ಶ್ರೀರಂಗಪಟ್ಟಣ: ಜಿಲ್ಲೆಯೆಲ್ಲೆಡೆ ನನಗೆ ಅದ್ದೂರಿ ಸ್ವಾಗತ ನೀಡಿ ಪ್ರೀತಿ, ವಾತ್ಸಲ್ಯದಿಂದ ಬರ ಮಾಡಿಕೊಳ್ಳುತ್ತಿರುವ ಜನರ ಮೇಲೆ ನನಗೆ ಅಪಾರ ನಂಬಿಕೆ ಇದೆ ಎಂದು ಸುಮಲತಾ ಅಂಬರೀಶ್ ಹೇಳಿದರು.
ತಾಲೂಕಿನ ಕೋಡಿಶೆಟ್ಟಿಪುರ ಗ್ರಾಮದಲ್ಲಿ ನಡೆದ ಮಾರಮ್ಮ ದೇವಿ ವಿಗ್ರಹ ಹಾಗೂ ನವಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಂಡ್ಯ ಲೋಕಸಭೆ ಚುನಾವಣೆ ಸಂಬಂಧ ಜನಾಭಿಪ್ರಾಯ ಸಂಗ್ರಹ ಮಾಡಲಾಗಿದೆ. ಅಂಬರೀಶ್ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಾರದಿಂದ ಪ್ರವಾಸ ಕೈಗೊಂಡಿದ್ದೇನೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನೇರವಾಗಿ ಜನರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಮತ್ತು ಇತರ ರಾಜಕೀಯ ಮುಖಂಡರು ಈ ಹಿಂದೆ ಅಂಬರೀಶ್ ಅವರನ್ನು ಹೇಗೆ ಕಾಣುತ್ತಿದ್ದರೋ ಹಾಗೆಯೇ ನನ್ನ ಮೇಲೆಯೂ ಪ್ರೀತಿ, ವಿಶ್ವಾಸ ತೋರಿ ಸಹಕಾರ ನೀಡುತ್ತಿದ್ದಾರೆ. ಇದರಿಂದ ನನಗೆ ಸಂತೋಷದ ಜೊತೆಗೆ ಆಶಾಕಿರಣ ಸಿಕ್ಕಿದಂತಾಗಿದೆ ಹೇಳಿದರು.
ಯಾರ ಒತ್ತಡಕ್ಕೂ ಮಣಿಯಲ್ಲ: ಈಗಾಗಲೇ ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರವಾಸ ಕೈಗೊಂಡಿದ್ದೇನೆ. ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಪಕ್ಷದ ವರಿಷ್ಠರು ಏನು ಹೇಳಿದ್ದಾರೋ ಅದು ನನಗೆ ಗೊತ್ತಿಲ್ಲ. ಆದರೆ ಅಂಬರೀಶ್ ಅವರೊಂದಿಗೆ ಇದ್ದ ಕಾಂಗ್ರೆಸ್ ಮುಖಂಡರೆಲ್ಲರೂ ನನ್ನ ಜೊತೆ ಈಗಲೂ ಇದ್ದಾರೆ. ಇದರಿಂದ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ.
ಎಲ್ಲರ ಸಹಕಾರದಿಂದ ಈ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ಅವಕಾಶ ನೀಡಿ ಅವರೆಲ್ಲರೂ ನನಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಅಂಬರೀಶ್ ಆಪ್ತ ಲಿಂಗರಾಜು, ಮನ್ಮುಲ್ ನಿರ್ದೇಶಕ ಬೋರೇಗೌಡ, ಬೇಲೂರು ಸೋಮಶೇಖರ್, ಮಧು ಇತರರು ಉಪಸ್ಥಿತರಿದ್ದರು.
ಮಂಡ್ಯ ಜನರ ಭರವಸೆ ಮೇಲೆ ನಾನು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಮಂಡ್ಯ ಬಿಟ್ಟು ಬೇರೆಲ್ಲೂ ಸ್ಪರ್ಧೆ ಮಾಡಲ್ಲ. ಮಂಡ್ಯ ಜನರ ಧ್ವನಿಯಾಗಿ ಸಂಸತ್‌ನಲ್ಲಿ ಉತ್ತಮ ಕೆಲಸ ನಿರ್ವಹಿಸಿ ತೋರಿಸುತ್ತೇನೆ.
-ಸುಮಲತಾ ಅಂಬರೀಶ್