ಮಂಡ್ಯ: ಅಲ್ಲಾಹು ಅಕºರ್ ಎಂದು ಕೂಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಮುಸ್ಕಾನ್ ಕುಟುಂಬ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ವಿದೇಶಕ್ಕೆ ತೆರಳಿದೆ
ನಗರದ ಪಿಇಎಸ್ ಕಾಲೇಜಿನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಅಲ್ಲಾಹು ಅಕ್ಬರ್ ಎಂದು ಕೂಗುವ ಮೂಲಕ ಮುಸ್ಕಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು. ಆದರೆ, ಆ ಕುಟುಂಬ ಮೆಕ್ಕಾಗೆ ಧಾರ್ಮಿಕ ಪ್ರವಾಸಕ್ಕಾಗಿ ತೆರಳಲು ಕಳೆದ ಏ.25ರಂದೇ ಸೌದಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಬಹುಮಾನ ನೀಡುವುದಾಗಿಯೂ ಘೋಷಣೆ: ಮುಸ್ಕಾನ್ ಕುಟುಂಬ ಸೌದಿ ಪ್ರವಾಸ ಕೈಗೊಂಡಿರುವುದರಿಂದ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ವಿಡಿಯೋ ವೈರಲ್ ಆದ ಬಳಿಕ ಆಕೆಯ ಮನೆಗೆ ವಿವಿಧ ರಾಜಕೀಯ ಗಣ್ಯರು, ವಿವಿಧ ಸಂಘಟನೆಗಳ ಮುಖಂಡರು ಭೇಟಿ ನೀಡಿ ಹಣ, ವಾಚ್, ಸ್ಮಾರ್ಟ್‌ಫೋನ್ ಸೇರಿದಂತೆ ವಿವಿಧ ರೀತಿಯ ಉಡುಗೊರೆ ನೀಡಿದ್ದರು. ಅಲ್ಲದೆ, ವಿದೇಶ ದಿಂದಲೂ ಫಂಡ್ ಬಂದಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಜತೆಗೆ ಆಲ್‌ಖೈದಾ ಸಂಘಟನೆಯ ಮುಖ್ಯಸ್ಥ ಆಕೆಯನ್ನು ಹಾಡಿ ಹೊಗಳಿದ್ದನು. ಅಲ್ಲದೆ, 5 ಲಕ್ಷ ರೂ. ಬಹುಮಾನ ನೀಡುವುದಾಗಿಯೂ ಘೋಷಿಸಿದ್ದನು. ಈತನ ವಿಡಿಯೋ ಭಾರೀ ವೈರಲ್ ಆಗಿತ್ತು. ಈ ವೇಳೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿತ್ತು.
ಇದನ್ನೂ ಓದಿ:ಪಾಂಡವಪುರ: ಹಸೆಮಣೆಯಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದ ನವವಧು
ಪರೀಕ್ಷೆಗೂ ಗೈರಾಗಿದ್ದ ಮುಸ್ಕಾನ್: ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಹಿಂದೂ ಸಂಘಟನೆಗಳ ಮುಖಂಡರು, ಆಲ್‌ಖೈದಾ ಸಂಘಟನೆಯು ಆಕೆಯನ್ನು ಹೊಗಳಿರುವುದರಿಂದ ಆಕೆಯ ವಿರುದ್ಧ ತನಿಖೆ ನಡೆಸಬೇಕು. ಆಕೆಯ ಮನೆಗೆ ಭೇಟಿ ನೀಡುವವರ ಬಗ್ಗೆಯೂ ಗಮನಹರಿಸಬೇಕು ಎಂದು ಆಗ್ರಹಿಸಿದ್ದರು.
ಅದರಂತೆ ಮುಸ್ಕಾನ್ ಕುಟುಂಬದ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಅಲ್ಲದೆ, ಪರೀಕ್ಷೆಗೂ ಹಾಜರಾಗದೆ ಗೈರು ಹಾಜರಾಗಿದ್ದರು. ಪರೀಕ್ಷೆಯ ಸಂದರ್ಭದಲ್ಲಿಯೇ ವಿದೇಶಕ್ಕೆ ಹೋಗಲು ವೀಸಾ, ಪಾಸ್‌ಪೋರ್ಟ್ ಪರಿಶೀಲನೆಗೆ ತೆರಳಿದ್ದರು ಎಂಬ ಆರೋಪಗಳೂ ಕೇಳಿ ಬಂದಿದ್ದವು. ಆಕೆಯ ವಿರುದ್ಧ ತನಿಖೆ ನಡೆಸುವಂತೆ ಪೊಲೀಸರಿಗೆ ಹಿಂದೂ ಸಂಘಟನೆಗಳ ಮುಖಂಡರು ದೂರು ನೀಡಿದ್ದರು.