ಮಂಡ್ಯ: ‘ಒಂದೇ ಸೂರಿನಡಿ ಹಲವು ಸೇವೆ’ ಉದ್ದೇಶದೊಂದಿಗೆ ಇಡಿಸಿಎಸ್ ನಿರ್ದೇಶನಾಲಯ, ಇ-ಆಡಳಿತ ಇಲಾಖೆ, ಜಿಲ್ಲಾಡಳಿತ, ನಗರಸಭೆ ವತಿಯಿಂದ ತೆರೆದಿರುವ ಕರ್ನಾಟಕ ಒನ್ ಕೇಂದ್ರಕ್ಕೆ ನಗರದಲ್ಲಿ ಬುಧವಾರ ಚಾಲನೆ ನೀಡಲಾಯಿತು.
ಇಲ್ಲಿನ ಮಹಾವೀರ ವೃತ್ತದಲ್ಲಿರುವ ನಗರಸಭೆ ವಾಣಿಜ್ಯ ಮಳಿಗೆಯಲ್ಲಿ ಕೇಂದ್ರವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಮಂಜುಶ್ರೀ ಮಾತನಾಡಿ, ಬೆಂಗಳೂರು ಒನ್ ಮಾದರಿಯಲ್ಲಿಯೇ ಕರ್ನಾಟಕ ಒನ್ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ತೆರೆಯಲಾಗಿದೆ. ಆರಂಭದಲ್ಲಿ ಎರಡು ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಲ್ಲಿ ಒಂದು ಕೇಂದ್ರ ಆರಂಭಕ್ಕೆ ಅನುಮೋದನೆ ಹಾಗೂ ಹಣಕಾಸಿನ ನೆರವು ದೊರಕಿದೆ. ಒಂದೇ ಕೇಂದ್ರದಲ್ಲಿ ಸಾರ್ವಜನಿಕರಿಗೆ 59 ಸೇವೆಗಳು ಲಭ್ಯವಾಗಲಿವೆ ಎಂದು ಹೇಳಿದರು.
ಗುರುತಿನ ಚೀಟಿ: ಕೇಂದ್ರದಲ್ಲಿ ಪ್ರಸ್ತುತ 5 ಕೌಂಟರ್‌ಗಳಿದ್ದು, ಆಧಾರ್ ಕಾರ್ಡ್ ಮತ್ತು ಹೆಲ್ತ್ ಕಾರ್ಡ್ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಕೌಂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಹೊರಗುತ್ತಿಗೆ ಆಧಾರದ ಮೇಲೆ ಕೇಂದ್ರಕ್ಕೆ ಸಿಬ್ಬಂದಿ ನೇಮಿಸಲಾಗಿದೆ. ನಗರಸಭಾ ಸದಸ್ಯರಾದ ಅರುಣ್‌ಕುಮಾರ್, ನಾಗೇಶ್, ರವಿ, ರಾಮಲಿಂಗಯ್ಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಕೆಎಂಎಎಸ್ ಯೋಜನಾ ನಿರ್ದೇಶಕ ಟಿ.ಎನ್. ನರಸಿಂಹಮೂರ್ತಿ, ನಗರಸಭೆ ಪೌರಾಯುಕ್ತ ಎಸ್.ಲೋಕೇಶ್ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಆಟೋ ಚಾಲಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
ಯಾವಾಗ್ಯಾವಾಗ ರಜೆ: ರ್ನಾಟಕ ಒನ್ ಕೇಂದ್ರಕ್ಕೆ ಗಾಂಧಿ ಜಯಂತಿ, ಕಾರ್ಮಿಕ ದಿನ, ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಮತ್ತು ಚುನಾವಣೆಗೆ ಮತ ಚಲಾಯಿಸುವ ದಿನ ಮಾತ್ರ ರಜೆ ಇರುತ್ತದೆ. ಉಳಿದಂತೆ ವರ್ಷದ ಎಲ್ಲ ದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 7ರವರೆಗೆ ಕಾರ್ಯನಿರ್ವಹಿಸಲಿದೆ. ಕೆಲವೊಂದು ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸೇವೆಗೆ ಶುಲ್ಕ ಪಾವತಿಸುವ ಅಗತ್ಯವಿಲ್ಲ.
ಎಲ್ಇಡಿ ಬಲ್ಬ್ ಮಾರಾಟ: ಆರ್‌ಸಿ ಮತ್ತು ಡಿಎಲ್ ಎಕ್ಸ್‌ಟ್ರಾಕ್ಟ್ ವಿತರಣೆ, ಇ-ಆಧಾರ್ ಮುದ್ರಿಸುವುದು, ಆಧಾರ್ ನೋಂದಣಿ ಮತ್ತು ವಿವರ ಬದಲಾವಣೆಗೆ ಅರ್ಜಿ ಸಲ್ಲಿಕೆ, ವಿವಿಧ ಇಲಾಖೆಗಳ ಅರ್ಜಿ ವಿತರಣೆ, ಪಡಿತರ ಚೀಟಿಗಾಗಿ ಅರ್ಜಿ ಮತ್ತು ಆಧಾರ್ ಹಾಗೂ ಮತದಾರರ ಚೀಟಿಯ ವಿವರ ಜೋಡಿಸಲು, ಕುಟುಂಬದವರ ವಿವರ ಸಲ್ಲಿಸಲು, ಪಡಿತರ ಆದ್ಯತೆ ಪಟ್ಟಿಯಿಂದ ಕೈಬಿಡಲು ನೋಂದಣಿ ಮಾಡಿಸಬಹುದು. ಹೊಸಬೆಳಕು ಯೋಜನೆಯಡಿ ಎಲ್ಇಡಿ ಬಲ್ಬ್ ಮಾರಾಟ ನಡೆಯಲಿದೆ.
ಕಂದಾಯ ಇಲಾಖೆ ಸೇವೆಗಳೂ ಲಭ್ಯ: ಕಂದಾಯ ಇಲಾಖೆಗೆ ಸೇರಿದ ಜನಸಂಖ್ಯೆ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಸತಿ ಮತ್ತು ಆದಾಯ, ಗೇಣಿರಹಿತ, ವಿಧವಾ, ಜೀವಂತ, ಕೃಷಿ ಕುಟುಂಬದ ಸದಸ್ಯ, ಮರುವಿವಾಹ ರಾಹಿತ್ಯ, ಭೂಮಿ ರಾಹಿತ್ಯ, ಬದುಕಿರುವ ಕುಟುಂಬ ಸದಸ್ಯ, ನಿರುದ್ಯೋಗ, ಸರ್ಕಾರಿ ಹುದ್ದೆಯಲ್ಲಿರುವುದಕ್ಕೆ, ಸಣ್ಣ/ಅತಿಸಣ್ಣ ಕೃಷಿಕ ಪ್ರಮಾಣ ಪತ್ರ, ಕೃಷಿ ಕಾರ್ಮಿಕ, ಕೆನೆಪದರಕ್ಕೆ ಸೇರಿರುವುದಕ್ಕೆ, ಭೂ ಹಿಡುವಳಿ, ದಿವಾಳಿತನ, ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ವಾಸಿಸುತ್ತಿರುವ ಬಗ್ಗೆ, ಅಲ್ಪಸಂಖ್ಯಾತ, ವಂಶವೃಕ್ಷ, ವಾಸಸ್ಥಳ, ಉದ್ಯೋಗಕ್ಕಾಗಿ ಆದಾಯ ಮತ್ತು ಅನುಕಂಪದ ಆಧಾರದ ನೇಮಕಾತಿಗೆ ಆದಾಯ ಪ್ರಮಾಣ ಪತ್ರವನ್ನು ಪಡೆಯಬಹುದು. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಗುರುತಿನ ಚೀಟಿ ಕೊಡಲಾಗುವುದು.
ಬಿಲ್ಗಳೂ ಪಾವತಿಸಬಹುದು: ಇನ್ನು ಖಾಸಗಿ ಸೇವೆಗಳಾದ ವೋಡಾಪೋನ್ ಮತ್ತು ಐಡಿಯಾ, ಟಾಟಾ ಟೆಲ್ ಸೇವೆಗಳ ಮೊಬೈಲ್ ಬಿಲ್ ಪಾವತಿ, ಸರ್ಕಾರಿ ಉದ್ಯೋಗದ ಮಾಹಿತಿಗೆ ನೋಂದಣಿ ಹಾಗೂ ಮನೆ, ಕಟ್ಟಡ ಬಾಡಿಗೆ ಕರಾರು ಪತ್ರ ತಯಾರಿಸಲು ಸಹಾಯ ಮಾಡಲಾಗುತ್ತದೆ.