ಮಂಡ್ಯ: ಒಣಗುತ್ತಿರುವ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ನೀರಿಗಾಗಿ ತಿಂಗಳಿಂದ ಮೊರೆ ಇಡುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಗುಮ್ಮ ತೋರಿಸುತ್ತಿದೆ. ನೀರು ಹರಿಸುವುದಕ್ಕೆ ಪ್ರಯತ್ನ ಮಾಡದ ಜಿಲ್ಲಾಧಿಕಾರಿಗಳು ನಿಷ್ಕ್ರಿಯತೆ ಪ್ರದರ್ಶಿಸುತ್ತಿದ್ದಾರೆ. ಜಿಲ್ಲೆಯ ಅನ್ನದಾತರ ಸಂಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದ ಜನಪ್ರತಿನಿಧಿಗಳು ರೆಸಾರ್ಟ್ ಸೇರಿಕೊಂಡಿದ್ದಾರೆ. ಈ ರಾಜಕೀಯ ದೊಂಬರಾಟದ ನಡುವೆ ರೈತರು ಪ್ರಾಣ ಸಂಕಟ ಅನುಭವಿಸುತ್ತಿದ್ದಾರೆ.
ಜಿಲ್ಲೆಯ ಸುಮಾರು 70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 1500 ಕೋಟಿ ರೂ. ಮೌಲ್ಯದ ಕಬ್ಬು ಬೆಳೆ ಇದೆ. ಮಳೆ ಬೀಳದಿರುವ ಕಾರಣ ಕಬ್ಬು ದಿನೇ ದಿನೇ ಬೆಂಡಾಗುತ್ತಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವಷ್ಟರಲ್ಲಿ ಮಳೆ ಮಾಯವಾಗಿದೆ. ಬೆಳೆ ನಷ್ಟಕ್ಕೊಳಗಾಗುವ ಭೀತಿ ಎಲ್ಲರನ್ನೂ ಆವರಿಸಿದೆ.
ಪೂರ್ವ ಮುಂಗಾರು ಬಾರದೆ ರೈತರು ನಿರಾಶರಾಗುವಂತೆ ಮಾಡಿದರೆ, ಮುಂಗಾರು ಮಳೆಯೂ ರೈತರ ನಿರೀಕ್ಷೆಯನ್ನು ಹುಸಿಗೊಳಿಸಿ ದಿಕ್ಕೆಡುವಂತೆ ಮಾಡಿದೆ. ಅಣೆಕಟ್ಟೆಯಲ್ಲಿರುವ ನೀರನ್ನು ಬಳಸಿಕೊಂಡು ಬೆಳೆ ರಕ್ಷಣೆ ಮಾಡಿಕೊಳ್ಳುವ ಹೋರಾಟಕ್ಕಿಳಿದರೆ ರಾಜ್ಯಸರ್ಕಾರ ಮತ್ತು ಜಿಲ್ಲಾಡಳಿತ ನೀರು ನಿರ್ವಹಣಾ ಪ್ರಾಧಿಕಾರದ ಗುಮ್ಮ ತೋರಿಸಿ ರೈತರನ್ನು ಹೆದರಿಸುತ್ತಿದೆ. ನೀರು ಪಡೆಯಲು ಇರುವ ದಾರಿಗಳನ್ನೇ ಕಾಣದೆ ಅನ್ನದಾತರು ದಿಕ್ಕುತೋಚದಂತಾಗಿದ್ದಾರೆ.
ಬಹುತೇಕ ಒಣಗಿರುವ ಬೆಳೆ:ಸದ್ಯ ಬೆಳೆದು ನಿಂತಿರುವ ಬೆಳೆ ಶೇ.90ರಷ್ಟು ಬೆಳೆ ನಾಶವಾಗಿದೆ. ಕಬ್ಬು ಬೆಳೆ ಒಣಗಿ ಉರುವಲಾಗುವುದೊಂದೇ ಬಾಕಿ ಉಳಿದಿದೆ. 13 ತಿಂಗಳು ಕಷ್ಟಪಟ್ಟು ಬೆಳೆದ ಬೆಳೆ ಉಳಿಸಿಕೊಳ್ಳಲಾಗದೆ ರೈತರು ಗೋಳಿಡುತ್ತಿದ್ದಾರೆ. ಮುಂದಿನ ಜೀವನದ ಗತಿ ಏನು ಎಂದು ಚಿಂತಾಕ್ರಾಂತನಾಗಿರುವ ರೈತನಿಗೆ ಸಮಾಧಾನ ಹೇಳುವ, ಅಣೆಕಟ್ಟೆಯಲ್ಲಿರುವ ನೀರನ್ನು ಹರಿಸಿ ಕಣ್ಣೀರು ಒರೆಸುವ ಮಾನವೀಯತೆ ಯಾರಲ್ಲೂ ಕಾಣಿಸುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಜಿಲ್ಲೆಯ ವಿವಿಧೆಡೆ ರೈತರು ಸಾಲ ಬಾಧೆಯಿಂದ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಬೆಳೆ ನಷ್ಟವಾದರೆ ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ನಿಧಾನಗತಿಯಲ್ಲಿ ಸೃಷ್ಠಿಯಾಗುತ್ತಿದೆ. ರೈತರು ಸಾವಿಗೆ ಶರಣಾದ ಸಮಯದಲ್ಲಿ ಕುಟುಂಬಕ್ಕೆ 5 ಲಕ್ಷ ರೂ. ಹಣ ಕೊಟ್ಟು ಕೈ ತೊಳೆದುಕೊಳ್ಳುವುದಕ್ಕಷ್ಟೇ ರಾಜ್ಯಸರ್ಕಾರ ಮತ್ತು ಜಿಲ್ಲಾಡಳಿತ ಸೀಮಿತವಾಗಿದೆಯೇ ವಿನಃ ಬೆಳೆಗಳನ್ನು ರಕ್ಷಣೆ ಮಾಡಿ ರೈತರ ಬದುಕನ್ನು ಕಟ್ಟಿಕೊಡುವುದಕ್ಕೆ ಮಾತ್ರ ಮುಂದಾಗುತ್ತಿಲ್ಲ.
ಐದು ದಿನದಲ್ಲಿ 6 ಅಡಿ ಏರಿಕೆ: ಕೃಷ್ಣರಾಜಸಾಗರಕ್ಕೆ ಆರೇಳು ದಿನಗಳಿಂದ ಸಣ್ಣ ಪ್ರಮಾಣದಲ್ಲಿ ಒಳಹರಿವು ಹೆಚ್ಚಿದೆ. ನೀರಿನ ಮಟ್ಟದಲ್ಲೂ 5 ಅಡಿ ಏರಿಕೆ ಕಂಡುಬಂದಿದೆ. ಮತ್ತೆ ಒಳಹರಿವು ಕುಸಿತ ಕಂಡಿರುವುದರಿಂದ ನೀರಾವರಿ ಇಲಾಖೆ ಪ್ರಾಧಿಕಾರದ ಎದುರು ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ನೀರಿನ ಬೇಡಿಕೆ ಇಡಲು ಅವಕಾಶಗಳಿವೆ. ತಮಿಳುನಾಡಿಗೆ ಹರಿಸುವಷ್ಟು ನಮ್ಮಲ್ಲಿ ಸಂಗ್ರಹವಾಗಿಲ್ಲದಿದ್ದರೂ ನಮ್ಮ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುವಷ್ಟು ನೀರು ಅಣೆಕಟ್ಟೆಯಲ್ಲಿದೆ. ಅದರ ಪ್ರಾಧಿಕಾರದಿಂದ ಕೇಳಿ ಪಡೆದುಕೊಳ್ಳುವುದಕ್ಕೆ ಸರ್ಕಾರ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸದಿರುವುದರ ಹಿಂದಿನ ಮರ್ಮ ಯಾರಿಗೂ ತಿಳಿಯುತ್ತಿಲ್ಲ. ಇದು ಲೋಕಸಭಾ ಚುನಾವಣೆಯಲ್ಲಿ ಪುತ್ರನನ್ನು ಸೋಲಿಸಿದ ಜಿಲ್ಲೆಯ ಜನರ ವಿರುದ್ಧ ಸಿಎಂ ಕುಮಾರಸ್ವಾಮಿ ಸಾಧಿಸುತ್ತಿರುವ ಸೇಡಿನ ರಾಜಕಾರಣವೇ ಎಂಬ ಅನುಮಾನಗಳು ದಟ್ಟವಾಗಿ ಗೋಚರಿಸುತ್ತಿವೆ.
ಮಳೆ ಕೊರತೆ ಎಷ್ಟಿದೆ?: ಈ ವರ್ಷ ಜನವರಿಯಿಂದ ಜೂ.30ರವರೆಗೆ ಜಿಲ್ಲೆಯೊಳಗೆ 238.7 ಮಿ.ಮೀ. ವಾಡಿಕೆ ಮಳೆಗೆ 200.5 ಮಿ.ಮೀ. ಮಳೆಯಾಗಿದೆ. ಶೇ.14ರಷ್ಟು ಮಳೆ ಕೊರತೆ ಎದುರಾಗಿದೆ. ನಾಗಮಂಗಲ ಹೊರತುಪಡಿಸಿ ಉಳಿದ ತಾಲೂಕುಗಳಲ್ಲೂ ಮಳೆ ಕೊರತೆ ಇದೆ.
ಕೆ.ಆರ್.ಪೇಟೆ ತಾಲೂಕಿನಲ್ಲಿ 247.1 ಮಿ.ಮೀ. ವಾಡಿಕೆ ಮಳೆಗೆ 192.9 ಮಿ.ಮೀ. ಮಳೆಯಾಗಿದ್ದು ಶೇ.22ರಷ್ಟು ಕೊರತೆ, ಮದ್ದೂರು ತಾಲೂಕಿನಲ್ಲಿ 240.3 ಮಿ.ಮೀ. ವಾಡಿಕೆ ಮಳೆಗೆ 177.4 ಮಿ.ಮೀ.ಮಳೆಯಾಗಿದ್ದು, ಶೇ.26ರಷ್ಟು ಕೊರತೆ, ಮಳವಳ್ಳಿ ತಾಲೂಕಿನಲ್ಲಿ 250.8 ಮಿ.ಮೀ.ಗೆ 208.3 ಮಿ.ಮೀ. ಮಳೆಯಾಗಿದ್ದು ಶೇ.17ರಷ್ಟು ಕೊರತೆ, ಮಂಡ್ಯ ತಾಲೂಕಿನಲ್ಲಿ 264.2 ಮಿ.ಮೀ.ಗೆ 195.6 ಮಿ.ಮೀ. ಮಳೆಯಾಗಿ ಶೇ.26ರಷ್ಟು ಮಳೆ ಕೊರತೆಯಾಗಿದೆ.
ನಾಗಮಂಗಲ ತಾಲೂಕಿನಲ್ಲಿ 196.8 ಮಿ.ಮೀ.ವಾಡಿಕೆ ಮಳೆಗೆ 213.7 ಮಿ.ಮೀ. ಮಳೆಯಾಗಿ ಶೇ.9ರಷ್ಟು ಹೆಚ್ಚುವರಿ ಮಳೆ ಬಿದ್ದಿದೆ. ಆದರೆ, ಈ ಮಳೆ ತಾಲೂಕಿನ ಎಲ್ಲಾ ಕಡೆ ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಪಾಂಡವಪುರ ತಾಲೂಕಿನಲ್ಲಿ 230.3 ಮಿ.ಮೀ. ವಾಡಿಕೆ ಮಳೆಗೆ 213.2 ಮಿ.ಮೀ. ಮಳೆಯಾಗಿದ್ದು ಶೇ.7ರಷ್ಟು ಕೊರತೆ ಉಂಟಾಗಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ 241.6 ಮಿ.ಮೀ. ವಾಡಿಕೆ ಮಳೆಗೆ 202.7 ಮಿ.ಮೀ. ಮಳೆಯಾಗಿ ಶೇ.16ರಷ್ಟು ಮಳೆ ಕೊರತೆಯಾಗಿದೆ.
ಒಂದು ಕಟ್ಟು ನೀರಿಗೆ ಬೇಡಿಕೆ: 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 27,279 ಹೆಕ್ಟೇರ್ ಹಾಗೂ ಹಿಂಗಾರು ಹಂಗಾಮಿನಲ್ಲಿ 4598 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬಿತ್ತನೆ ಮಾಡಲಾಗಿದೆ. ಮುಂಗಾರು ಹಂಗಾಮಿನ ಕಬ್ಬಿಗೆ ಈಗ 13 ತಿಂಗಳಾಗಿದೆ. ಈಗ ಕಬ್ಬು ಕಟಾವಿಗೆ ಬರುವ ಹಂತದಲ್ಲಿದ್ದು ನೀರಿನ ಅಗತ್ಯವಿದೆ. ಕಳೆದ ವರ್ಷದಂತೆ ಪೂರ್ವ ಮುಂಗಾರು ನಿರೀಕ್ಷೆಯಂತೆ ಬಂದಿದ್ದರೆ ನೀರಿನ ಅಗತ್ಯವೇ ಇರಲಿಲ್ಲ. ಮೇ 10ರವರೆಗೆ ಕಟ್ಟುನೀರು ಪದ್ಧತಿಯಡಿ ಬೆಳೆಗಳನ್ನು ಉಳಿಸಿಕೊಂಡು ಬಂದಿದ್ದ ರೈತರು ಇದೀಗ ಇನ್ನೊಂದು ಕಟ್ಟು ನೀರು ನೀಡುವಂತೆ ಸರ್ಕಾರವನ್ನು ಅಂಗಲಾಚುತ್ತಿದ್ದಾರೆ. ಅಣೆಕಟ್ಟೆಯಲ್ಲಿರುವ 13.74 ಟಿಎಂಸಿ ನೀರಿನಲ್ಲಿ ಎರಡು ಟಿಎಂಸಿ ನೀರಿಗೆ ಬೇಡಿಕೆ ಇಟ್ಟಿದ್ದರೂ ಅದನ್ನು ನೀಡಲು ಸರ್ಕಾರ ಒಪ್ಪದೆ ಮೌನ ವಹಿಸಿದೆ.