Advertisement

ಹೊಸಬರ ಅಖಾಡಕ್ಕೆ ಸಜ್ಜಾದ ಸಕ್ಕರೆ ನಾಡು

02:01 AM Apr 27, 2022 | Team Udayavani |

ಮಂಡ್ಯ: ಸಕ್ಕರೆ ನಾಡು ಮಂಡ್ಯ ರಾಜಕಾರಣವೇ ವಿಭಿನ್ನವಾಗಿದ್ದು, ದೇಶದ ರಾಜಧಾನಿ ದಿಲ್ಲಿಯಲ್ಲೂ ಸದ್ದು ಮಾಡುತ್ತದೆ. ಅದರಂತೆ ಮುಂದಿನ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸಾಕಷ್ಟು ಮಂದಿ ಹೊಸಬರ ಸ್ಪರ್ಧೆಗೆ ಅಖಾಡ ಸಿದ್ಧಗೊಳ್ಳುತ್ತಿವೆ.

Advertisement

ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಕೆ.ಆರ್‌.ಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನ ಯುವಕರ ಚಿತ್ತ ಚುನಾವಣೆಯತ್ತ ಹರಿದಿದೆ. ಕೆಲವು ಹೊಸ ಮುಖಗಳು ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಮತದಾರರ ಸೆಳೆಯಲು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಮುಖಂಡರನ್ನು ಸೆಳೆಯುವ ಯತ್ನ: ಚುನಾವಣೆಗೆ ಸಿದ್ಧಗೊಳ್ಳುತ್ತಿರುವ ಮೂರೂ ರಾಜಕೀಯ ಪಕ್ಷಗಳು ಬೇರೆ ಪಕ್ಷಗಳ ಪ್ರಭಾವಿ ಮುಖಂಡರನ್ನು ಸೆಳೆ ಯಲು ಮುಂದಾಗಿದ್ದಾರೆ. ಇದರಿಂದ ಪûಾಂತರ ಚಟುವಟಿಕೆಗಳು ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ಸದ್ದು ಮಾಡಲಿದೆ. ಈಗಾಗಲೇ ಜೆಡಿಎಸ್‌, ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ.ಎಸ್‌.ಆತ್ಮಾನಂದ ಅವರನ್ನು ಪಕ್ಷಕ್ಕೆ ಕರೆತರಲು ಸಿದ್ಧತೆ ನಡೆಸಿದೆ. ಇತ್ತ ಬಿಜೆಪಿ ಜಿಲ್ಲೆಯ ಹಿರಿಯ ರಾಜಕಾರಣಿಗಳಾದ ಕೆ.ವಿ.ಶಂಕರ ಗೌಡ ಅವರ ಮೊಮ್ಮಗ ಕೆ.ಎಸ್‌.ವಿಜಯಾನಂದ ಹಾಗೂ ದಿವಂಗತ ಎಸ್‌. ಡಿ.ಜಯರಾಂ ಪುತ್ರ ಅಶೋಕ್‌ ಜಯರಾಂ ಕರೆತರಲು ವೇದಿಕೆ ಸಿದ್ಧಗೊಳ್ಳುತ್ತಿದೆ.

ಮಂಡ್ಯ ಕ್ಷೇತ್ರಕ್ಕೆ ಬೇಡಿಕೆ: ಜಿಲ್ಲೆಯ ಕೇಂದ್ರ ಸ್ಥಾನವಾಗಿ ರುವ ಮಂಡ್ಯ ವಿಧಾನಸಭಾ ಕ್ಷೇತ್ರದ ಮೇಲೆ ಮೂರೂ ಪಕ್ಷಗಳು ಕಣ್ಣಿಟ್ಟಿವೆ. ಜೆಡಿಎಸ್‌ ಸ್ಥಾನ ಉಳಿಸಿಕೊಳ್ಳಲು ಮುಂದಾಗಿದೆ. ಇದರ ನಡುವೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸಹ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿವೆ. ಜೆಡಿಎಸ್‌ನ ಹಾಲಿ ಶಾಸಕ ಎಂ.ಶ್ರೀನಿವಾಸ್‌, ಅಳಿಯ ಎಚ್‌.ಎನ್‌.ಯೋಗೇಶ್‌, ಕೆ.ಎಸ್‌.ವಿಜಯಾನಂದ ಹಾಗೂ ಕೀಲಾರ ರಾಧಾಕೃಷ್ಣ ಆಕಾಂಕ್ಷಿಯಾಗಿದ್ದಾರೆ. ಅತ್ತ ಕಾಂಗ್ರೆಸ್‌ನಲ್ಲೂ ಗಣಿಗ ರವಿಕುಮಾರ್‌, ಡಾ| ಕೃಷ್ಣ, ಎಂ.ಎಸ್‌.ಆತ್ಮಾನಂದ, ಎಂ.ಎಸ್‌.ಚಿದಂಬರ್‌ ರೇಸ್‌ನಲ್ಲಿದ್ದಾರೆ. ಇದರ ಜತೆಗೆ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಕೂಡ ಕೇಂದ್ರ ಸ್ಥಾನಕ್ಕೆ ಬರಲು ಮುಂದಾಗಿದ್ದಾರೆಂಬ ಚರ್ಚೆಗಳು ನಡೆಯುತ್ತಿವೆ.

ಬಿಜೆಪಿಯಲ್ಲೂ ಆಕಾಂಕ್ಷಿತರಿಗೇನೂ ಕಡಿಮೆ ಇಲ್ಲ. ಕಳೆದ ಬಾರಿ ಸೋತಿದ್ದ ಚಂದಗಾಲು ಶಿವಣ್ಣ, ಅಶೋಕ್‌ ಜಯರಾಂ, ಮುಖಂಡ ಎಚ್‌.ಆರ್‌.ಅರವಿಂದ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸಿ.ಪಿ.ಉಮೇಶ್‌, ಲೋಕಸಭೆ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದ ಡಾ| ಸಿದ್ದರಾಮಯ್ಯ ಕೂಡ ಆಕಾಂಕ್ಷಿಯಾಗಿದ್ದಾರೆ.

Advertisement

ಇನ್ನುಳಿದಂತೆ ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಯಿಂದ ಇಂಡುವಾಳು ಎಸ್‌.ಸಚ್ಚಿದಾನಂದ, ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕದ ಲೂರು ಉದಯ್‌, ಬಿಜೆಪಿಯಿಂದ ಎಸ್‌. ಪಿ.ಸ್ವಾಮಿ, ಮಳವಳ್ಳಿ ಕ್ಷೇತ್ರದಿಂದ ಬಿಜೆಪಿ ಯಿಂದ ಕಲ್ಕುಣಿ ಮಹದೇವು ಪುತ್ರ ಸುಹಾಸ್‌, ಕೆ.ಆರ್‌.ಪೇಟೆ ಕ್ಷೇತ್ರದ ಜೆಡಿಎಸ್‌ನಿಂದ ಎಚ್‌.ಟಿ.ಮಂಜು, ಪಾಂಡವಪುರ ಕ್ಷೇತ್ರದ ಬಿಜೆಪಿಯಿಂದ ಡಾ| ಇಂದ್ರೇಶ್‌, ಕಾಂಗ್ರೆಸ್‌ನಿಂದ ರೇವಣ್ಣ ಚುನಾವಣೆಗಿಳಿಯಲು ಸಜ್ಜಾಗುತ್ತಿದ್ದಾರೆ.

ಕ್ಷೇತ್ರ, ಪಕ್ಷ ಬದಲಿಸಲಿದ್ದಾರಾ ನಾಯಕರು?
ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಕ್ಷೇತ್ರ ಬದಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಾಗಮಂಗಲ ಕ್ಷೇತ್ರದಿಂದ ಕೇಂದ್ರ ಸ್ಥಾನ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ. ಅತ್ತ ಸಚಿವ ಕೆ.ಸಿ.ನಾರಾಯಣ ಗೌಡ ಪಕ್ಷ ಬದಲಿಸಲಿದ್ದಾರೆ. ಕಮಲ ಬಿಟ್ಟು ಕೈ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಶಾಸಕ ಸಿ.ಎಸ್‌.ಪುಟ್ಟರಾಜು ಸಹ ಕಾಂಗ್ರೆಸ್‌ಗೆ ಹೋಗಲಿದ್ದಾರೆಂಬ ವದಂತಿಗಳು ಹರಡಿದ್ದವು. ಕೂಡಲೇ ಎಚ್ಚೆತ್ತ ಜೆಡಿಎಸ್‌ ವರಿಷ್ಠರು ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿ ಸೇರಲಿದ್ದಾರಾ ಸುಮಲತಾ, ಅಭಿಷೇಕ್‌?
ಸಂಸದೆ ಸುಮಲತಾ ಅಂಬರೀಷ್‌ ಹಾಗೂ ಪುತ್ರ ಅಭಿಷೇಕ್‌ ಬಿಜೆಪಿ ಸೇರಲಿದ್ದಾರೆಂಬ ಚರ್ಚೆಗಳು ಜಿಲ್ಲೆಯಾದ್ಯಂತ ಸದ್ದು ಮಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸ್ವತಃ ಸಂಸದೆ ಸುಮಲತಾ ಅವರೇ ಜಿಲ್ಲೆಯ ಜನ ಒಪ್ಪಬೇಕು ಎಂದಿದ್ದಾರೆ. ಅಭಿಷೇಕ್‌ರನ್ನು ಕೂಡ ಬಿಜೆಪಿಗೆ ಕರೆತರುವ ಮೂಲಕ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವ ಪ್ರಯತ್ನಗಳು ಬಿಜೆಪಿಯಲ್ಲಿ ನಡೆಯುತ್ತಿವೆ. ಆದರೆ ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next