ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಸಾಹಿತ್ಯ ಪ್ರೇಮಿಗಳಲ್ಲಿ ಸಂಭ್ರಮ ಮನೆಮಾಡಿದೆ. ಸಮ್ಮೇಳನದ ಸರ್ವಾಧ್ಯಕ್ಷರಾದ ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಅವರ ನೇತೃತ್ವದಲ್ಲಿ ಇಂದಿನಿಂದ 3 ದಿನಗಳ ಕಾಲ ನಡೆಯಲಿರುವ “ಅಕ್ಷರ ಜಾತ್ರೆ’ಗೆ ಮಂಡ್ಯ ನಗರ ಸಂಪೂರ್ಣ ಕನ್ನಡಮಯವಾಗಿ ಕಂಗೊಳಿಸುತ್ತಿದೆ.
ಶುಕ್ರವಾರ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ಸಿಗಲಿದ್ದು, ಕನ್ನಡದ ಕಣ್ವ ಬಿಎಂಶ್ರೀ, ಕವಿ ಪುತಿನ, ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎಸ್. ನರಸಿಂಹಸ್ವಾಮಿ ಅವರಂಥ ಕನ್ನಡ ಕವಿವರ್ಯರ ಬೀಡಿನಲ್ಲಿ ಕನ್ನಡಮ್ಮನ ತೇರು ಬೀದಿಬೀದಿಗಳಲ್ಲಿ ಸಾಗಲಿದೆ. ಅಸಂಖ್ಯಾತ ಕನ್ನಡ ಸಾಹಿತ್ಯಾಸಕ್ತರು ಇಂಥ ಅದ್ಭುತ ಘಳಿಗೆಗೆ ಸಾಕ್ಷಿಯಾಗಲಿದ್ದಾರೆ.
ಮೈಸೂರು- ಬೆಂಗಳೂರು ರಸ್ತೆಯ ಸ್ಯಾಂಜೋ ಆಸ್ಪತ್ರೆ ಹಿಂಭಾಗ ಭವ್ಯ ವೇದಿಕೆ ನಿರ್ಮಿಸಲಾಗಿದೆ. “ಕೆಎಸ್‌ಆರ್ ಅಣೆಕಟ್ಟೆ’ ಮಾದರಿಯ ಆಕರ್ಷಕ ಪ್ರವೇಶದ್ವಾರ ಅಣಿಯಾಗಿದೆ. ಮಹಾದ್ವಾರದ ಮುಂದೆ ಸಮಾನತೆಯ ಹರಿಕಾರ ಬಸವಣ್ಣನವರನ್ನು ನೆನೆಯುವ ಕಾರ್ಯ ಕೂಡ ನಡೆದಿದೆ.
ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮವಿದ್ದು, ಬೆಳಗ್ಗೆ 7ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಚಂದ್ರಶೇಖರ ಕಂಬಾರ ಉಪಸ್ಥಿತರಿರುವರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ “ಅರಮನೆ ದರ್ಬಾರ್ ಮಾದರಿಯ ಸಿಂಹಾಸನ’ ಒಳಗೊಂಡ ಭವ್ಯರಥ ಸಿದ್ಧವಾಗಿದೆ. 900ಕ್ಕೂ ಹೆಚ್ಚು ಮಳಿಗೆ ನಿರ್ಮಾಣ ಮಾಡಲಾಗಿದೆ. ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯನ್ನು ಕೆಂಪು ಮತ್ತು ಬಂಗಾರದ ವರ್ಣದಲ್ಲಿ ವಿನ್ಯಾಸ ಮಾಡಲಾಗಿದೆ. ಇದರಲ್ಲಿ 150ರಿಂದ 200 ಮಂದಿ ಗಣ್ಯರು ಆಸೀನರಾಗಲು ವ್ಯವಸ್ಥೆ ಮಾಡಲಾಗಿದೆ.
-ದೇವೇಶ ಸೂರಗುಪ್ಪ