ಬೆಂಗಳೂರು: ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಡಾ.ಸಿದ್ದರಾಮಯ್ಯ ಅವರು ಗುರುವಾರ ಪಕ್ಷ ಸೇರ್ಪಡೆಯಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಬಿಜೆಪಿ ಘೋಷಿಸಿದೆ.
ಈ ಹಿಂದೆ ಅಂದರೆ 1967ರಲ್ಲಿ ಶ್ರೀರಂಗಪಟ್ಟಣ ಹಾಗೂ 1983ರಲ್ಲಿ ಮಂಡ್ಯ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ದೊಡ್ಡಬೋರೇಗೌಡರ ಪುತ್ರರಾದ ಸಿದ್ದರಾಮಯ್ಯ ಗುರುವಾರ ಬಿಜೆಪಿ ಸೇರಿದರು.
ಉಪಮುಖ್ಯಮಂತ್ರಿಯೂ ಆದ ಮಂಡ್ಯ ಲೋಕಸಭಾ ಉಪಚುನಾವಣೆ ಉಸ್ತುವಾರಿಗಳಲ್ಲಿ ಪ್ರಮುಖರಾದ ಆರ್.ಅಶೋಕ್ ಅವರು ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಪಕ್ಷ ಸೇರ್ಪಡೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಅಶ್ವತ್ಥ ನಾರಾಯಣ ಅವರ ಹೆಸರಿದ್ದರೂ ಅಂತಿಮವಾಗಿ ಡಾ.ಸಿದ್ದರಾಮಯ್ಯ ಅವರು ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರೊಂದಿಗೆ ಸಮಾಲೋಚಿಸಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಶ್ವತ್ಥ ನಾರಾಯಣ ಅವರು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಬೇಸರಪಟ್ಟುಕೊಳ್ಳುವುದಿಲ್ಲ. ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಮೈತ್ರಿ ಪಕ್ಷಗಳ ಒಡಕಿನ ಲಾಭ ಪಡೆದು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಹೇಳಿದರು.
ಡಾ. ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸೇವೆಯಿಂದ ಆಕರ್ಷಿತನಾಗಿ ಪಕ್ಷದಲ್ಲಿ ಗುರುತಿಸಿಕೊಳ್ಳುವ ಆಸೆಯಿತ್ತು. ಸರ್ಕಾರಿ ಸೇವೆಗೆ ಸೇರುವ ಮುನ್ನ ಎಬಿವಿಪಿಯಲ್ಲಿದ್ದೆ. ಎಬಿವಿಪಿ ಸಂಘಟನಾ ಕಾರ್ಯದರ್ಶಿಯಾದ ದತ್ತಾತ್ರೇಯ ಹೊಸಬಾಳೆ ಅವರೊಂದಿಗೂ ಕೆಲಸ ಮಾಡಿದ್ದೆ. ಇದೀಗ ನಿವೃತ್ತಿ ನಂತರ ಪಕ್ಷ ಸೇರಿದ್ದೇನೆ ಎಂದು ತಿಳಿಸಿದರು.
ಸರ್ಕಾರ ರಚಿಸುತ್ತೇವೆ: ಅಶೋಕ್
ಒಂದೆರಡು ತಿಂಗಳಲ್ಲಿ ರಾಜ್ಯದಲ್ಲಿ ಸರ್ಕಾರ ರಚಿಸಲಿದ್ದೇವೆ. ಹಾಗಾಗಿ ತಾವು, ಶ್ರೀರಾಮುಲು ಸೇರಿದಂತೆ ಯಾವುದೇ ಶಾಸಕರು ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ ಎಂಬುದಾಗಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.
ಸರ್ಕಾರ ರಚನೆ ಗುರಿಯೋ? ಕನಸೋ? ಒಟ್ಟಿನಲ್ಲಿ ನಮ್ಮ ಸರ್ಕಾರ ರಚನೆಯಾಗುವುದು ಖಚಿತ. ನಮಗೂ ಆಸೆ ಇದೆ. ನಾವು ಸನ್ಯಾಸಿಗಳಲ್ಲ. ಯಾವುದೇ ಆಪರೇಷನ್ ಇಲ್ಲಿಯವರೆಗೆ ಮಾಡಿಲ್ಲ. ಲೋಕಸಭಾ ಚುನಾವಣೆಯೊಳಗೆ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಹುಕಾಲಕ್ಕೆ ಮೊದಲು ಸೇರ್ಪಡೆ
ಗುರುವಾರ ಬೆಳಗ್ಗೆ 11.30ಕ್ಕೆ ಪಕ್ಷ ಸೇರ್ಪಡೆ ಕಾರ್ಯಕ್ರಮ ನಿಗದಿಯಾಗಿದ್ದರೂ ಆರ್.ಅಶೋಕ್ ಸೇರಿದಂತೆ ಇತರೆ ನಾಯಕರು ಸಕಾಲಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ಮಧ್ಯಾಹ್ನ 1.30ರಿಂದ 3ರವರೆಗೆ ರಾಹುಕಾಲವಿದ್ದ ಕಾರಣ ಡಾ.ಸಿದ್ದರಾಮಯ್ಯ ಅವರು ರಾಹುಕಾಲಕ್ಕೂ ಮೊದಲೇ ಪ್ರಾಥಮಿಕ ಸದಸ್ಯತ್ವದ ಅರ್ಜಿ ಭರ್ತಿ ಮಾಡಿ ಪಕ್ಷ ಸೇರ್ಪಡೆಯಾದರು.