Advertisement

ನಾನು ಕಳೆದುಕೊಂಡಿದ್ದನ್ನು ಮಂಡ್ಯ ಮತ್ತೆ ಕೊಟ್ಟಿತು

03:03 PM May 03, 2019 | pallavi |

ಮಂಡ್ಯ: ನಾನು ಕಳೆದುಕೊಂಡಿದ್ದೆಲ್ಲವನ್ನೂ ಮಂಡ್ಯ ನನಗೆ ಕೊಟ್ಟಿತು… ಹೀಗಂತ ಮಂಡ್ಯದ ಬಗ್ಗೆ ತುಂಬು ಅಭಿಮಾನದಿಂದ ಆಗಾಗ ನೆನೆಯುತ್ತಿದ್ದವರು ನಟರತ್ನಾಕರ ಮಾಸ್ಟರ್‌ ಹಿರಣ್ಣಯ್ಯ. ಮಂಡ್ಯದೊಂದಿಗೆ ಹಿರ ಣ್ಣಯ್ಯ ಅವರು ಅವಿನಾಭಾವ ಸಂಬಂಧವನ್ನು ಹೊಂದಿದ್ದರು.

Advertisement

ಅದು 1960ರ ದಶಕ. ಹಿರಣ್ಣಯ್ಯನವರ ತಂದೆ ನಿಧನರಾದ ಬಳಿಕ ಅವರ ಕಂಪನಿ ಸಾಕಷ್ಟು ನಷ್ಟ ಅನುಭವಿಸಿತು. ಇದು ಹಿರಣ್ಣಯ್ಯನವರನ್ನು ಆರ್ಥಿಕವಾಗಿ ಸಾಕಷ್ಟು ಸಂಕಷ್ಟಕ್ಕೆ ಗುರಿಪಡಿಸಿತ್ತು. ಆನಂತರ ಹಿರಣ್ಣಯ್ಯ ಮಿತ್ರ ಮಂಡಳಿಯೊಂದಿಗೆ ಮಂಡ್ಯಕ್ಕೆ ಆಗಮಿಸಿದರು. ಆಗ ಲಕ್ಷ್ಮೀಜನಾರ್ದನ ಕಲಾಮಂದಿರದ ಮಾಲೀಕ ಕೆ.ಜೆ.ಶ್ರೀಕಂಠು ಅವರು ಹಿರಣ್ಣಯ್ಯನವರ ನಾಟಕಗಳಿಗೆ ವೇದಿಕೆ ಕಲ್ಪಿಸಿಕೊಟ್ಟರು. ಆ ಸಮಯದಲ್ಲಿ ಎಂಟು ತಿಂಗಳ ಕಾಲ ಮಂಡ್ಯದಲ್ಲಿ ಠಿಕಾಣಿ ಹೂಡಿದ ಮಾಸ್ಟರ್‌ ಹಿರಣ್ಣಯ್ಯನವರು ದೇವದಾಸಿ, ಮಕ್ಮಲ್ ಟೋಪಿ, ನಡುಬೀದಿ ನಾರಾಯಣ, ಭ್ರಷ್ಟಾಚಾರ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಭಾರೀ ಜನಪ್ರಿಯತೆ ಗಳಿಸಿದರು.

ನಾಟಕ ಪ್ರದರ್ಶನ: ಅದೇ ಸಮಯದಲ್ಲಿ ಮಂಡ್ಯದ ನೆಹರು ನಗರದಲ್ಲಿದ್ದ ಮಂಗಯ್ಯ ಮಾನ್ಷನ್‌ನಲ್ಲಿ ಮಾಸ್ಟರ್‌ ಹಿರಣ್ಣಯ್ಯ ಉಳಿದುಕೊಂಡಿದ್ದರು. ಆ ವೇಳೆ ಕೆ.ಪ್ರಹ್ಲಾದರಾವ್‌, ಕೃಷ್ಣರಾವ್‌ (ಪಾಪುಳು), ಸೇವಾ ನರ್ಸಿಂಗ್‌ ಹೋಂನ ಡಾ.ಕೆ.ಎಸ್‌.ನಾರಾಯಣಸ್ವಾಮಿ ಅವರೊಂದಿಗೆ ನಂಟು ಬೆಳೆಯಿತು. ಆರ್ಥಿಕವಾಗಿ ಸಾಕಷ್ಟು ನಷ್ಟಕ್ಕೊಳಗಾಗಿದ್ದ ಮಾಸ್ಟರ್‌ ಹಿರಣ್ಣಯ್ಯನವರು ಕೆಲವೇ ತಿಂಗಳಲ್ಲಿ ಚೇತರಿಕೆ ಕಂಡುಕೊಂಡರು. ಆನಂತರ ಅವರು ಇಡೀ ನಾಡಿನಾದ್ಯಂತ ಸಂಚರಿಸಿ ಅನೇಕ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಜನಪ್ರಿಯತೆಯ ಉತ್ತುಂಗ ಶಿಖರಕ್ಕೇರಿದರು.

ಯಶಸ್ಸು ಕೊಟ್ಟಿತು: ಅವರಿಗೆ ಹೆಸರು, ಕೀರ್ತಿಯನ್ನು ತಂದುಕೊಟ್ಟ ಮಂಡ್ಯ ಜೊತೆಗಿನ ನಂಟನ್ನು ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದರು. 1970ರ ದಶಕದಲ್ಲಿ ಮತ್ತೆ ಮಂಡ್ಯಕ್ಕೆ ಆಗಮಿಸಿ ಲಂಚಾವತಾರ ನಾಟಕವನ್ನು ಪ್ರದರ್ಶಿಸಿ ಅದರಲ್ಲೂ ಯಶಸ್ಸು ಕಂಡರು. ಅಖೀಲ ಕರ್ನಾಟಕ ಬ್ರಾಹ್ಮಣ ಸಭಾದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಮಾಸ್ಟರ್‌ ಹಿರಣ್ಣಯ್ಯ ಅವರು ನೆಹರುನಗರದ ಶಂಕರಸೇವಾ ಪ್ರತಿಷ್ಠಾನದಿಂದ ನಡೆಯುತ್ತಿದ್ದ ಶಂಕರಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಪನ್ಯಾಸ ನೀಡುತ್ತಿದ್ದರು.

ಕೊನೆಯ ಭೇಟಿ: 2014ರಲ್ಲಿ ಸಾಹಿತಿ ಡಾ.ಪ್ರದೀಪ್‌ಕುಮಾರ್‌ ಹೆಬ್ರಿ ಬರೆದ ‘ಮಂಗಲದ ಮುಂಬೆಳಕು’ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಭೇಟಿ ನೀಡಿದ್ದ ಅವರು, ಮಂಡ್ಯಕ್ಕೆ ನೀಡಿದ ಕೊನೆಯ ಭೇಟಿಯಾಗಿತ್ತು. ಆ ವೇದಿಕೆಯಲ್ಲೇ ಲಂಚಾವತಾರ ನಾಟಕದ ಪ್ರದರ್ಶನ ನೀಡಿದ್ದರು. ಬಸವಣ್ಣನವರ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದ ಮಾಸ್ಟರ್‌ ಹಿರಣ್ಣಯ್ಯ ಆನಂತರ ವಯೊಧೀಸಹಜ ತೊಂದರೆಗಳಿಂದ ಮಂಡ್ಯಕ್ಕೆ ಬರುತ್ತಿರಲಿಲ್ಲ.

Advertisement

ಮಾಸ್ಟರ್‌ ಹಿರಣ್ಣಯ್ಯನವರನ್ನು ಮಂಡ್ಯಕ್ಕೆ ಕರೆತರಲು ಸಾಕಷ್ಟು ಸಾಂಸ್ಕೃತಿಕ, ಸಾಮಾಜಿಕ ಸಂಘಟನೆಗಳು ನಿರಂತರ ಆಹ್ವಾನ ನೀಡುತ್ತಿದ್ದವು. ಮಂಡ್ಯದೊಂದಿಗಿನ ಮಧುರ ಬಾಂಧವ್ಯವನ್ನು ಕಳೆದುಕೊಳ್ಳಲು ಬಯಸದೆ ಅವರ ಮನಸ್ಸು ಇಲ್ಲಿಗೆ ಬರಲು ಸದಾ ತುಡಿಯುತ್ತಿತ್ತು. ಆದರೆ, ಅವರ ದೇಹ ಅದಕ್ಕೆ ಸ್ಪಂದಿಸುತ್ತಿರಲಿಲ್ಲ. ಇದರಿಂದ ಅವರು ಮಾನಸಿಕವಾಗಿ ನೊಂದಿದ್ದನ್ನು ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದರು.

ಮಾಸ್ಟರ್‌ ಹಿರಣ್ಣಯ್ಯನವರು ಇಂದು ಕಣ್ಮರೆಯಾಗಿದ್ದರೂ ಅವರು ಮಂಡ್ಯದಲ್ಲಿ ಕಳೆದ ಸವಿ ನೆನಪುಗಳ ಚಿತ್ರಣ ಎಂದಿಗೂ ಕಲಾರಸಿಕರ ಹೃದಯದಲ್ಲಿ ಶಾಶ್ವತವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next