ್ಚಾರಸ್ತೆಯಲ್ಲಿ ಮೂರ್‍ನಾಲ್ಕು ಕಿ.ಮೀ. ಚಲಿಸಿ, ಅಲ್ಲಲ್ಲಿ ಕಣಿವೆಯಂತಾಗಿರುವ ರಸ್ತೆಯನ್ನು ದಾಟಿ, ನುಜ್ಜುಗಲ್ಲುಗಳ ಮೇಲೆ ನರ್ತಿಸುತ್ತಾ ಹೋಗುವಾಗ ಜಲಧಾರೆಯ ಭೋರ್ಗರೆತ ಕಿವಿಗೆ ಅಪ್ಪಳಿಸುತ್ತದೆ.
ದಾರಿಯೇ ಇಲ್ಲದ ದಾರಿಯಲ್ಲಿ ಗಿಡಗಂಟಿಗಳನ್ನು ಸರಿಸುತ್ತಾ ಮುನ್ನುಗ್ಗಿದರೆ ಒಮ್ಮೆಲೆ ಕೊಂಡ ಜಲಪಾತದ ವೈಭವ ಕಣ್ಣಿಗೆ ರಾಚುತ್ತದೆ.
ರೋಮಾಂಚಕ ಅನುಭವ: ನಿಂತು ಜಲಪಾತ ವೀಕ್ಷಿಸಲೂ ಅಲ್ಲಿ ಸ್ಥಳವಿಲ್ಲ. ಅತಿ ಕಡಿದಾದ ಸಣ್ಣ ಕಾಲು ದಾರಿಯಲ್ಲಿ ಜಲಪಾತದ ಕೆಳಕ್ಕೆ ಇಳಿದರೆ ಜಲಪಾತದ ವೈಭವ ಕಣ್ಮನ ತಣಿಸುತ್ತದೆ. ಕಲ್ಲುಗಳ ಮೇಲೆ ನಡೆದು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಎದುರಾಗುವ ಬಂಡೆಗಳನ್ನು ದಾಟಿದರೆ ಜಲಪಾತ ಮುಟ್ಟಲೂ ಬಹುದು. ಆದರೆ ಭಾರೀ ಇಳಿಮುಖವಾಗಿ ರುವ, ಕಾಲಿಟ್ಟರೆ ಜಾರುವ ಬಂಡೆಗಳನ್ನು ದಾಟುವುದು ರೋಮಾಂಚಕ ಅನುಭವ.
ಮೂಲ ಸೌಲಭ್ಯ ಕಲ್ಪಿಸಿ: ಹಲವಾರು ಕವಲುಗಳಾಗಿ ಸುಮಾರು ನೂರು ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಭೋರ್ಗರೆತ ನಮ್ಮೆಲ್ಲಾ ಆಯಾಸಗಳನ್ನು ಒಮ್ಮೆಲೆ ದೂರವಾಗಿಸುತ್ತದೆ. ಇಂತಹ ಜಲಪಾತ ವೀಕ್ಷಿಸಲು ಸಂಬಂಧಪಟ್ಟವರು ಅನುಕೂಲ ಮಾಡಿಕೊಡದಿರುವುದು ಬೇಸರವನ್ನೂ ತರಿಸುತ್ತದೆ.
ಗಿಡಗಂಟಿಗಳೇ ಪ್ರಧಾನವಾಗಿರುವ ಈ ಸ್ಥಳವನ್ನು ಸ್ವಚ್ಛಗೊಳಿಸಿ, ಭೂಮಿಯನ್ನು ಮಟ್ಟಮಾಡಿ, ರಸ್ತೆಅಭಿವೃದ್ದಿಪಡಿಸಿದರೆ ಈ ಸ್ಥಳ ಒಂದು ದಿನದ ಉಲ್ಲಾಸಕ್ಕೆ ಹೇಳಿ ಮಾಡಿಸಿದಂತಹ ಸ್ಥಳವಾಗುತ್ತದೆ.