ಮಂಡ್ಯ: ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ ಪದೇಪದೆ ನೀರು ಬಿಡುವಂತೆ ಆದೇಶ ಮಾಡುತ್ತಿರುವ ಸಮಿತಿ, ಪ್ರಾಧಿಕಾರದ ವಿರುದ್ಧ ನಡೆಯುತ್ತಿರುವ 72ನೇ ದಿನ ನಿರಂತರ ಧರಣಿ ಮುಂದುವರಿದಿದ್ದು, ಆಕ್ರೋಶ ವ್ಯಕ್ತವಾಯಿತು.
ನಗರದ ಸರ್‌ಎಂವಿ ಪ್ರತಿಮೆ ಎದುರು ನಿರಂತರ ಧರಣಿಯಲ್ಲಿ ಸಮಿತಿಯ ಮುಖಂಡರು ಭಾಗವಹಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮತ್ತೆ ನೀರು ಬಿಡಲು ಆದೇಶ ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾವೇರಿ ಹೋರಾಟಗಾರರು 19ರಂದು ನಡೆಯುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾ ಧಿಕಾರ ಸಭೆಯಲ್ಲಿ ಕರ್ನಾಟಕ ರಾಜ್ಯದ ಪರ ಆದೇಶ ಬರಲಿ ಎಂದು ಆಶಯ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷಿಸಿದೆ. ಸಂಕಷ್ಟ ಕಾಲದಲ್ಲಿ ಮತ್ತೆ ಮತ್ತೆ ನೆರೆ ರಾಜ್ಯಕ್ಕೆ ನೀರು ಬಿಡುವಂತೆ ಆದೇಶ ಹೊರ ಬೀಳುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಒಕ್ಕೂಟ ವ್ಯವಸ್ಥೆಯಲ್ಲಿ ಮಧ್ಯ ಪ್ರವೇಶಿಸ ಬೇಕಾದ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮುಂದುವರಿಸಿರುವುದು ಕನ್ನಡಿಗರಿಗೆ ಮಾಡುತ್ತಿ ರುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನದಿ ನೀರಿನ ವಿಚಾರದಲ್ಲಿ ನಿರಂತರ ಅನ್ಯಾಯಕ್ಕೊಳಗಾಗಿರುವ ಕರ್ನಾಟಕಕ್ಕೆ 19ರಂದು ನಡೆಯುವ ಪ್ರಾಧಿಕಾರದ ಸಭೆಯಲ್ಲಿ ನ್ಯಾಯ ದೊರಕಲಿದೆ ಎಂಬ ಆಶಾಭಾವನೆ ಇದೆ. ನ್ಯಾಯ ದೊರೆತರೆ ಮುಂದಿನ ಸಂಕಷ್ಟದ ಹೊರೆ ತಪ್ಪಲಿದೆ. ಇಲ್ಲವಾದರೆ ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ಮುಂದುವರಿಯಲಿದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ ಮಾತನಾಡಿ, ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಕಷ್ಟ ಕಾಲದಲ್ಲಿಯೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಬೆಳೆಗೆ ನೀರಿಲ್ಲ. ಜನ ಜಾನುವಾರುಗಳಿಗೆ ಕುಡಿಯಲು ನೀರು ಉಳಿಯಲಿ ಎಂದು ಹೋರಾಟ ಮಾಡುತ್ತಿದ್ದೇವೆ. ಆದರೆ ಮತ್ತೆ 23ರವರೆಗೆ ನೀರು ಹರಿಸಿ ಎಂದು ಶಿಫಾರಸು ಮಾಡಲಾಗಿದೆ. ಅಲ್ಲಿಯವರೆಗೂ ಚಳವಳಿ ಮುಂದುವರಿಯಲಿದೆ. ಆ ನಂತರದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಕರ್ನಾಟಕದ ಹಿತ ಕಡೆಗಣಿಸಿದರೆ ಕಾವೇರಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ಮಲ್ಲನಾಯಕನ ಕಟ್ಟೆ ಬೋರೇಗೌಡ, ರೈತ ಸಂಘದ ಇಂಡುವಾಳು ಚಂದ್ರಶೇಖರ್. ಮುದ್ದೇಗೌಡ, ಕೃಷ್ಣಪ್ರಕಾಶ್, ಕನ್ನಡ ಸೇನೆ ಮಂಜುನಾಥ್, ದಸಂಸ ಎಂ.ವಿ.ಕೃಷ್ಣ, ನಿವೃತ್ತ ಇಂಜಿನಿಯರಿಂಗ್ ಸಂಘದ ದೇವರಾಜು, ಫಯಾಜ್ ಸೇರಿದಂತೆ ಮತ್ತಿತರರಿದ್ದರು.