ಮಂಡ್ಯ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಈಗಾಗಲೇ ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಅದರಂತೆ ಕಾಂಗ್ರೆಸ್ ಕೂಡ ಅಭ್ಯರ್ಥಿ ಘೋಷಣೆಗೆ ಕಸರತ್ತು ನಡೆಸುತ್ತಿದ್ದು, ಐದು ಮಂದಿ ಆಕಾಂಕ್ಷಿತರ ಹೆಸರು ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿಯೇ ಅತಿ ಹೆಚ್ಚು 16 ಮಂದಿ ಆಕಾಂಕ್ಷಿತರು ಟಿಕೆಟ್ ರೇಸ್‌ನಲ್ಲಿದ್ದಾರೆ. ಎಲ್ಲರೂ ಕೆಪಿಸಿಸಿಗೆ 2 ಲಕ್ಷ ರೂ. ಠೇವಣಿ ಕಟ್ಟಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಆಕಾಂಕ್ಷಿಗಳು ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಅಭ್ಯರ್ಥಿಗಳ ಸಂದರ್ಶನ: ಕೆಪಿಸಿಸಿಯಿಂದ ವೀಕ್ಷಕರು ಆಗಮಿಸಿ, ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಸಂದರ್ಶನ ನಡೆಸಿದ್ದಾರೆ. ಅದರಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ 16 ಮಂದಿಯನ್ನು ಸಂದರ್ಶನ ನಡೆಸಿದ್ದಾರೆ. ಆಕಾಂಕ್ಷಿಗಳನ್ನು ಪ್ರತ್ಯೇಕ ಹಾಗೂ ಬೆಂಬಲಿಗರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇದರ ಸಂಪೂರ್ಣ ವರದಿಯನ್ನು ಕೆಪಿಸಿಸಿ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಐದು ಅಭ್ಯರ್ಥಿಗಳ ಹೆಸರು ಅಂತಿಮ: 16 ಮಂದಿ ಆಕಾಂಕ್ಷಿಗಳ ಪೈಕಿ ಐದು ಮಂದಿ ಆಕಾಂಕ್ಷಿತರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಐವರಲ್ಲಿ ಒಬ್ಬರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲು ಸಿದ್ಧತೆ ನಡೆದಿದೆ. ಐವರಲ್ಲಿ ಪ್ರಮುಖವಾಗಿ ಕೀಲಾರ ರಾಧಾಕೃಷ್ಣ, ರವಿ ಕುಮಾರ್ ಗಣಿಗ, ಅಮರಾವತಿ ಚಂದ್ರಶೇಖರ್, ಡಾ.ಕೃಷ್ಣ ಹಾಗೂ ಹಿರಿಯ ಮುಖಂಡ ಎಂ.ಎಸ್. ಆತ್ಮಾನಂದ ಹೆಸರು ಅಂತಿಮ ಗೊಂಡಿದೆ. ಐವರಲ್ಲಿ ಇಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಘೋಷಣೆ ಬಾಕಿ ಇದೆ ಎನ್ನಲಾಗುತ್ತಿದೆ.
ಸಕ್ರಾಂತಿ ಬಳಿಕ ಘೋಷಣೆ?: ಅಭ್ಯರ್ಥಿ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಕ್ರಾಂತಿ ಬಳಿಕ ಕಾಂಗ್ರೆಸ್‌ನಲ್ಲಿ ಚಟುವಟಿಕೆ ಬಿರುಸು ಪಡೆಯಲಿದೆ. ಈಗಾಗಲೇ ಕೆಪಿಸಿಸಿಗೆ ವರದಿ ಸಲ್ಲಿಕೆಯಾಗಿದ್ದು, ನಂತರ ವರದಿ ಹೈಕಮಾಂಡ್ ತಲುಪಲಿದೆ. ಎಲ್ಲ ಪರಿಶೀಲನೆಯ ನಂತರ ಜನವರಿ ಕೊನೆಯಲ್ಲಿ ಅಭ್ಯರ್ಥಿ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯ ಸ್ವಾಮಿ ತಿಳಿಸಿದ್ದಾರೆ. ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಕಸರತ್ತು ಜೆಡಿಎಸ್ ಪಕ್ಷ ಈಗಾಗಲೇ ಹಾಲಿ ಶಾಸಕ ಎಂ.ಶ್ರೀನಿವಾಸ್‌ಗೆ ಟಿಕೆಟ್ ಘೋಷಣೆ ಮಾಡಿದೆ. ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಸರತ್ತು ನಡೆಸಿದೆ. ಎರಡು ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಅಳೆದು ತೂಗಿ ಅಭ್ಯರ್ಥಿ ಆಯ್ಕೆಗೆ ಮುಂದಾಗಿದೆ.
ಶಾಸಕ ಎಂ.ಶ್ರೀನಿವಾಸ್ ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾಗಿದೆ. ಇಲ್ಲಿ ಕೈ-ದಳ ಮೊದಲಿನಿಂದಲೂ ಸಾಂಪ್ರದಾ ಯಿಕ ಎದುರಾಳಿಗಳಾಗಿ ಪೈಪೋಟಿ ನೀಡುತ್ತಾ ಬಂದಿವೆ. ಈ ಬಾರಿ ಜೆಡಿಎಸ್‌ನಿಂದ ಕೇಂದ್ರ ಸ್ಥಾನ ಕಸಿದುಕೊಳ್ಳಲು ಪ್ರಬಲ ಅಭ್ಯರ್ಥಿಯ ಆಯ್ಕೆ ಮಾಡಲು ಕೈ ಕಸರತ್ತು ನಡೆಸುತ್ತಿದೆ.
ಏಳು ಕ್ಷೇತ್ರಗಳಿಗೂ ಘೋಷಣೆ: ಜನವರಿ ಕೊನೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಿಗೂ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆ ಇದೆ. ಈಗಾಗಲೇ ನಾಗಮಂಗಲದಿಂದ ಚಲುವರಾಯ ಸ್ವಾಮಿ, ಮಳವಳ್ಳಿಯಿಂದ ಪಿ.ಎಂ.ನರೇಂದ್ರ ಸ್ವಾಮಿ, ಶ್ರೀರಂಗಪಟ್ಟಣದಿಂದ ರಮೇಶ್ ಬಾಬು, ಮದ್ದೂರಿನಿಂದ ಗುರುಚರಣ್ ಹೆಸರು ಅಂತಿಮಗೊಂಡಿದೆ. ಉಳಿದಂತೆ ಕೆ.ಆರ್.ಪೇಟೆ, ಮೇಲುಕೋಟೆ ಹಾಗೂ ಮಂಡ್ಯ ಕ್ಷೇತ್ರಗಳ ಹೆಸರು ಅಂತಿಮ ಹಂತದಲ್ಲಿದೆ.
-ಎಚ್.ಶಿವರಾಜು