ಮಂಡ್ಯ: ವಾರದ ಹಿಂದಷ್ಟೇ ನೀರಿಲ್ಲದೆ ಜಿಲ್ಲೆಯ ಎಲ್ಲೆಡೆ ಹಾಹಾಕಾರ ಎದುರಾಗಿತ್ತು. ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಸಿಗದಂತಹ ಕಠೊರ ಸನ್ನಿವೇಶ ಸೃಷ್ಟಿಯಾಗಿತ್ತು. ವಾರ ಕಳೆಯುವುದರೊಳಗೆ ಪ್ರವಾಹದಂತೆ ನೀರು ಹರಿದುಬಂದಿದೆ. ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗಿದೆ. 1 ಲಕ್ಷ ಕ್ಯೂಸೆಕ್‌ಗೂ ನೀರನ್ನು ಜಲಾಶಯದಿಂದ ಹೊರಬಿಡುತ್ತಿದ್ದು, ನೀರು ಸಂಗ್ರಹಣೆಗೆ ನಾವು ಮಾಡಿಕೊಂಡಿರುವ ಪರ್ಯಾಯ ವ್ಯವಸ್ಥೆಗಳೇನು ಎಂಬ ಪ್ರಶ್ನೆ ಎದುರಾದಾಗ ಶೂನ್ಯ ಆವರಿಸುತ್ತಿದೆ.
Advertisement
ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣವಾಗಿ 80 ವರ್ಷಗಳಾಗಿವೆ. ಇನ್ನೂ ಮಂಡ್ಯ ಜಿಲ್ಲೆ ಸಮಗ್ರ ನೀರಾವರಿಗೆ ಒಳಪಟ್ಟಿಲ್ಲ. ಇಚ್ಛಾಶಕ್ತಿಯ ಕೊರತೆಯೂ ಇದಕ್ಕೆ ಕಾರಣ. ಕಳೆದ ವರ್ಷ ಕೇರಳ, ಕೊಡಗಿನಲ್ಲಿ ಕುಂಭದ್ರೋಣ ಮಳೆಯಾಗಿ ಅವಧಿಗೆ ಮುನ್ನವೇ ಕೆಆರ್‌ಎಸ್ ಭರ್ತಿಯಾಯಿತು. ನೂರಾರು ಟಿಎಂಸಿ ನೀರು ತಮಿಳುನಾಡಿಗೆ ವ್ಯರ್ಥವಾಗಿ ಹರಿಯಿತು. ಆ ಸಮಯದಲ್ಲಿ ನೀರನ್ನು ಸಂಗ್ರಹಣೆ ಮಾಡುವ ಮಾರ್ಗಗಳ ಬಗ್ಗೆ ಯಾರೂ ಆಲೋಚನೆಗಳನ್ನೇ ನಡೆಸಲಿಲ್ಲ.
Related Articles
Advertisement
ನಮ್ಮ ಪಾಲಿನ ನೀರನ್ನು ಉಳಿಸಿಕೊಂಡು ರೈತರ ಕೃಷಿ ಚಟುವಟಿಕೆಗೆ ನೀಡುವ, ಪ್ರವಾಹ ಸೃಷ್ಟಿಯಾದ ಸಂದರ್ಭದಲ್ಲಿ ಆ ನೀರನ್ನು ವಿವಿಧ ಮಾರ್ಗಗಳಲ್ಲಿ ಹಿಡಿದಿಟ್ಟು ಬಳಸುವ ವೈಜ್ಞಾನಿಕ ದೃಷ್ಟಿಕೋನ ಅಗತ್ಯ. ಇಲ್ಲದಿದ್ದರೆ, ಪ್ರವಾಹವಾದಾಗ ನೀರು ಹೊರರಾಜ್ಯಗಳ ಪಾಲಗುತ್ತಿದೆ.
ಜಿಲ್ಲೆಯಲ್ಲಿನ ಕೆರೆಗಳ ಪುನಶ್ಚೇತನ ಅಗತ್ಯಜಿಲ್ಲೆಯೊಳಗೆ ಪ್ರತಿ ನಾಲ್ಕೈದು ಕಿ.ಮೀ.ಗೆ ಒಂದರಂತೆ ಕೆರೆ ಸಿಗುತ್ತದೆ. ತಮಿಳುನಾಡಿಗೆ ವಾರ್ಷಿಕವಾಗಿ ಹರಿಸಬೇಕಾದ 274 ಟಿಎಂಸಿ ಅಡಿ ನೀರನ್ನು ಹರಿಸಿದ ಬಳಿಕವೂ ಉಳಿಯುವ ನೀರನ್ನು ಸಮರ್ಥವಾಗಿ ಸಂಗ್ರಹಿಸಿಡುತ್ತಿಲ್ಲ. ಜಿಲ್ಲೆಯಲ್ಲಿ ಹೆಸರಿಗಷ್ಟೇ 350ಕ್ಕೂ ಹೆಚ್ಚು ಕೆರೆಗಳಿವೆ. ಇದರಲ್ಲಿ ಬಹುತೇಕ ಕೆರೆಗಳು ಒತ್ತುವರಿ ಆಗಿವೆ. ಕೆಲವು ಕೆರೆಗಳು ಭರ್ತಿ ಭಾಗ್ಯ ಕಂಡು ದಶಕಗಳೇ ಕಳೆದಿವೆ. ಹಲವಾರು ಕೆರೆಗಳಲ್ಲಿ ಜೊಂಡು, ಮುಳ್ಳಿನ ಗಿಡಗಳು ಬೆಳೆದುಕೊಂಡಿವೆ. ಅನೇಕ ಕೆರೆಗಳು ನೀರಿಲ್ಲದೆ ಬರಡಾಗಿ ನಿಂತಿವೆ. ಈ ಕೆರೆಗಳನ್ನು ಪುನಶ್ಚೇತನಗೊಳಿಸಿ ಪೈಪ್‌ಲೈನ್ ಮೂಲಕ ನೀರು ತುಂಬಿಸಿದರೆ ಗ್ರಾಮೀಣ ಜನರ ಬದುಕು ಹಸನಾಗುತ್ತದೆ. ಪಾತಾಳಕ್ಕಿಳಿದಿರುವ ಅಂತರ್ಜಲ ಪುನಶ್ಚೇತನವಾಗುತ್ತದೆ. ಮಳೆಗಾಲಕ್ಕೂ ಮುನ್ನವೇ ನೀರು ಹರಿಯುವ ಪ್ರದೇಶಗಳನ್ನು ಗುರುತಿಸಿ ಅಲ್ಲಲ್ಲೇ ನೀರು ಸಂಗ್ರಹಣೆ ಮಾಡುವ ಯೋಜನೆಗಳು ಅನುಷ್ಠಾನಗೊಳ್ಳಬೇಕು. ಒಂದು ಕೆರೆ ಭರ್ತಿಯಾದ ಕೂಡಲೇ ಮತ್ತೂಂದು ಕೆರೆಗೆ ನೀರು ಹರಿಯುವಂತೆ ವ್ಯವಸ್ಥೆ ಮಾಡುವುದರಿಂದ ಪ್ರವಾಹದ ವೇಳೆ ಸಂಭವಿಸಬಹುದಾದ ಬೆಳೆ ಹಾನಿಯನ್ನು ತಡೆಯಬಹುದು.