ಮಂಡ್ಯ: ಕನ್ನಡ ಚಿತ್ರರಂಗದ ನಟ ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಫೆ.17ರಂದು ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಡಿ-25 ಬೆಳ್ಳಿ ಪರ್ವ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ತಿಳಿಸಿದರು.
ಅಭಿನಂದನಾ ಸಮಾರಂಭಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ, ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸೇರಿದಂತೆ ನಾಡಿನ ಹಲವು ಸಾಧು-ಸಂತರು, ರಾಜಕೀಯ ಗಣ್ಯರು ಆಗಮಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸಂಸದೆ ಸುಮಲತಾ ಅಂಬರೀಷ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸೇರಿದಂತೆ ಹಲವು ಸಂಗೀತ ನಿರ್ದೇಶಕರು, ಹಿನ್ನೆಲೆ ಗಾಯಕರು ಭಾಗವಹಿಸಲಿದ್ದಾರೆ. ಅಲ್ಲದೆ, ಸಮಾರಂಭಕ್ಕೆ ಚಿತ್ರರಂಗದ 50ಕ್ಕೂ ಹೆಚ್ಚು ನಟ-ನಟಿಯರು ಆಗಮಿಸುತ್ತಿದ್ದು, ಅವರೇ ಖುದ್ದು ದರ್ಶನ್ ಅಭಿನಯದ ಸಿನಿಮಾ ಹಾಡುಗಳಿಗೆ ನೃತ್ಯ ಪ್ರದರ್ಶನ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಡಲಿದ್ದಾರೆ. ಹಿನ್ನೆಲೆ ಗಾಯಕರು ಅವರ ಚಿತ್ರದ ಗೀತೆಗಳನ್ನು ಹಾಡುವ ಮೂಲಕ ರಂಜಿಸಲಿದ್ದಾರೆ ಎಂದರು.
ನಟ ದರ್ಶನ್ ಅವರು ಇದುವರೆಗೂ 56 ಚಿತ್ರಗಳು ಬಿಡುಗಡೆಯಾಗಿದ್ದು, 57ನೇ ಸಿನಿಮಾ ಡೇವಿಲ್ ಚಿತ್ರೀಕರಣ ನಡೆಯುತ್ತಿದೆ. ಡೇವಿಲ್ ನಂತರ ನಾನು ನಿರ್ಮಾಣ ಮಾಡುತ್ತಿರುವ ತರುಣ್ ಸುಧೀರ್ ನಿರ್ದೇಶನ ಹಾಗೂ ನಟ ದರ್ಶನ್ ಅಭಿನಯದ ಚಿತ್ರ ಸಟ್ಟೇರಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಶ್ರೀರಂಗಪಟ್ಟಣದ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ್, ಗ್ರಾಪಂ ಸದಸ್ಯರಾದ ಬೇವಿನಹಳ್ಳಿ ಮಹೇಶ್, ರಾಮಚಂದ್ರು, ಸಂಜು ಇದ್ದರು.