Advertisement

“ಮ್ಯಾಂಡಸ್‌’ಚಂಡಮಾರುತದಿಂದ ಅಕಾಲಿಕ ಮಳೆ: ಮಾವು, ಗೇರು, ಸೇವಂತಿಗೆ ಬೆಳೆಗಾರರಿಗೆ ಆತಂಕ

08:55 PM Dec 12, 2022 | Team Udayavani |

ಕುಂದಾಪುರ: “ಮ್ಯಾಂಡಸ್‌’ ಚಂಡಮಾರುತದ ಪ್ರಭಾವದಿಂದ ಕಳೆದ ಒಂದೆರಡು ದಿನಗಳಿಂದ ವಿವಿಧೆಡೆಗಳಲ್ಲಿ ಮಳೆಯಾಗುತ್ತಿದ್ದು, ಇದು ಮಾವು, ಗೇರು, ಮಲ್ಲಿಗೆ, ಸೇವಂತಿಗೆ, ಕಲ್ಲಂಗಡಿ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

Advertisement

ಹವಾಮಾನ ವೈಪರೀತ್ಯದಿಂದಾಗಿ ಕರಾವಳಿ ಭಾಗದಲ್ಲಿ ಆಗಾಗ್ಗೆ ಅಕಾಲಿಕ ಮಳೆಯಾಗುತ್ತಿದ್ದು, ಕೆಲವು ಕೃಷಿಗೆ ಇದು ವರದಾನವಾಗಿ ಪರಿಣಮಿಸಿದರೆ, ಇನ್ನೂ ಕೆಲವು ಬೆಳೆಗಳಿಗೆ ಮಾರಕವಾಗುವ ಲಕ್ಷಣ ಗೋಚರಿಸಿದೆ. ಹಿಂಗಾರಿನ ಭತ್ತದ ಬೆಳೆ, ದ್ವಿದಳ ಧಾನ್ಯಗಳಿಗೆ ವರದಾನವಾಗಲಿದ್ದು, ನೆಲಗಡಲೆ ಕೃಷಿ ಇನ್ನಷ್ಟು ವಿಳಂಬವಾಗಲಿದೆ.

ಮಾವು, ಗೇರಿಗೆ ಕಂಟಕ
ಮಳೆಯಿಂದಾಗಿ ಪ್ರಮುಖವಾಗಿ ಮಾವು, ಗೇರು ಬೆಳೆಗೆ ತೊಂದರೆಯಾಗಲಿದೆ. ಮಾವು, ಗೇರು ಈಗ ಹೂವು ಬಿಟ್ಟು, ಕಾಯಿ ಬಿಡುವ ಹಂತವಾಗಿದ್ದು, ಕೆಲವು ಮರಗಳಲ್ಲಿ ಹೂವು ಬಿಡುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಮಳೆ ಕಡಿಮೆಯಾಗಿ ಉಷ್ಣಾಂಶ ಜಾಸ್ತಿಯಾದರೆ ಹೂವು ಕರಟಿ ಹೋಗುವ ಸಾಧ್ಯತೆಗಳು ಇದೆ. ಇದರಿಂದ ಈ ಸೀಸನ್‌ನಲ್ಲಿ ಇಳುವರಿ ಕುಸಿಯುವ ಆತಂಕವೂ ಇದೆ. ಜಿಲ್ಲೆಯಲ್ಲಿ ವಾರ್ಷಿಕ ಅಂದಾಜು 440 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಈ ಪೈಕಿ ಕಾರ್ಕಳ, ಕುಂದಾಪುರದಲ್ಲಿ ಗರಿಷ್ಠ ಪ್ರದೇಶದಲ್ಲಿ ಬೆಳೆಸಲಾಗಿದೆ. ಇನ್ನು ಜಿಲ್ಲೆಯಲ್ಲಿ 17,386 ಹೆಕ್ಟೇರ್‌ ಪ್ರದೇಶದಲ್ಲಿ ಗೇರು ಬೆಳೆಸಲಾಗಿದ್ದು, ವಾರ್ಷಿಕ ಸರಾಸರಿ 34,772 ಮೆಟ್ರಿಕ್‌ ಟನ್‌ ಗೇರು ಉತ್ಪಾದನೆಯಾಗುತ್ತಿದೆ.

ಮಲ್ಲಿಗೆ, ಸೇವಂತಿಗೆಗೂ ತೊಂದರೆ
ಹೆಮ್ಮಾಡಿ, ಕಟ್‌ಬೆಲೂ¤ರು, ಕನ್ಯಾನ ಭಾಗದಲ್ಲಿ ಮಾತ್ರ ಹೆಚ್ಚಾಗಿ ಬೆಳೆಯುವ ಹೆಮ್ಮಾಡಿ ಸೇವಂತಿಗೆಗೂ ಅಕಾಲಿಕ ಮಳೆಯಿಂದಾಗಿ ಭೀತಿ ಎದುರಾಗಿದೆ.

ಸುಮಾರು 50-60ಕ್ಕೂ ಹೆಚ್ಚು ಮಂದಿ ರೈತರು, ಅಂದಾಜು 50ಕ್ಕೂ ಮಿಕ್ಕಿ ಎಕರೆ ಪ್ರದೇಶದಲ್ಲಿ ಸೇವಂತಿಗೆ ಕೃಷಿಯನ್ನು ಮಾಡಿದ್ದಾರೆ. ಹಿಂದಿನೆರಡು ವರ್ಷಗಳಿಗಿಂತ ಈ ಸಲ ಹೆಚ್ಚು ಹೂವು ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ. ಮಲ್ಲಿಗೆ ಕೃಷಿಗೂ ಮಳೆಯಿಂದ ತೊಂದರೆಯಾಗುತ್ತಿದೆ. ಕೆಲವು ವರ್ಷಗಳಲ್ಲಿ ಮೋಡ ಹೆಚ್ಚಿದ್ದರಿಂದ ಮೊಗ್ಗುಗಳು ಕರಟಿ ಹೋಗುತ್ತಿದ್ದವು. ಈ ಬಾರಿ ಚಳಿ, ಮಳೆ ಕಾಲ-ಕಾಲಕ್ಕೆ ಬಂದಿದ್ದರಿಂದ ಒಳ್ಳೆಯ ಹವಾಮಾನವಿತ್ತು. ಆದರೆ ಮಳೆ ಬರುತ್ತಿರುವುದರಿಂದ ಈಗಿರುವ ಮೊಗ್ಗುಗಳು ಬೇಗ ಅರಳುವ ಸಾಧ್ಯತೆಯಿದೆ ಎನ್ನುತ್ತಾರೆ ಹೆಮ್ಮಾಡಿಯ ಸೇವಂತಿಗೆ ಬೆಳೆಗಾರ ಪ್ರಶಾಂತ್‌ ಭಂಡಾರಿ.

Advertisement

ಕಲ್ಲಂಗಡಿಗೂ ಕಷ್ಟ
ಉಡುಪಿ ಜಿಲ್ಲೆಯ ಬೈಂದೂರು ಹೋಬಳಿ ವ್ಯಾಪ್ತಿಯಲ್ಲಿ ಮಾತ್ರ ಹೆಚ್ಚಾಗಿ ಬೆಳೆಯುವ ಕಲ್ಲಂಗಡಿ ಬೆಳೆಗೂ ಮಳೆ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿ 107 ಹೆಕ್ಟೇರ್‌ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಬೆಳೆಯುವ ನಿರೀಕ್ಷೆ ಹೊಂದಲಾಗಿದೆ. ಮಳೆ ಬರುತ್ತಿರುವುದರಿಂದ ಗಿಡ ಬೇಗ ಬೆಳೆಯುತ್ತೆ. ಬುಡಕ್ಕೆ ನೀರು ಹೋದರೆ ಬೆಳವಣಿಗೆ ವೇಗವಾಗಿ ಬೆಳೆಯುತ್ತದೆ. ಕಾಯಿ ನಿಲ್ಲುವುದು ಕಷ್ಟವಾಗುತ್ತದೆ. ಜೋರು ಮಳೆ ಬಂದು, ಗದ್ದೆಯಲ್ಲಿ ನೀರೆಲ್ಲ ನಿಂತರೆ ಗಿಡಕ್ಕೂ ತೊಂದರೆಯಿದೆ. ಇಲ್ಲಿಗೆ ಮಳೆ ಕಡಿಮೆಯಾದರೆ ಅಡ್ಡಿಯಿಲ್ಲ. ಮುಂದುವರಿದರೆ ಕಷ್ಟವಾಗಲಿದೆ ಎನ್ನುತ್ತಾರೆ ಕಲ್ಲಂಗಡಿ ಬೆಳೆಗಾರ ನರಸಿಂಹ ದೇವಾಡಿಗ ಕಿರಿಮಂಜೇಶ್ವರ.

ಕೀಟ ಬಾಧೆ ಹೆಚ್ಚಳ ಸಾಧ್ಯತೆ
ಈಗಿನ ಮಳೆಯಿಂದಾಗಿ ತೆಂಗು, ಅಡಿಕೆಗೆ ಅಷ್ಟೇನು ತೊಂದರೆಯಿಲ್ಲ. ಆದರೆ ಹೂವು, ಕಾಯಿ ಬಿಡುವ ಬೆಳೆಗಳಾದ ಮಾವು, ಗೇರು, ಕಲ್ಲಂಗಡಿ, ಸೇವಂತಿಗೆಗೆ ಅಡ್ಡಿಯಾಗಲಿದೆ. ಇನ್ನೀಗ ಮಳೆ ಕಡಿಮೆಯಾಗಿ ಉಷ್ಣಾಂಶ ಕಡಿಮೆಯಾದರೆ ರಸ ಹೀರುವ ಬಿಳಿ ನೊಣ, ಕೆಂಪು ಜೇಡ, ಬಿಳಿ ಜೇಡದಂತಹ ಕೀಟಗಳ ಬಾಧೆ ಅಧಿಕವಾಗಲಿದೆ. ಹೂವು ಕರಟುವ ಸಾಧ್ಯತೆಗಳು ಇವೆ.
– ಡಾ| ಚೈತನ್ಯ ಎಚ್‌.ಎಸ್‌., ತೋಟಗಾರಿಕೆ ವಿಜ್ಞಾನಿ, ಕೆವಿಕೆ ಬ್ರಹ್ಮಾವರ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next