ಮಂಡ್ಯ: ಜಿಲ್ಲೆಯಲ್ಲಿ ಚುನಾವಣೆ ಕಾವು ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿತರಲ್ಲಿ ತಳಮಳ ಶುರುವಾಗಿದೆ. ಈಗಾಗಲೇ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಕೇವಲ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಬಿಜೆಪಿ ಇನ್ನೂ ಮೊದಲ ಪಟ್ಟಿಯ ಅಂತಿಮ ಸಿದ್ಧತೆಯಲ್ಲಿ ತೊಡಗಿರುವುದರಿಂದ ಕಾಂಗ್ರೆಸ್‌ನ ನಾಲ್ಕು ಕ್ಷೇತ್ರ ಹಾಗೂ ಬಿಜೆಪಿಯ ಏಳು ಕ್ಷೇತ್ರಗಳ ಆಕಾಂಕ್ಷಿತರ ಎದೆಯಲ್ಲಿ ಭತ್ತ ಕುಟ್ಟುವ ಶಬ್ಧ ಹೆಚ್ಚತೊಡಗಿದೆ.
ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ನಾಗಮಂಗಲ, ಮಳವಳ್ಳಿ ಹಾಗೂ ಶ್ರೀರಂಗಪಟ್ಟಣದ ಮಾಜಿ ಶಾಸಕರಿಗೆ ಟಿಕೆಟ್ ಘೋಷಣೆ ಮಾಡಿದೆ. ಆದರೆ, ಮಂಡ್ಯ, ಮದ್ದೂರು, ಕೆ.ಆರ್.ಪೇಟೆ ಹಾಗೂ ಮೇಲು ಕೋಟೆ ಕ್ಷೇತ್ರಗಳ ಟಿಕೆಟ್ ಘೋಷಣೆ ಕಗ್ಗಂಟಾಗಿ ಪರಿಣಮಿಸಿರುವುದರಿಂದ ಆಕಾಂಕ್ಷಿತರು ನಿರೀಕ್ಷೆಯಲ್ಲಿ ಬಕಪಕ್ಷಿಗಳಂತೆ ಕಾಯುವಂತಾಗಿದೆ. ಇನ್ನೂ ಬಿಜೆಪಿಯಲ್ಲೂ ಅದೇ ಪರಿಸ್ಥಿತಿ ಮುಂದುವರೆದಿದೆ.
ಮಂಡ್ಯ, ಮದ್ದೂರು, ಕೆ.ಆರ್.ಪೇಟೆ ಕೈ ಟಿಕೆಟ್ ಕುತೂಹಲ: ಮಂಡ್ಯ ಹಾಗೂ ಮದ್ದೂರು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಕುತೂಹಲ ಕೆರಳಿಸಿದೆ. ಸಮಾಜ ಸೇವಕ ಕದಲೂರು ಉದಯ್ ಕಾಂಗ್ರೆಸ್ ಸೇರ್ಪಡೆಯಿಂದ ಬಹುತೇಕ ಟಿಕೆಟ್ ಸಿಗಲಿದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕದಲೂರು ಉದಯ್‌ಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಹೋದರ ಎಸ್.ಎಂ.ಶಂಕರ್ ಪುತ್ರ ಗುರುಚರಣ್ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇದರಿಂದ ಕೈ ಹೈಕಮಾಂಡ್‌ಗೆ ಒತ್ತಡ ಹೆಚ್ಚಾಗುತ್ತಿದ್ದು, ಟಿಕೆಟ್‌ಗೆ ಭಾರಿ ಲಾಬಿ ನಡೆಯುತ್ತಿದೆ. ಇನ್ನೂ ಮಂಡ್ಯ ಕ್ಷೇತ್ರದಲ್ಲೂ ಟಿಕೆಟ್‌ಗಾಗಿ ಆಕಾಂಕ್ಷಿತರು ತಮ್ಮ ನಾಯಕರ ಮೂಲಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಕೆ. ಆರ್.ಪೇಟೆಯಲ್ಲಿ ಬಿ.ಎಲ್.ದೇವರಾಜು ಅಂತಿಮ ಎನ್ನಲಾಗುತ್ತಿದ್ದರೂ, ಸಮಾಜ ಸೇವಕ ವಿಜಯ್ ರಾಮೇಗೌಡ ಕೂಡ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
ಕೊನೇ ಕ್ಷಣದಲ್ಲಿ ಘೋಷಣೆ ಸಾಧ್ಯತೆ: ಮಂಡ್ಯ ಕ್ಷೇತ್ರದಲ್ಲಿ ಮೂಲ-ವಲಸಿಗ ಎಂಬ ಪೈಪೋಟಿ ಜೋರಾ ಗಿರುವುದರಿಂದ ಕಾಂಗ್ರೆಸ್ ನಾಮಪತ್ರ ಸಲ್ಲಿಕೆಯ ಕೊನೇ ಕ್ಷಣದವರೆಗೂ ವಿಳಂಬ ಮಾಡಬಹುದು ಎನ್ನಲಾಗುತ್ತಿದೆ. ಈಗಾಗಲೇ ಹಲವಾರು ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿದ್ದು, ಭಿನ್ನಮತ, ಬಂಡಾಯ, ಬಣ ರಾಜಕೀಯ ಸೋಟವಾಗುವ ಸಾಧ್ಯತೆ ಇರುವುದರಿಂದ ಸದ್ಯಕ್ಕೆ ಮಂಡ್ಯ ಕ್ಷೇತ್ರದ ಕೈ ಅಭ್ಯರ್ಥಿ ಹೆಸರು ಘೋಷಣೆ ವಿಳಂಬವಾಗಬಹುದು. ಕಳೆದ 2018ರಲ್ಲೂ ಇದೇ ರೀತಿಯಾಗಿದ್ದು, ಕೊನೆ ದಿನ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗಿತ್ತು.ಅದು ಮತ್ತೆ ಮರುಕಳುಹಿಸಿದರೆ ಅಚ್ಚರಿಯಿಲ್ಲ.
ಬಿಜೆಪಿ ಆಕಾಂಕ್ಷಿತರಿಗೆ ಢವಢವ ಶುರು : ಜಿಲ್ಲೆಯ ಬಿಜೆಪಿ ಆಕಾಂಕ್ಷಿತರಿಗೂ ಢವಢವ ಶುರುವಾಗಿದೆ. ಈಗಾಗಲೇ ಬಿಜೆಪಿ ಒಳ ರಾಜಕೀಯ ಹಾಗೂ ಬೇರೆ ಪಕ್ಷಗಳೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದು ಆಕಾಂಕ್ಷಿತರಿಗೆ ಎದೆಬಡಿತ ಜೋರಾಗುವಂತೆ ಮಾಡಿದೆ. ಜಿಲ್ಲಾ ಬಿಜೆಪಿ ಪ್ರತೀ ಚುನಾವಣೆಯಲ್ಲಿಯೂ ಹೊರಗಿನವರಿಗೆ ಹೆಚ್ಚು ಮಣೆ ನೀಡಿದೆ. ಅಲ್ಲದೆ, ನಿರೀಕ್ಷೆ ಇಲ್ಲದ ಅಚ್ಚರಿ ಅಭ್ಯರ್ಥಿ ಘೋಷಣೆ ಮಾಡುವಲ್ಲಿಯೂ ಹೆಸರು ಪಡೆದಿದೆ. ಆದರೆ, ಈ ಬಾರಿ ಎಲ್ಲ ಕ್ಷೇತ್ರಗಳಲ್ಲೂ ಯುವ ಹಾಗೂ ಹೊಸ ಮುಖಗಳೇ ಆಕಾಂಕ್ಷಿತರಾಗಿರುವುದರಿಂದ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಅಸಮಾಧಾನದ ಬೇಗೆ ಸ್ಫೋಟಿಸುವ ಸಾಧ್ಯತೆ : ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ಅಸಮಾ ಧಾನದ ಹೊಗೆ ಸ್ಫೋಟಿಸುವ ಸಾಧ್ಯತೆ ಇದೆ. ಈಗಾಗಲೇ ಮೂಲ-ವಲಸಿಗ ಎಂಬ ಚರ್ಚೆ ಕೈನಲ್ಲಿ ನಡೆಯುತ್ತಿವೆ. ಇತ್ತ ಬಿಜೆಪಿಯಲ್ಲಿ ಯೂ ಒಳ ಒಪ್ಪಂದ ರಾಜಕಾರಣದ ಹೊಗೆ ಎದ್ದಿದೆ. ಒಂದು ವೇಳೆ ನಿರೀಕ್ಷಿತ ಅಭ್ಯರ್ಥಿಗೆ ಟಿಕೆಟ್ ಸಿಗದಿದ್ದರೆ ಕಮಲ ಪಾಳೆಯದಲ್ಲಿ ಅಸಮಾಧಾನ ಸ್ಫೋಟಿಸಲಿದೆ. ಇನ್ನೂ ಕಾಂಗ್ರೆಸ್‌ನಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಭಿನ್ನಮತದ ಬೂದಿ ಮುಚ್ಚಿದ ಕೆಂಡ ಪ್ರಜ್ವಲಿಸುವುದಂತೂ ಸತ್ಯ.
ಬಗೆಹರಿಯದ ಜೆಡಿಎಸ್ ಅಭ್ಯರ್ಥಿ ಗೊಂದಲ : ಜೆಡಿಎಸ್ ಜಿಲ್ಲೆಯ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಆದರಂತೆ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ಎಂ.ಶ್ರೀನಿವಾಸ್ ಹೆಸರು ಘೋಷಣೆ ಮಾಡಿದೆ. ಆದರೂ, ಗೊಂದಲ ಮಾತ್ರ ಇನ್ನೂ ನಿಂತಿಲ್ಲ. ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಟಿಕೆಟ್ ಪಡೆಯುವ ಪ್ರಯತ್ನ ನಿಲ್ಲಿಸಿಲ್ಲ. ಅಲ್ಲದೆ, ಪ್ರತ್ಯೇಕವಾಗಿ ಪಂಚರತ್ನ ಯೋಜನೆಗಳ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇದರಿಂದ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಹೆಚ್ಚುವಂತೆ ಮಾಡಿದೆ. ಇತ್ತ ಎಂ.ಶ್ರೀನಿವಾಸ್ ಸಹ ಟಿಕೆಟ್ ಘೋಷಣೆಯಾದ ಬಳಿಕ ಕ್ಷೇತ್ರಾದ್ಯಂತ ಸಂಚರಿಸುತ್ತಾ, ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮಗಳಲ್ಲೂ ತೊಡಗಿಕೊಂಡಿದ್ದಾರೆ. ಜೆಡಿಎಸ್ ವರಿಷ್ಠರು ಅಭ್ಯರ್ಥಿ ಬದಲಾವಣೆ ಇಲ್ಲ ಎಂದರೂ ಪಕ್ಷದಲ್ಲಿನ ಗೊಂದಲ ಮಾತ್ರ ಮುಂದುವರೆದಿದೆ. ಈಗ ಎರಡನೇ ಪಟ್ಟಿಯಲ್ಲಿ ಏನಾದರೂ ಆಗಬಹುದು ಎಂಬ ಚರ್ಚೆಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ.
ಬೆಂಗಳೂರು, ದೆಹಲಿಯಲ್ಲೂ ಬೀಡುಬಿಟ್ಟ ಆಕಾಂಕ್ಷಿತರು: ಈಗಾಗಲೇ ಕಾಂಗ್ರೆಸ್ ಹಲವು ಆಕಾಂಕ್ಷಿತರು ಹಾಗೂ ಬಿಜೆಪಿ ಆಕಾಂಕ್ಷಿತರು ಬೆಂಗಳೂರು ಹಾಗೂ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ತಮ್ಮ ನಾಯಕರ ಮೂಲಕ ಟಿಕೆಟ್‌ಗಾಗಿ ಒತ್ತಡ ಹೇರುವ ಪ್ರಯತ್ನದಲ್ಲಿದ್ದಾರೆ. ಹೆಸರು ಅಂತಿಮಗೊಳಿಸಲು ಸಭೆಗಳ ಮೇಲೆ ಸಭೆ ನಡೆಸುತ್ತಿರುವ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಕಸರತ್ತು ನಡೆಸುತ್ತಿದ್ದಾರೆ.
-ಎಚ್.ಶಿವರಾಜು