ಮಂಡ್ಯ: ಬಲವಂತವಾಗಿ ಮ್ಯಾನ್ ಹೋಲ್ ಗಿಳಿಸಿ ಮಲ ಸ್ವಚ್ಛಗೊಳಿಸಿದ್ದ ಪ್ರಕರಣದಲ್ಲಿ ಬಲಿಪಶುವಾಗಿದ್ದ ಪೌರಕಾರ್ಮಿಕ ನಾರಾಯಣ ಪುರಸಭೆ ಅಧಿಕಾರಿಗಳ ಕಿರುಕುಳ ತಾಳಲಾರದೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮದ್ದೂರಿನಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ಪೌರಕಾರ್ಮಿಕ ನಾರಾಯಣನನ್ನು ಮದ್ದೂರು ಪುರಸಭೆಯ ಮುಖ್ಯಾಧಿಕಾರಿ ಮುರುಗೇಶ್, ಆರೋಗ್ಯ ನಿರೀಕ್ಷಕ ಝಾಸಿಂಖಾನ್, ಪುರಸಭೆ ಅಧ್ಯಕ್ಷ ಸುರೇಶ್ ಕುಮಾರ್ ಬಲವಂತವಾಗಿ ಮ್ಯಾನ್ ಹೋಲ್‌ಗಿಳಿಸಿ ಬರಿಗೈಯ್ಯಲ್ಲಿ ಮಲ ಸ್ವಚ್ಛಗೊಳಿಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಪ್ರಕರಣ ಮಾದ್ಯಮಗಳಲ್ಲಿ ಸೋರಿಕೆಯಾಗಲು ಪುರಸಭೆಯ ಹೊರಗುತ್ತಿಗೆ ವಾಹನ ಚಾಲಕ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಕಾರಣ ಎಂದು ಶ್ರೀನಿವಾಸ್ ಅವರನ್ನು ಕೆಲಸದಿಂದ ಏಕಾಏಕಿ ಕೈತೆಗೆದು ಹಾಕಲಾಗಿತ್ತು. ಈ ಸಂಬಂಧ ಹೊರಗುತ್ತಿಗೆ ವಾಹನ ಚಾಲಕರ ಸಂಘಟನೆ ಪ್ರತಿಭಟನೆ ನಡೆಸಿ ಪ್ರಕರಣವನ್ನು ಪೌರಾಡಳಿತ ನಿರ್ದೇಶನಾಲಯ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಗಮನಕ್ಕೆ ತಂದಿತ್ತು.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಶ್ರೀಲಂಕಾದ ಉಪುಲ್ ತರಂಗ
ಇದರಿಂದ ಕೆರಳಿದ ಅಧಿಕಾರಿಗಳು ಖಾಯಂ ಪೌರಕಾರ್ಮಿಕ ನಾರಾಯಣನನ್ನು ಬೆದರಿಸಿ ತಾನೇ ಸ್ವಯಂ ಆಗಿ ಮ್ಯಾನ್‌ಹೋಲ್‌ಗೆ ಇಳಿದಿದ್ದಾಗಿ ಹೇಳಿಕೆ ನೀಡುವಂತೆ ಬೆದರಿಸಿದ್ದರು. ಅಧಿಕಾರಿಗಳ ಕಿರುಕುಳಕ್ಕೆ ಅಂಜಿದ ಪೌರಕಾರ್ಮಿಕ ನಾರಾಯಣ್ ತನ್ನ ಸಾವಿಗೆ ಮುಖ್ಯಾಧಿಕಾರಿ ಮುರುಗೇಶ್, ಆರೋಗ್ಯ ನಿರೀಕ್ಷಕ ಝಾಸಿಂಖಾನ್ ಹಾಗೂ ಇತರರು ಕಾರಣರೆಂದು ಪತ್ರ ಬರೆದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಮೃತ ದೇಹವನ್ನು ಮದ್ದೂರು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇಡಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ನೇತೃತ್ವದಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು.