Advertisement

Mandya: ಟೊಮೆಟೋ ರಕ್ಷಣೆಗಿಳಿದ ರೈತರು!

10:46 PM Jul 01, 2023 | Team Udayavani |

ಬೆಂಗಳೂರು: ಬಾಂಗ್ಲಾದೇಶ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಿಗೆ ಟೊಮೆಟೋ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದು, ಬೆಲೆಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಈಗ ಟೊಮೆಟೋ ಬೆಳೆಗಾರರು ರಾತ್ರಿ ವೇಳೆ ತಮ್ಮ ಬೆಳೆಯನ್ನು ಕಾಯುವಂತಾಗಿದೆ!

Advertisement

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕೆಲವೆಡೆ ರೈತರು ನಿದ್ದೆ ಬಿಟ್ಟು ಟೊಮೆಟೋ ಬೆಳೆಯನ್ನು ಕಾಯುತ್ತಿದ್ದಾರೆ. ರಸ್ತೆ ಬದಿಯಲ್ಲಿರುವ ಹೊಲಗಳಲ್ಲಿ ಕಳ್ಳಕಾಕರು ಟೊಮೆಟೋ ಕದಿಯುವ ಸಾಧ್ಯತೆಯಿರುವ ಕಾರಣ ಗುಡಿಸಲು ಹಾಕಿಕೊಂಡು ಬೆಳೆ ರಕ್ಷಣೆಯಲ್ಲಿ ತೊಡಗಿದ್ದಾರೆ. ಕೆಲವರಂತೂ ಕೂಲಿ ಕೊಟ್ಟು ಬೆಳೆ ರಕ್ಷಣೆ ಮಾಡುತ್ತಿದ್ದಾರೆ.
ಈ ಮಧ್ಯೆ ಟೊಮೆಟೋ ಬೆಲೆ ಏರಿಕೆಯಿಂದ ಗ್ರಾಹಕರ ಮಾತ್ರವಲ್ಲದೆ, ಮಾರಾಟಗಾರರಿಗೂ ಆರ್ಥಿಕ ನಷ್ಟ ಉಂಟು ಮಾಡುತ್ತಿದೆ.

ಬೆಲೆ ದಿನೇದಿನೆ ಏರುತ್ತಿರುವುದರಿಂದ ಅದನ್ನು ಖರೀದಿಸಿ ಸಂಗ್ರಹಿಸಿಡುವುದು ಸವಾಲಿನ ಕೆಲಸ ವಾಗಿದೆ. ಗುಣಮಟ್ಟದಲ್ಲಿ ಕಡಿಮೆ ಇರುವ ಟೊಮೆಟೋ ಒಂದೆರಡು ದಿನಗಳಲ್ಲಿ ಹಣ್ಣಾಗಿ ಕೊಳೆತು ಹೋಗುತ್ತವೆ. ಮಾರಾಟವಾಗದೆ ಹೋದರೆ ಆರ್ಥಿಕ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಕಲಾಸಿಪಾಳ್ಯದ ರಖಂ ವ್ಯಾಪಾರಿ ರವಿರಾಜ್‌ ಹೇಳುತ್ತಾರೆ. ಈರುಳ್ಳಿ ರೀತಿಯಲ್ಲಿ ಟೊಮೆಟೋವನ್ನು ಬಹಳ ದಿನ ಇಟ್ಟುಕೊಳ್ಳಲು ಆಗುವುದಿಲ್ಲ. ಹಾಗಾಗಿ ಅದನ್ನು ಖರೀದಿಸಲೂ ಭಯವಾಗುತ್ತಿದೆ ಎನ್ನುತ್ತಾರೆ.

ಶನಿವಾರ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ 24 ಕೆ.ಜಿ. ಬಾಕ್ಸ್‌ನ ಟೊಮೆಟೋ 2,600 ರೂ.ಗೆ, ಕೋಲಾರ ಎಪಿಎಂಸಿಯಲ್ಲಿ 14 ಕೆ.ಜಿ. ಬಾಕ್ಸ್‌ ಟೊಮೆಟೋ 1,100- 1,200 ರೂ.ವರೆಗೂ ಖರೀದಿ ಆಯಿತು ಎಂದು ತಿಳಿದು ಬಂದಿದೆ.

ಕಲಾಸಿಪಾಳ್ಯಲ್ಲಿ ಈ ಹಿಂದೆ ರಖಂ ಆಗಿ ನಿತ್ಯ 14 ಕೆ.ಜಿ.ಯ 30 ಬಾಕ್ಸ್‌ ಖರೀದಿಸುತ್ತಿದ್ದೆ. ಈಗ ಕೇವಲ 6 ಬಾಕ್ಸ್‌ ಖರೀದಿಸುತ್ತಿದ್ದೇನೆ ಎಂದು ಪೀಣ್ಯದ ತರಕಾರಿ ವ್ಯಾಪಾರಿ ಜಗದೀಶ್‌ ಹೇಳುತ್ತಾರೆ.

Advertisement

ಈ ಹಿಂದೆ 2 ಸಾವಿರ ರೂ. ನೀಡಿ 10 ಬಾಕ್ಸ್‌ ಟೊಮೆಟೋ ಖರೀದಿಸುತ್ತಿದ್ದೆ. ಈಗ 16 ಸಾವಿರ ರೂ. ನೀಡಿ 6 ಬಾಕ್ಸ್‌ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಟೊಮ್ಯಾಟೊ ಬೇಗ ಕೊಳೆತು ಹೋಗುವುದರಿಂದ ಲಾಭವನ್ನೆಲ್ಲ ನಷ್ಟಕ್ಕೆ ಸರಿಪಡಿಸಬೇಕಾದ ಸನ್ನಿವೇಶ ಇದೆ ಎನ್ನುತ್ತಾರೆ.

ನಿಯಂತ್ರಣಕ್ಕೆ ಬರಬಹುದು
ಆಷಾಢ ಮಾಸ ಆರಂಭವಾಗಿದ್ದು, ಶುಭ ಕಾರ್ಯಕ್ರಮಗಳು ಕಡಿಮೆ ಆಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ತರಕಾರಿ ಮತ್ತಿತರ ಆಹಾರ ಪದಾರ್ಥಗಳ ಬೆಲೆ ಇಳಿಕೆ ಆಗಬಹುದು ಎಂದು ಕೆ.ಆರ್‌.ಮಾರುಕಟ್ಟೆಯ ಮುರುಗನ್‌ ಹೇಳುತ್ತಾರೆ.

ಬೆಳೆ ಹಾನಿಯಿಂದ ಈಗ ಬೇಡಿಕೆಯಿರುವಷ್ಟು ಟೊಮೆಟೋ ಮಾರು ಕಟ್ಟೆಗೆ ಪೂರೈಕೆ ಆಗುತ್ತಿಲ್ಲ. ಉತ್ತಮ ಗುಣಮಟ್ಟದ ಟೊಮೆಟೋ ಬಾಂಗ್ಲಾ ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ರಫ್ತಾಗುತ್ತಿದೆ. ಹೊಸ ಬೆಳೆ ಬರುವವರೆಗೂ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇದೆ.
– ಪುಟ್ಟರಾಜು, ವರ್ತಕರು, ಕೋಲಾರ

ತಳ್ಳುಗಾಡಿ ವ್ಯಾಪಾರಕ್ಕೆೆ ಹೆದರಿಕೆ
ತಳ್ಳುಗಾಡಿಯಲ್ಲಿ ಟೊಮೆಟೋ ಮಾರಾಟ ಮಾಡುವುದಕ್ಕೆ ಹೆದರಿಕೆ ಆಗುತ್ತಿದೆ. ಚಿಲ್ಲರೆ ಮಾರಾಟದಲ್ಲಿ ಪ್ರತಿ ಕೆ.ಜಿಗೆ 110-120 ರೂ.ಗೆ ಮಾರ‌ಬೇಕಾಗುತ್ತಿದೆ. ಬಡವರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತಳ್ಳುಗಾಡಿಯಲ್ಲೇ ಟೊಮೆಟೋ ಖರೀದಿಸುತ್ತಾರೆ. ಆದರೆ ಈಗ ಬೆಲೆ ನೂರರ ಗಡಿ ದಾಟಿರುವ ಹಿನ್ನೆಲೆಯಲ್ಲಿ ಅವರೂ ಖರೀದಿಗೆ ಅಂಜುತ್ತಾರೆ. ಹೀಗಾಗಿ ಕಳೆದ ಒಂದು ವಾರದಿಂದ ವ್ಯಾಪಾರದಲ್ಲಿ 7-8 ಸಾ.ರೂ. ನಷ್ಟ ಮಾಡಿಕೊಂಡಿದ್ದೇನೆ ಎಂದು ಮಾಗಡಿ ರಸ್ತೆಯ ತಳ್ಳುಗಾಡಿ ವ್ಯಾಪಾರಿ ಸೆಂಥಿಲ್‌ ಹೇಳುತ್ತಾರೆ.

 ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next